
ಬೆಂಗಳೂರು [ಜ.09]: ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸುವ ಸಂಬಂಧ ಇದೇ ತಿಂಗಳ 12 ಅಥವಾ 13ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಸಾಧ್ಯತೆಯಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ.
ಮುಖ್ಯಮಂತ್ರಿಗಳು ಇದೇ ತಿಂಗಳ 21ರಂದು ನಾಲ್ಕು ದಿನಗಳ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಹೀಗಾಗಿ, ವಿದೇಶ ಪ್ರವಾಸಕ್ಕೂ ಮೊದಲೇ ಸಂಪುಟ ವಿಸ್ತರಣೆಯಾಗುತ್ತದೆಯೊ ಅಥವಾ ನಂತರ ಆಗುತ್ತದೆಯೊ ಎಂಬುದು ಕುತೂಹಲ ಮೂಡಿಸಿದೆ.
ಸಂಪುಟ ವಿಸ್ತರಣೆ ಯಾವಾಗ? ಕೊನೆಗೂ ಬಾಯ್ಬಿಟ್ಟ ಯಡಿಯೂರಪ್ಪ...
ಕಳೆದ ತಿಂಗಳ 9ರಂದು ಉಪಚುನಾವಣೆಯ ಫಲಿತಾಂಶ ಹೊರಬಿದ್ದರೂ ಇದುವರೆಗೆ 11 ಅರ್ಹ ಶಾಸಕರು ಸಚಿವ ಸ್ಥಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಇನ್ನೇನು ಸಂಪುಟ ವಿಸ್ತರಣೆಯಾಗಿ ಸಚಿವ ಸ್ಥಾನ ಅಲಂಕರಿಸಬಹುದು ಎಂದುಕೊಳ್ಳುತ್ತಿರುವಾಗಲೇ ಧನುರ್ಮಾಸ ಎದುರಾಗಿದ್ದರಿಂದ ಅದು ಮುಗಿಯುವವರೆಗೆ ಸಂಪುಟ ವಿಸ್ತರಣೆ ಮಾಡದಿರಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದರು.
ಇದೀಗ ಬರುವ ಸಂಕ್ರಾಂತಿಗೆ ಧನುರ್ಮಾಸ ಮುಗಿಯಲಿದೆ. ಹೀಗಾಗಿ, ಸಂಕ್ರಾಂತಿ ಮುಗಿದ ಬೆನ್ನಲ್ಲೇ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯನ್ನು ಅರ್ಹ ಶಾಸಕರು ಮುಖ್ಯಮಂತ್ರಿಗಳ ಬಳಿ ಇಟ್ಟಿದ್ದಾರೆ. ಈ ನಡುವೆ ವಿದೇಶ ಪ್ರವಾಸಕ್ಕೆ ತೆರಳಬೇಕಾಗಿರುವುದರಿಂದ ಅಲ್ಲಿಂದ ವಾಪಸ್ ಬಂದ ನಂತರವೇ ವಿಸ್ತರಣೆ ಕೈಗೆತ್ತಿಕೊಳ್ಳುವುದು ಸೂಕ್ತ ಎಂಬ ಸಲಹೆಯನ್ನು ಹಲವು ಹಿರಿಯ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ.
ಹೀಗಾಗಿ, ಅಂತಿಮವಾಗಿ ಹೈಕಮಾಂಡ್ ಬಳಿ ಚರ್ಚಿಸಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಪಡಿಸುವುದಾಗಿ ಹೇಳಿರುವ ಯಡಿಯೂರಪ್ಪ ಅವರು ದೆಹಲಿಯಿಂದ ವಾಪಸಾದ ಬಳಿಕ ಸ್ಪಷ್ಟಮಾಹಿತಿ ಹೊರಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.