* ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ
* ಇದೇ ಡಿಸೆಂಬರ್ 28 ಮತ್ತು 29ರಂದು ನಡೆಯಲಿರುವ ಕೋರ್ ಕಮಿಟಿ ಸಭೆ
* ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗಿ
ಬೆಂಗಳೂರು, (ಡಿ.26): ಇದೇ ಡಿಸೆಂಬರ್ 28 ಮತ್ತು 29ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಳೆದ ಕೆಲವು ದಿನಗಳಿಂದ ಸರ್ಕಾರ ಮತ್ತು ಸಂಘಟನೆಗಳಲ್ಲಿ ನಡೆದಿರುವ ಬೆಳವಣಿಗೆ ಹಾಗೂ ಅಲ್ಲದೇ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚೆ ನಡೆಯಲಿದೆ.
ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೋ ಅಥವಾ ರಾಜೀನಾಮೆ ಪಡೆಯಬೇಕೋ ಎಂಬುದನ್ನು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
Karnataka BJP Politics: ಸಿಎಂ ಬದಲಾವಣೆ ಬಗ್ಗೆ ಕೇಂದ್ರ ಸಚಿವ ಜೋಶಿ ಹೇಳಿದ್ದಿಷ್ಟು
ಜೆಪಿ ನಡ್ಡಾ ಭಾಗಿ
ಸಾಮಾನ್ಯವಾಗಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಳ್ಳುವುದಿಲ್ಲ. ಆದರೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಾಲ್ಗೊಳ್ಳುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಈ ವೇಳೆ ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆಗೆ ಶಾಸಕರು, ಸಚಿವರು, ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
CM Bommai's Emotional Speech: ಗುಜರಾತ್ ರೀತಿಯಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಗುಸುಗುಸು
ಪ್ರಮುಖವಾಗಿ ಮುಂಬರುವ ವಿಧಾನಸಭಾ ಚುನಾವಣೆ ಕಾರ್ಯತಂತ್ರ ಹಾಗೂ ನಾಯಕತ್ವ ಬಗ್ಗೆ ಚರ್ಚೆಗಳು ನಡೆಯಲಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಹೋಗುವುದು ಎಷ್ಟು ಸೂಕ್ತ?' ಎಂಬ ಬಗ್ಗೆಯೂ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆ
ಹೌದು..ಸಿಎಂ ಬದಲಾವಣೆ ಮಾತ್ರವಲ್ಲದೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬದಲಾವಣೆ ಬಗ್ಗೆಯೂ ಚರ್ಚೆಯಾಗಲಿದೆ ಎನ್ನಲಾಗಿದೆ. ನಳೀನ್ ಕುಮಾರ್ ಕಟೀಲ್ ಅವರನ್ನು ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಕೂಡ ಜೆಪಿ ನಡ್ಡ ಮತ್ತು ಅರುಣ್ ಸಿಂಗ್ ಮಾಹಿತಿ ಸಂಗ್ರಹಿಸಲಿದ್ದಾರೆ. ನಳೀನ್ ಕುಮಾರ್ ಕಟೀಲ್ ಅವರನ್ನೇ ಮುಂದಿಟ್ಟುಕೊಂಡು 2023ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯವೇ, ಬದಲಾವಣೆ ಅಗತ್ಯ ಇದೆಯೇ? ಎನ್ನುವ ಬಗ್ಗೆ ಚರ್ಚಿಸಲಿದ್ದಾರೆ ಎನ್ನುವ ಮಾಹಿತಿ ಇದೆ.
ಅರುಣ್ ಸಿಂಗ್ ಖಡಕ್ ಸೂಚನೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಸೇರಿದಂತೆ ಸರ್ಕಾರ ಮತ್ತು ಪಕ್ಷದ ಯಾವುದೇ ಬೆಳವಣಿಗೆಗಳ ಬಗ್ಗೆ ಸಚಿವರು ಇಲ್ಲವೇ ಶಾಸಕರು ಬಹಿರಂಗ ಹೇಳಿಕೆ ನೀಡದಂತೆ ಕಡಿವಾಣ ಹಾಕಬೇಕೆಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಬಿಜೆಪಿಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಸಚಿವ ಮುರುಗೇಶ್ ನಿರಾಣಿ, ಕೆ.ಎಸ್.ಈಶ್ವರಪ್ಪ ಪ್ರತ್ಯೇಕವಾಗಿ ಸಭೆ ಸೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವ ಸಂಕ್ರಾಂತಿ ನಂತರ ಬದಲಾವಣೆಯಾಗಲಿದೆ ಎಂದು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಕೇಂದ್ರ ವರಿಷ್ಠರು ರಾಜ್ಯ ನಾಯಕರ ಬಾಯಿಗೆ ಕಡಿವಾಣ ಹಾಕಲು ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಳೀನ್‍ಕುಮಾರ್ ಕಟೀಲ್ ಜೊತೆ ದೂರವಾಣಿ ಮೂಲಕ ಚರ್ಚಿಸಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಂಬಂಧಪಟ್ಟವರನ್ನು ಹೊರತುಪಡಿಸಿ ಅನಗತ್ಯವಾಗಿ ಯಾರೊಬ್ಬರೂ ನಾಯಕತ್ವ ಬದಲಾವಣೆ ಇಲ್ಲವೇ ಸಂಪುಟ ಪುನಾರಚನೆ , ವಿಸ್ತರಣೆ ಕುರಿತಂತೆ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ಇಲ್ಲವೇ ಸಂಪುಟ ಪುನಾರಚನೆ, ಸಾಧ್ಯವಾದರೆ ವಿಸ್ತರಣೆ ಮಾಡುವ ಬಗ್ಗೆ ವರಿಷ್ಠರು ಸೂಕ್ತ ಕಾಲದಲ್ಲಿ ತೀಮಾರ್ನಿಸುತ್ತಾರೆ. ತಮಗೆ ನೀಡಿರುವ ಜವಾಬ್ದಾರಿಯನ್ನಷ್ಟೇ ನಿಭಾಯಿಸಬೇಕು, ಗೊಂದಲ ಸೃಷ್ಟಿಸುವ ಕೆಲಸ ಮಾಡಿದರೆ ಶಿಸ್ತು ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.