ಸಿಎಂ ಹುದ್ದೆ ಆಕಾಂಕ್ಷಿ ಪರಂಗೆ ಈ ಬಾರಿ ಅದೃಷ್ಟ ಒಲಿಯುತ್ತಾ?: ಠಕ್ಕರ್‌ ನೀಡಲು ಜೆಡಿಎಸ್‌, ಕಾಂಗ್ರೆಸ್‌ ತಂತ್ರ

By Kannadaprabha News  |  First Published Feb 26, 2023, 10:44 AM IST

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಾನೂ ಸಿಎಂ ಹುದ್ದೆಯ ಆಕಾಂಕ್ಷಿ ಎನ್ನುವ ಮೂಲಕ ಪಕ್ಷದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಡಾ.ಜಿ.ಪರಮೇಶ್ವರ್‌, ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ 5 ಬಾರಿ ಗೆದ್ದಿದ್ದಾರೆ. 


ಉಗಮ ಶ್ರೀನಿವಾಸ್‌

ತುಮಕೂರು (ಫೆ.26): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಾನೂ ಸಿಎಂ ಹುದ್ದೆಯ ಆಕಾಂಕ್ಷಿ ಎನ್ನುವ ಮೂಲಕ ಪಕ್ಷದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಡಾ.ಜಿ.ಪರಮೇಶ್ವರ್‌, ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ 5 ಬಾರಿ ಗೆದ್ದಿದ್ದಾರೆ. ಈಗ ಮತ್ತೊಮ್ಮೆ ಇಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಜೆಡಿಎಸ್‌ನಿಂದ ಸುಧಾಕರ ಲಾಲ್‌ ಅವರ ಹೆಸರನ್ನು ಪಕ್ಷದ ವರಿಷ್ಠರು ಈಗಾಗಲೇ ಘೋಷಿಸಿದ್ದಾರೆ. ಒಂದು ಕಾಲದಲ್ಲಿ ಇಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇರುತ್ತಿರಲಿಲ್ಲ. ಆದರೆ, ಈ ಬಾರಿ 4 ರಿಂದ 5 ಅಭ್ಯರ್ಥಿಗಳು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಎಡಗೈ ಸಮುದಾಯದ ಅನಿಲ ಕುಮಾರ್‌, ಮುನಿಯಪ್ಪ, ಡಾ.ಲಕ್ಷ್ಮೇಕಾಂತ್‌, ಗಂಗಹನುಮಯ್ಯ, ವೈ.ಎಚ್‌. ಹುಚ್ಚಯ್ಯ, ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರುಗಳು.

Latest Videos

undefined

ಸಾಮಾನ್ಯ ಕ್ಷೇತ್ರವಾಗಿದ್ದ ಕೊರಟಗೆರೆ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಮೀಸಲು ಕ್ಷೇತ್ರವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯನ್ನು ರಾಜ್ಯಕ್ಕೆ ಈ ಕ್ಷೇತ್ರ ಕೊಟ್ಟಿದೆ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ ನಡೆದ ಮೂರು ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್‌ನಿಂದ ಡಾ.ಜಿ. ಪರಮೇಶ್ವರ್‌ ಹಾಗೂ ಒಮ್ಮೆ ಜೆಡಿಎಸ್‌ನಿಂದ ಸುಧಾಕರ್‌ ಲಾಲ್‌ ಆಯ್ಕೆಯಾಗಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್‌, ಈ ಕ್ಷೇತ್ರದಲ್ಲಿ ಸೋತರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಆ ಸೋಲು ಪರಮೇಶ್ವರ್‌ಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿತು.

ಚುನಾವಣೆಗೆ ಕರೆತರುವ ಉದ್ದೇಶದಿಂದ ಮಠಾಧೀಶರ ಭೇಟಿಯಾಗಿಲ್ಲ: ಯಡಿಯೂರಪ್ಪ

ಈ ಚುನಾವಣೆಯಲ್ಲಿ ಪರಮೇಶ್ವರ್‌ ಗೆದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಡಾ.ಜಿ.ಪರಮೇಶ್ವರ್‌ಗೆ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎನ್ನುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ. ಸದಾ ಕ್ಷೇತ್ರದಲ್ಲಿ ಸಿಗುವ ಸುಧಾಕರ ಲಾಲ್‌, ಕಳೆದ ಚುನಾವಣೆಯಲ್ಲಿ ಸೋತದ್ದನ್ನೇ ಬಂಡವಾಳವಾಗಿಸಿಕೊಂಡು ಅನುಕಂಪದ ಮತಕ್ಕೆ ಕೈ ಹಾಕುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಕೇವಲ 12 ಸಾವಿರ ಮತಗಳನ್ನು ಪಡೆದಿದ್ದ ಬಿಜೆಪಿಗೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿತ್ತು. 

ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆಯಲ್ಲಿ ಬಿಜೆಪಿ ಖಾತೆ ತೆರೆದಿರಲಿಲ್ಲ. ಆದರೆ, ಕಳೆದ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ದಾಖಲೆ ನಿರ್ಮಿಸಿತ್ತು. ಅದೇ ಮಾದರಿಯಲ್ಲಿ ಕೊರಟಗೆರೆಯನ್ನು ಗೆಲ್ಲುವ ಮೂಲಕ ಖಾತೆ ತೆರೆಯುವ ಉತ್ಸಾಹದಲ್ಲಿ ಬಿಜೆಪಿಯಿದೆ. ಮೂರೂ ಪಕ್ಷಗಳು ಸಮಬಲದ ಹೋರಾಟ ನಡೆಸಲು ಸಜ್ಜಾಗಿವೆ. ಮುಖ್ಯವಾಗಿ ಪರಿಶಿಷ್ಟ ಜಾತಿ, ಒಳಪಂಗಡಗಳ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದು, ಚುನಾವಣಾ ಕಣ ರಂಗೇರುತ್ತಿದೆ.

ಕ್ಷೇತ್ರ ಹಿನ್ನೆಲೆ: ತುಮಕೂರು ತಾಲೂಕಿನ ಕೋರಾ, ಮಧುಗಿರಿ ತಾಲೂಕಿನ ಪುರವರ, ಹೊಳವನಹಳ್ಳಿ, ಚೆನ್ನರಾಯನದುರ್ಗ, ಕಸಬಾ, ಕೋಳಾಲ ಹೋಬಳಿಗಳನ್ನು ಈ ಕ್ಷೇತ್ರ ಹೊಂದಿದೆ. ಸಾಮಾನ್ಯ ಕ್ಷೇತ್ರವಾಗಿದ್ದ ಕೊರಟಗೆರೆ, 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಮೀಸಲು ಕ್ಷೇತ್ರವಾಯಿತು. ಬಳಿಕ, 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್‌ ಜಯಗಳಿಸಿದರು. 2013ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ, ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಾ.ಜಿ.ಪರಮೇಶ್ವರ್‌ ಸೋತರು. ಅವರ ವಿರುದ್ಧ ಜೆಡಿಎಸ್‌ನ ಸುಧಾಕರ ಲಾಲ್‌ ಗೆದ್ದರು. ಆದರೆ, 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್‌ ಶಾಸಕರಾಗಿ ಆಯ್ಕೆಯಾದರು.

ಬಿಜೆಪಿ ಸೇರಲು ಸ್ವಾಮೀಜಿಗಳಿಗೆ ಮುಕ್ತ ಅವಕಾಶ: ಸಚಿವ ಅಶ್ವತ್ಥ ನಾರಾಯಣ

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಸುಮಾರು 1,99,960 ಮತದಾರರಿದ್ದು, ಆ ಪೈಕಿ ಸುಮಾರು 40 ಸಾವಿರದಷ್ಟುಪರಿಶಿಷ್ಟ ಜಾತಿಯ ಮತಗಳಿವೆ. ಈ ಪೈಕಿ, ಮಾದಿಗ ಸಮುದಾಯದವರು ಅತಿ ಹೆಚ್ಚು ಮತದಾರರಿದ್ದಾರೆ. ಲಿಂಗಾಯತರು ಮತ್ತು ಒಕ್ಕಲಿಗರು ತಲಾ 30 ಸಾವಿರದಷ್ಟುಇದ್ದಾರೆ. ಕುರುಬರು 25 ಸಾವಿರ, ನಾಯಕ ಸಮುದಾಯದವರು 18 ಸಾವಿರ, ಮುಸ್ಲಿಮರು 15 ಸಾವಿರ, ಗೊಲ್ಲರು 10 ಸಾವಿರ ಮತದಾರರಿದ್ದಾರೆ.

click me!