ಬರೋಬ್ಬರಿ 3 ಗಂಟೆ, 26 ಕಿ.ಮೀ ನಾನ್ ಸ್ಟಾಪ್ ರೋಡ್ ಶೋ, ಜನರ ಪ್ರತಿಕ್ರಿಯೆಗೆ ಮೋದಿ ಉತ್ಸಾಹ ಡಬಲ್!

By Suvarna NewsFirst Published May 6, 2023, 1:21 PM IST
Highlights

ಬರೋಬ್ಬರಿ 3 ಗಂಟೆ, 26 ಕಿ.ಮೀ ಕಿಲೋಮೀಟರ್ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ. ಜನರತ್ತ ಕೈಬೀಸುತ್ತ,ಜನರು ಎಸೆದ ಹೂವುಗಳನ್ನು ಮತ್ತೆ ಜನರತ್ತ ಎಸೆಯುತ್ತಾ ಮೋದಿ ಸಾಗಿಸಿದ್ದಾರೆ. ಸತತ ರೋಡ್‌ಶೋ ನಡೆಸಿದರೂ ಮೋದಿ ಉತ್ಸಾಹ ಕಡಿಮೆಯಾಗಿಲ್ಲ.

ಬೆಂಗಳೂರು(ಮೇ.06): ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಗೇರ್ ಬದಲಾಯಿಸಿದೆ. ಅಬ್ಬರದ ಪ್ರಚಾರದ ಮೂಲಕ ಬಹುತೇಕ ಭಾಗಗಳು ಕೇಸರಿಮಯವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ 26 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. ಸತತ 3 ಗಂಟೆ ತೆರೆದ ವಾಹನದಲ್ಲಿ ನಿಂತು ಮೋದಿ ರೋಡ್ ಶೋ ನಡೆಸಿದ್ದಾರೆ. ಇಳಿ ವಯಸ್ಸಿನಲ್ಲೂ ಮೋದಿ ಉತ್ಸಾಹಕ್ಕೆ ಜನರು ಭೇಷ್ ಎಂದಿದ್ದಾರೆ. 13 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಸಂಚಾರ ನಡೆಸಿದ್ದಾರೆ. ಬೆಂಗಳೂರಿನ ಮೊದಲ ಹಂತದ ಮೆಘಾ ರೋಡ್ ಶೋ ಅಂತ್ಯಗೊಂಡಿದೆ. 3 ಗಂಟೆ, 26 ಕಿಲೋಮೀಟರ್, 13 ಕ್ಷೇತ್ರದ ಇಡೀ ರಸ್ತೆ ಇದೀಗ ಹೂವಿನದಳಗಳಿಂದ ತುಂಬಿದೆ. 

ಬನ್ನೇರುಘಟ್ಟ ರಸ್ತೆಯಲ್ಲಿರುವ ಲೊಯಲಾ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಿದ ಪ್ರಧಾನಿ ಮೋದಿ ಬಳಿಕ ತೆರದ ವಾಹನ ಏರಿ ರೋಡ್ ಶೋ ಆರಂಭಿಸಿದರು. ಕೇಸರಿ ಬಣ್ಣದ ಮೈಸೂರು ಪೇಟಾ ಧರಿಸಿದ ಮೋದಿ ಮೆಘಾ ರೋಡ್ ಶೋ ಆರಂಭಗೊಂಡಿತು. ಸೋಮೇಶ್ವರ ಸಭಾ ಭನವದ ಮೂಲಕ ಮೋದಿ ರೋಡ್ ಶೋ ಆರಂಭಗೊಂಡು, ಮಲ್ಲೇಶ್ವರಂ 18ನೇ ರಸ್ತೆ ಜಂಕ್ಷನ್ ಬಳಿ ಅಂತ್ಯಗೊಂಡಿದೆ. 

ಸೋಮೇಶ್ವರ ಸಭಾ ಭವನ, ಜೆಪಿನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ವೃತ್ತ, ಮಾಧರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಮೈಸೂರು ಸಿಗ್ನಲ್, ಟೋಲ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರಮಠ ವೃತ್ತ, ಮಲ್ಲೇಶ್ವರಂ ಹಾಗೂ ಮಲ್ಲೇಶ್ವರಂ 18ನೇ ಜಂಕ್ಷನ್‌ಗೆ ಆಗಮಿಸಿತು. ಕಾಡು ಮಲ್ಲೇಶ್ವರಂ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಲು ತಯಾರಿ ನಡೆಸಲಾಗಿತ್ತು. ಆದರೆ ಸಮಯದ ಅಭಾವದಿಂದ ಮೋದಿ ನೇರವಾಗಿ ಕಾರು ಹತ್ತಿದ್ದಾರೆ. ಮೋದಿ ಬೆಂಗಳೂರಿನಿಂದ ಬಾದಾಮಿಗೆ ತೆರಳಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.  

ಪ್ರಧಾನಿ ಮೋದಿಯ ಉತ್ಸಾಹಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ. 26 ಕಿಲೋಮೀಟರ್ ನಿಂತು ಜನರತ್ತ ಕೈಬೀಸುತ್ತಾ ಸಾಗಿದ ಮೋದಿ ಎಲ್ಲಾ ಬಳಲಿಲ್ಲ. ಜನರ ಜೋಶ್ ನೋಡಿದ ಮೋದಿ ಉತ್ಸಾಹ ಇಮ್ಮಡಿಗೊಂಡಿದೆ. ಬೆಂಗಳೂರಿನಲ್ಲಿ ಮೊದಲ ಹಂತದ ರೋಡ್ ಶೋ ಮುಗಿಸಿದ ಪ್ರಧಾನಿ ಮೋದಿ ನೇರವಾಗಿ ಬಾದಾಮಿಗೆ ತೆರಳಿದ್ದಾರೆ. ಬಾದಾಮಿ ಹಾಗೂ ಹಾವೇರಿಯಲ್ಲಿ ಸಮಾವೇಶ ಮುಗಿಸಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬಳಿಕ ನಾಳೆ ಮತ್ತೆ ಬೆಂಗಳೂರಿನಲ್ಲಿ 10 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. 

ಸತತ ಪ್ರಯಾಣ, ಪ್ರಚಾರ ಸಭೆ,ರೋಡ್ ಶೋ ಮೂಲಕ ಮೋದಿ ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮೋದಿ ನೋಡಲು ಲಕ್ಷಾಂತರ ಜನ ಸೇರುತ್ತಿದ್ದಾರೆ. ಇಂದು 26 ಕಿಲೋಮೀಟರ್ ರೋಡ್ ಶೋನಲ್ಲಿ ದಾರಿಯ ಎರಡೂ ಬದಿಯಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಕಲಾ ತಂಡಗಳು, ಭಜರಂಗಿ ವೇಷಧಾರಿಗಳು, ಮುಖವಾಡ ಧರಿಸಿದ ಅಭಿಮಾನಿಗಳು ಮೋದಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ. ಪುಟ್ಟ ಕಂದಮ್ಮಗಳನ್ನು ಹಿಡಿದು ಮೋದಿಯನ್ನು ನೋಡಲು ಹಲವು ತಾಯಂದಿರು ಆಗಮಿಸಿದ್ದರು. ಗಾರ್ಡರ್ ಸಿಟಿ ಬೆಂಗಳೂರು ಇಂದಿನ ರೋಡ್‌ ಶೋದಿಂದ ಫ್ಲವರ್ ಸಿಟಿಯಾಗಿ ಬದಲಾಗಿದೆ. 

 

click me!