Breaking: ತಾಂತ್ರಿಕ ಕಾರಣ, ಸದ್ಯಕ್ಕೆ ಬಿಜೆಪಿ ಸೇರೋದಿಲ್ಲ ಸುಮಲತಾ!

By Santosh Naik  |  First Published Mar 10, 2023, 12:13 PM IST

ಸಂಸದರ ಅವಧಿ ಇನ್ನೂ ಒಂದು ವರ್ಷ ಬಾಕಿ ಇರುವ ತಾಂತ್ರಿಕ ಕಾರಣದಿಂದಾಗಿ ಸಂಸದೆ ಬಿಜೆಪಿ ಸೇರ್ಪಡೆ ಇನ್ನೂ ತಡವಾಗಲಿದೆ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಸುಮಲತಾ ತಿಳಿಸಿದ್ದಾರೆ.


ಮಂಡ್ಯ (ಮಾ.9): ತಾಂತ್ರಿಕ ಕಾರಣಗಳಿಂದಾಗಿ ಬಿಜೆಪಿಗೆ ಸಂಸದೆ ಸುಮಲತಾ ಸೇರೋದು ತಡವಾಗಲಿದೆ. ಬಿಜೆಪಿ ಸೇರ್ಪಡೆಗೆ ತಾಂತ್ರಿಕ ಅಡಚಣೆ ಆಗಿರುವ ಹಿನ್ನಲೆಯಲ್ಲಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸುಮಲತಾ ಬಿಜೆಪಿಗೆ ಬಾಹ್ಯ ಬೆಂಬಲ ನೀಡಲಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅದರೊಂದಿಗೆ ರಾಜ್ಯ ರಾಜಕೀಯ ಪ್ರವೇಶಿಸುವ ಅವರ ಹೆಜ್ಜೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಮಂಡ್ಯದಲ್ಲಿ ಸ್ಪರ್ಧೆ ಮಾಡಲಿರುವ ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಇರಲಿದೆ. ಸಂಸದರ ಸದಸ್ಯ ಅವಧಿ ಇನ್ನೂ ಒಂದು ವರ್ಷ ಬಾಕಿ ಇದೆ. ಈ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರೆ, ಕಾನೂನು ತೊಡಕು ಎದುರಾಗಲಿದೆ. ಹಾಗಾಗಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗುವ ಬದಲು ಬಾಹ್ಯ ಬೆಂಬಲ ನೀಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಕ್ಕರೆ ನಾಡು ಮಂಡ್ಯದ ರಾಜಕಾರಣದಲ್ಲಿ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರವೇ ಕಳೆದ ಕೆಲ ದಿನಗಳಿಂದ ದೊಡ್ಡ ಸುದ್ದಿಯಲ್ಲಿತ್ತು.ಅದರಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಕೂಡ ಸುಮಲತಾ ಬಿಜೆಪಿ ಸೇರ್ಪಡೆಯ ಬಗ್ಗೆ ಮಾತನಾಡಿದ್ದರು

ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಬಹುಶಃ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದ ರೀತಿ ಕಾಣುತ್ತಿದೆ. ನಿರ್ಧಾರ ಮಾಡೋಣ ಎಂದು ಹೇಳಿದ್ದರು. ಇನ್ನೊಂದೆಡೆ ಅರುಣ್‌ ಸಿಂಗ್‌ ಕೂಡ ದಿನೇ ದಿನೇ ಬಿಜೆಪಿ ಸೇರುವವರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ ಎಂದಿದ್ದರು. ಇದೆಲ್ಲದರ ನಡುವೆ ಸುಮಲತಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿತ್ತು.

ತಾಂತ್ರಿಕ ತೊಡಕು ಏನು: ಸುಮಲತಾ 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಗೆದ್ದಿದ್ದರು. ಗೆದ್ದ ಬಳಿಕ ಆರು ತಿಂಗಳಲ್ಲಿ ಬಿಜೆಪಿ ಸೇರಿದ್ದರೆ ಯಾವುದೇ ರೀತಿಯ ತೊಡಕು ಎದುರಾಗುತ್ತಿರಲಿಲ್ಲ. ಆದರೆ, ಸಂಸದರ ಅವಧಿ ಮುಕ್ತಾಯವಾಗಲು ಇನ್ನೂ ಒಂದು ವರ್ಷ ಬಾಕಿ ಇದೆ. ಈ ಹಂತದಲ್ಲಿ ಬಿಜೆಪಿಯಾಗಲಿ ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಅವರು ಅಧಿಕೃತವಾಗಿ ಸೇರಿದರೆ ಅವರ ಸಂಸದ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕಾನೂನು ಹೋರಾಟ ನಡೆಸಿದರೆ, ಅವರ ಸಂಸದ ಸ್ಥಾನವನ್ನು ಸುಪ್ರೀಂ ಕೋರ್ಟ್‌ ಅಮಾನ್ಯ ಕೂಡ ಮಾಡಬಹುದು. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳಿದ್ದಾಗ ಬೇಕಾದರೆ ಸುಮಲತಾ ಈ ನಿರ್ಧಾರವನ್ನು ಮಾಡಬಹುದು. ಆ ನಿಟ್ಟಿನಲ್ಲಿ ಯೋಚನೆ ಮಾಡಿರುವ ಸುಮಲತಾ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

Tap to resize

Latest Videos

ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?

ಸುದ್ದಿಗೋಷ್ಠಿಗೂ ಮುನ್ನ ಸುಮಲತಾ ದೇವಸ್ಥಾನ ಭೇಟಿ: ಮಾರ್ಚ್ 12 ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹೊತ್ತಿನಲ್ಲಿ ಸುಮಲತಾ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ತಾಂತ್ರಿಕ ಕಾರಣ ಅವರ ಸೇರ್ಪಡೆಗೆ ಅಡ್ಡಿಯಾಗಿದೆ. ಶುಕ್ರವಾರ ಮಂಡ್ಯದ ತಮ್ಮ ನಿವಾಸದಲ್ಲಿ ಸಂಸದೆ ಸುಮಲತಾ ಸುದ್ದಿಗೋಷ್ಠಿ ಕರೆದಿದ್ದು, ಇದೂ ಕೂಡ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಬೆಳಗ್ಗೆ ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ಸುಮಲತಾ ಮಂಡ್ಯದತ್ತ ತೆರಳಿದ್ದು, 1 ಗಂಟೆಯ ವೇಳೆಗೆ ಚಾಮುಂಡೇಶ್ವರಿ ನಗರದಲ್ಲಿರುವ ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ವರದಿಯಾಗಿದೆ.

ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಸೇರೋದು ಪಕ್ಕಾನಾ?

ಮಾರ್ಗದಲ್ಲಿ ಕಾಳಮ್ಮ ದೇವಸ್ಥಾನಕ್ಕೆ ಸುಮಲತಾ ಭೇಟಿ ನೀಡಿದ್ದರು. ಮಂಡ್ಯ ಅಧಿದೇವತೆಗೆ ಸುಮಲತಾ ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿದರು. ಕಳೆದ‌ ಲೋಕಸಭಾ ಚುನಾವಣೆ ವೇಳೆಯೂ ನಾಮಪತ್ರ ಸಲ್ಲಿಕೆ ಮುನ್ನ ದೇವಿಗೆ ಪೂಜೆ ಸಲ್ಲಿಸಿದ್ದ ಸುಮಲತಾ. ಇದೀಗ ಮಹತ್ವದ ನಿರ್ಧಾರ ಪ್ರಕಟಕ್ಕೂ ಮೊದಲು ಕಾಳಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ.

click me!