
ಹುಬ್ಬಳ್ಳಿ/ಶಿವಮೊಗ್ಗ (ಏ.08): ಕಾಂಗ್ರೆಸ್ ಪಕ್ಷಕ್ಕೆ ಸುಮಾರು 60 ಕ್ಷೇತ್ರದಲ್ಲಿ ಸರಿಯಾದ ಅಭ್ಯರ್ಥಿಯೇ ಇಲ್ಲ. ಹೀಗಾಗಿ ನಮ್ಮ ಪಕ್ಷದವರಿಗೆ ಕರೆ ಮಾಡಿ ಪಕ್ಷಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ನವರು ನಮ್ಮ ಪಕ್ಷದವರಿಗೆ ಕರೆ ಮಾಡಿ, ನಿಮಗೆ ಕ್ಷೇತ್ರ ಕಾಯ್ದಿರಿಸಿದ್ದೇವೆ. ಪಕ್ಷಕ್ಕೆ ಬರುತ್ತೀರಾ? ಎಂದು ಕರೆಯುತ್ತಿದ್ದಾರೆ.
ಆದರೆ ಬಿಜೆಪಿಯಿಂದ ಯಾವೊಬ್ಬ ನಾಯಕರೂ ಕಾಂಗ್ರೆಸ್‌ಗೆ ಹೋಗಲ್ಲ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಬಹಳ ಹೀನಾಯವಾಗಿ ಸೋಲುತ್ತಾರೆ ಎಂದು ಭವಿಷ್ಯ ನುಡಿದರು. ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಎರಡ್ಮೂರು ಜನರ ಹೆಸರು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸಭೆ ಏ.8ರಂದು ನಡೆಯಲಿದ್ದು, ಇದಕ್ಕಾಗಿ ದೆಹಲಿಗೆ ತೆರಳುತ್ತಿದ್ದೇನೆ. ಆ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದರು.
ವಾಟ್ಸಾಪ್ ಗ್ರೂಪಲ್ಲಿ ಮತ ಕೇಳಿದ್ರೆ ಅಡ್ಮಿನ್ ಮೇಲೆ ಕ್ರಮ: ಚುನಾವಣಾ ಆಯೋಗ
ವರುಣ ಬಗ್ಗೆಯೂ ಚರ್ಚೆ: ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಯಾವುದೇ ತೀರ್ಮಾನ ಆಗಿಲ್ಲ. ನಾಳೆ ಎಲ್ಲ ಕ್ಷೇತ್ರಗಳ ಜೊತೆ ವರುಣ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು. ಕಾಂಗ್ರೆಸ್ ಮುಖಂಡ ನಾಗರಾಜ್ ಛಬ್ಬಿ ಬಿಜೆಪಿ ಸೇರ್ಪಡೆ ಆಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈವರೆಗೂ ತಮ್ಮನ್ನು ಸಂಪರ್ಕ ಮಾಡಿಲ್ಲ. ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.
ಅವ್ರು ಪ್ರಚಾರ ಮಾಡಿಸಿಲ್ವಾ?: ತಮಗೆ ನಟ ಸುದೀಪ್ ಬೆಂಬಲ ನೀಡಿರುವ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಬೊಮ್ಮಾಯಿ ಅವರು, ಕುಮಾರಸ್ವಾಮಿ ಹಿಂದೆ ಯಾವ ಸ್ಟಾರ್ ನಟರನ್ನು ನಿಲ್ಲಿಸಿರಲಿಲ್ವಾ? ಯಾವ ಸ್ಟಾರ್‌ಗಳಿಂದ ಚುನಾವಣೆಯಲ್ಲಿ ಪ್ರಚಾರ ಮಾಡಿಸಿರಲಿಲ್ವಾ ಎಂದು ಪ್ರಶ್ನಿಸಿದರು.
1996ರಲ್ಲಿ ರಾಮನಗರ ಉಪ ಚುನಾವಣೆಯಲ್ಲಿ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದು ಮರೆತಿದ್ದಾರಾ? ಆಗ ನಾನೇ ಅಂಬರೀಶ್ ಅವರನ್ನು ಕರೆದುಕೊಂಡು ಪ್ರಚಾರ ಮಾಡಿಸಿದ್ದೇವೆ ಎಂದ ಅವರು, ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು ಹೊಸದೇನಲ್ಲ. ಎಲ್ಲ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ. ಇದು ಇಡೀ ದೇಶದಲ್ಲಿ ನಡೆಯುತ್ತಿದೆ. ಹಾಗೆ ಕರ್ನಾಟಕದಲ್ಲೂ ಇದೆ. ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದರೆ ಇವರಿಗೇಕೆ ತಳಮಳ ಎಂದು ಪ್ರಶ್ನಿಸಿದರು. ಪ್ರತಿ ಪಕ್ಷಗಳಲ್ಲಿ ಆತಂಕ ಶುರುವಾಗಿದೆ, ಅದಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದರು.
ಕನ್ನಡ ಅಸ್ಮಿತೆ ಮುಗಿಸಲು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ
ಗೋಡೆ ಮೇಲಿನ ಬರಹದ ರೀತಿ ಅವರಿಗೆ ಸೋಲು ಕಾಣುತ್ತಿದೆ. ನಮಗೆ ಗೆಲುವಿನ ವಿಶ್ವಾಸ ಇದೆ, ಅವರಿಗೆ ಸೋಲಿನ ವಿಶ್ವಾಸ ಇದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.