ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಟ್ರೋಲ್ ಪೇಜ್ ಹಾಗೂ ವಾಟ್ಸಾಪ್ ಗ್ರೂಪ್ ಆಡ್ಮಿನ್‌ಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಚುನಾವಣೆ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಏ.08): ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಟ್ರೋಲ್ ಪೇಜ್ ಹಾಗೂ ವಾಟ್ಸಾಪ್ ಗ್ರೂಪ್ ಆಡ್ಮಿನ್‌ಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಚುನಾವಣೆ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಿಧಾನಸಭೆ ಚುನಾವಣೆ ಅಂಗವಾಗಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಬಾರಿ ಸಾಮಾಜಿಕ ಜಾಲತಾಣ ಬಳಕೆದಾರರ ಮೇಲೆ ಚುನಾವಣೆ ಆಯೋಗ ವಿಶೇಷ ನಿಗಾ ವಹಿಸುತ್ತಿದೆ. ಹೆಚ್ಚು ಬಳಕೆ ಆಗುವ ವಾಟ್ಸಾಪ್ ಗ್ರೂಪ್, ಟ್ರೋಲ್ ಪೇಜ್‌ಗಳ ಮೇಲೆ ನಿಗಾ ವಹಿಸಿ ಆಡ್ಮಿನ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಭ್ಯರ್ಥಿಗಳ ಪರವಾಗಿ ಮತ ಯಾಚನೆ, ಪ್ರಭಾವ ಬೀರುವ ಸಂದೇಶಗಳು ಬಂದಲ್ಲಿ ನೇರವಾಗಿ ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.
ಕನ್ನಡ ಅಸ್ಮಿತೆ ಮುಗಿಸಲು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ
ಆನ್‌ಲೈನ್ ಹಣ ವರ್ಗ ಮೇಲೆ ನಿಗಾ: ಗೂಗಲ್ ಪೇ, ಇನ್ನಿತರ ಇ-ಅಕೌಂಟ್‌ಗಳಿಂದ ಬೇರೆ ಬೇರೆ ಅಕೌಂಟ್‌ಗಳಿಗೆ ಹಣ ಸಂದಾಯವಾಗಿರುವ ಬಗ್ಗೆ ಪ್ರಕರಣ ದಾಖಲಾದರೆ ಆ ಬಗ್ಗೆ ತನಿಖೆ ನಡೆಸಲಾಗುವುದು. ಒಂದೇ ಅಕೌಂಟ್‌ನಿಂದ ಸುಮಾರು 50 ರಿಂದ 100 ಮಂದಿಗೆ ಪದೇ ಪದೇ ಹಣ ಪಾವತಿ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಆಯೋಗದಿಂದ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಾಹೀರಾತು ನೀಡುವ ರಾಜಕೀಯ ಪಕ್ಷ, ರಾಜಕೀಯ ವ್ಯಕ್ತಿಗಳು ಪೂರ್ವಾನುಮತಿ ಪಡೆಯಬೇಕು. ವರ್ಷವಿಡೀ ಪ್ರಕಟ ಮಾಡುವ ರಾಜಕೀಯಪ್ರೇರಿತ ಜಾಹೀರಾತಿಗೂ ಇದು ಅನ್ವಯವಾಗುತ್ತದೆ. ಈ ಜಾಹೀರಾತಿನಲ್ಲಿ ವೈಯಕ್ತಿಕ ನಿಂದನೆ, ಜಾತಿ, ಧರ್ಮ ಸೂಚಿಸುವ ಯಾವುದೇ ಉಲ್ಲೇಖವಿರಬಾರದು. ನಾಮಪತ್ರ ಸಲ್ಲಿಕೆ ಆರಂಭವಾದ ಮೇಲೆ ವೆಚ್ಚವನ್ನು ಪರಿಗಣಿಸಲಾಗುತ್ತದೆ. ಅಭ್ಯರ್ಥಿ ಪರ ಅಥವಾ ವಿರುದ್ಧವಾಗಿ ಪ್ರಕಟವಾಗುವ ಸುದ್ದಿಗಳನ್ನು ಸುಳ್ಳು ಸುದ್ದಿ ಎಂದು ಪರಿಗಣಿಸಲಾಗುವುದು ಎಂದರು.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ವಿಧಾನಸಭಾ ಚುನಾವಣಾ ಮಾಹಿತಿ ಪ್ರಕಟಿಸುವ ವೇಳೆ ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವುದರ ಜತೆಗೆ, ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದ್ದಾರೆ. ಹಾಗೆಯೇ, ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟ ಮಾಡುವ ಮುನ್ನ ಎಂಸಿ ಅಂಡ್ ಎ ಕಮಿಟಿಯ ಪೂರ್ವ ಪ್ರಮಾಣೀಕರಣ ಪಡೆದಿರಬೇಕು. ಮುದ್ರಣ ಮಾಧ್ಯಮಕ್ಕೆ ಮತದಾನದ ಮುಂಚಿನ 48 ಗಂಟೆಗಳವರೆಗೆ ಅನ್ವಯವಾಗಲಿದೆ. ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ಗೆ ಸೇರಿದ್ದೆಂದು ಹೇಳಲಾದ ಬೆಳ್ಳಿ ಸಾಮಗ್ರಿ ವಶ
ಈ ವೇಳೆ ಬಿಬಿಎಂಪಿಯ ಆರ್‌ಆರ್‌ನಗರ ಜಂಟಿ ಆಯುಕ್ತ ಡಾ.ನಾಗರಾಜ್, ಎಂಸಿಎಂಸಿ ತರಬೇತುದಾರ ಮೋಹನ್ ಕುಮಾರ್ ಸೇರಿದಂತೆ ಮೊದಲಾದವರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.