ಜೆಡಿಎಸ್‌ಗೆ ಒಮ್ಮೆ ಪೂರ್ತಿ ಬಹುಮತದ ಅವಕಾಶ ಕೊಡಿ: ಎಚ್‌ಡಿಕೆ ಮನವಿ

Published : Apr 08, 2023, 11:50 AM IST
ಜೆಡಿಎಸ್‌ಗೆ ಒಮ್ಮೆ ಪೂರ್ತಿ ಬಹುಮತದ ಅವಕಾಶ ಕೊಡಿ: ಎಚ್‌ಡಿಕೆ  ಮನವಿ

ಸಾರಾಂಶ

ಪಂಚರತ್ನ ಯೋಜನೆಗಳ ಜಾರಿ ನನ್ನ ಕನಸು. ಜಾತಿ, ಧರ್ಮ ಮೀರಿದ ಉದಾತ್ತ ಕಾರ್ಯಕ್ರಮಗಳು ಇದರಲ್ಲಿವೆ. ಈ ಯೋಜನೆಗಳು ಜಾರಿಗೆ ಬಂದರೆ ಎಲ್ಲರ ಬದುಕು ಹಸನಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಹಾನಗಲ್ಲ (ಏ.8) : ಪಂಚರತ್ನ ಯೋಜನೆಗಳ ಜಾರಿ ನನ್ನ ಕನಸು. ಜಾತಿ, ಧರ್ಮ ಮೀರಿದ ಉದಾತ್ತ ಕಾರ್ಯಕ್ರಮಗಳು ಇದರಲ್ಲಿವೆ. ಈ ಯೋಜನೆಗಳು ಜಾರಿಗೆ ಬಂದರೆ ಎಲ್ಲರ ಬದುಕು ಹಸನಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಸೈಯದ್‌ ಸಾದತ್‌ ದರ್ಗಾ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಪಕ್ಷದ ಪಂಚರತ್ನ ರಥಯಾತ್ರೆ(Pancharatna rathayatre) ಹಾಗೂ ಮಾಜಿ ಸಚಿವ ಮನೋಹರ ತಹಶೀಲ್ದಾರ(Manohar tahsildar) ಅವರ ಜೆಡಿಎಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡತನ, ಜನರ ಸಂಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸದೃಢವಾಗುತ್ತದೆ. ಒಮ್ಮೆ ಪೂರ್ತಿ ಬಹುಮತದಿಂದ ಅವಕಾಶ ಕೊಡಿ ಎಂದು ಮನವಿ ಮಾಡಿದರು.

 

ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯ ನಂತರ ಹೆಚ್ಚಿನ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು ಹಾವೇರಿ ಜಿಲ್ಲೆಯಲ್ಲಿ. ಆ ವೇಳೆ ಹಾವೇರಿಗೆ 70ರಿಂದ 80 ರೈತ ಕುಟುಂಬಗಳನ್ನು ಕರೆಸಿ ಎಲ್ಲ ಕುಟುಂಬಗಳಿಗೆ . 75 ಲಕ್ಷ ಪರಿಹಾರವನ್ನು ಪಕ್ಷದಿಂದ ನೀಡಿದ್ದೇನೆ. ರೈತರಿಗೆ ಕೊಟ್ಟಮಾತಿನಂತೆ ಕೇವಲ 14 ತಿಂಗಳಲ್ಲಿ . 25 ಸಾವಿರ ಕೋಟಿ ಹೊಂದಿಸಿ, 26 ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಮಾಡಿದ್ದೇನೆ ಎಂದರು.

ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತಂದರೆ ನಿಮ್ಮ ಕುಟುಂಬಗಳು ಶೈಕ್ಷಣಿಕ, ಆರ್ಥಿಕವಾಗಿ ಸ್ವಾಭಿಮಾನಿ ಬದುಕು ನಡೆಸಲು ಸಾಧ್ಯವಾಗುತ್ತದೆ. ರೈತಬಂಧು ಹೆಸರಿನಲ್ಲಿ ಬಿತ್ತನೆ ಬೀಜ ಗೊಬ್ಬರಕೊಳ್ಳಲು ಪ್ರತಿ ಎಕರೆಗೆ . 10 ಸಾವಿರ ಉಚಿತವಾಗಿ ನೀಡಲಾಗುತ್ತದೆ. ಒಂದು ವರ್ಷಕ್ಕೆ 5 ಉಚಿತ ಸಿಲಿಂಡರ್‌ ರಿಫಿಲ್‌ ನೀಡಲಾಗುವುದು. ಭೂಮಿ ಇಲ್ಲದ ಕೂಲಿ ಕಾರ್ಮಿಕ ಕುಟುಂಬಕ್ಕೆ ತಿಂಗಳಿಗೆ . 2 ಸಾವಿರ ಸೇರಿದಂತೆ ಬೀದಿಬದಿ ವ್ಯಾಪಾರಿಗಳಿಗೆ, ಎಲ್ಲ ವರ್ಗದ ಜನತೆಗೆ ಈ ಯೋಜನೆಯಲ್ಲಿ ಅವಕಾಶಗಳಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಬಡವರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ. ಪ್ರಾಮಾಣಿಕವಾಗಿ ಸ್ಪಂದಿಸುವ ಮನೋಹರ ತಹಶೀಲ್ದಾರ ಅವರನ್ನು ಬೆಂಬಲಿಸುವ ಮೂಲಕ ಜೆಡಿಎಸ್‌ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ(CM Ibrahim) ಮಾತನಾಡಿ, ಬಿಜೆಪಿ-ಕಾಂಗ್ರೆಸ್‌ ಚಿಕ್ಕದೊಡ್ಡಪ್ಪನ ಮಕ್ಕಳಿದ್ದಂತೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಮನೆ-ಮನೆಗಳಿಗೆ ಜಗಳ ಹಚ್ಚುವ ಕೆಲಸದಲ್ಲಿವೆ. ಆದರೆ ಜೆಡಿಎಸ್‌ ಪಂಚರತ್ನ ಯೋಜನೆಯ ಕನಸ್ಸನ್ನು ನನಸು ಮಾಡಲು ಹೊರಟಿದೆ. ಈ ಯೊಜನೆಯಲ್ಲಿ ಎಲ್ಲ ವರ್ಗದ ಜನರ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತಹ ಕಾರ್ಯಕ್ರಮಗಳಿವೆ. 60 ವರ್ಷ ಮೀರಿದ ಹಿರಿಯರಿಗೆ . 5 ಸಾವಿರ, ವಿಧವೆಯರಿಗೆ . 2500, ಆಟೋ ಚಾಲಕರಿಗೆ . 2000 ಸಹಾಯಧನ ನೀಡಲಾಗುವುದು. ಜೆಡಿಎಸ್‌ ಅಧಿಕಾರಕ್ಕೆ ತನ್ನಿ ದೇಶಕ್ಕೆ ಒಳ್ಳೆ ಕಾಲ ಬಂದೇ ಬರುತ್ತೆ ಎಂದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ ಕಾಂಗ್ರೆಸ್‌ ಪಕ್ಷಕ್ಕೆ ವಿದಾಯ ಹೇಳಿ ಜೆಡಿಎಸ್‌ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ಅವರು, ಈ ಕ್ಷಣ ನನ್ನ ಜೀವನದ ಬದಲಾವಣೆಯ ದಿನವಾಗಿದೆ. ಕಾಂಗ್ರೆಸ್‌ ನನ್ನನ್ನು ಕಡೆಗಣಿಸಿದಾಗ ನನ್ನ ಎಲ್ಲ ಅಭಿಮಾನಿ ಬಳಗದ ಅಭಿಲಾಷೆಯಂತೆ ರೈತಪರ ಚಿಂತನೆ ಮಾಡುವ ಜೆಡಿಎಸ್‌ ಸೇರಿದ್ದೇನೆ. ಹಿಂದಿನಂತೆ ಎಲ್ಲ ಬಾಂಧವರು ನನಗೆ ಬೆಂಬಲಿದ್ದೇ ಆದಲ್ಲಿ 2023ರಲ್ಲಿ ಹಾನಗಲ್ಲಿನಲ್ಲಿ ಜೆಡಿಎಸ್‌ ಗೆದ್ದೇ ಗೆಲ್ಲುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಪಂಚರತ್ನ ಯೋಜನೆ ಮೂಲಕ ನವ ಕರ್ನಾಟಕ ಸ್ಥಾಪನೆ ಮುನ್ನುಡಿ ಬರೆಯಲಿದ್ದಾರೆ ಎಂದರು.

ಭಾವುಕರಾದ ಮನೋಹರ:

ಕಾಂಗ್ರೆಸ್ಸಿನಲ್ಲಿ ಉಸಿರುಗಟ್ಟುವ ವಾತಾವರಣದಿಂದ ಬೇಸತ್ತು, 50 ವರ್ಷ ಕಟ್ಟಿಬೆಳೆಸಿದ ಪಕ್ಷದಿಂದ ಹೊರಬಂದು ಜೆಡಿಎಸ್‌ ಕೈ ಹಿಡಿದಿದ್ದೇನೆ. ನಿಷ್ಠಾವಂತನಾಗಿ ಸಂಕಷ್ಟಗಳು ಬಂದಾಗಲೂ ಕೂಡ ಪಕ್ಷ ದ್ರೋಹ ಮಾಡದೆ ಕಾಂಗ್ರೆಸ್ಸಿನಲ್ಲಿದ್ದೆ. ಆದರೆ ಪಕ್ಷ ನನಗೆ ಮೋಸ ಮಾಡಿದೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

ಚಿತ್ರ ನಟರ ಮುಖ ತೋರಿಸಿ ಬಿಜೆಪಿ ಮತಭಿಕ್ಷೆ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ತಾಲೂಕಾಧ್ಯಕ್ಷ ಆರ್‌.ಬಿ. ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಮುಖಂಡರಾದ ಮಾರುತಿ ಪುರ್ಲಿ, ನಾಗಪ್ಪ ಸವದತ್ತಿ, ರಾಘವೇಂದ್ರ ತಹಶೀಲ್ದಾರ, ವಿನಾಯಕ ಕುರುಬರ, ಎಂ.ಕೆ. ಪಾರಗಾಂವಕರ, ರುದ್ರಪ್ಪ ಕಮ್ಮಾರ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ