
ಕಾರ್ಕಳ (ಆ.31): ರಾಜ್ಯ ಕಾಂಗ್ರೆಸ್ ಸರ್ಕಾರ ಚಂಬಲ್ ಕಣಿವೆಯ ದರೋಡೆಕೋರರನ್ನು ಮೀರಿಸುವಂತೆ ಜನಸಾಮಾನ್ಯರ ಸುಲಿಗೆಗೆ ಮುಂದಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಟಣೆ ನೀಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್, ಪಾರ್ಕಿಂಗ್ ಟ್ಯಾಕ್ಸ್, ನೀರಿನ ದರ ಹೆಚ್ಚಳ ಸೇರಿದಂತೆ ಹಲವಾರು ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ‘ತೆರಿಗೆ ಭಯೋತ್ಪಾದನೆ’ ನಡೆಸುತ್ತಿದೆ ಎಂದು ಆರೋಪಿಸಿದರು. ಗಣೇಶ ಹಬ್ಬದ ಸಂಭ್ರಮದ ಮರುದಿನವೇ ದಸ್ತಾವೇಜುಗಳ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಶೇ.1ರಿಂದ 2ಕ್ಕೆ ಏರಿಸಲಾಗಿದ್ದು, ಸೋಮವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಪಿಜಿ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನೂ ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರದ ದರ ಏರಿಕೆಯ ಬರೆ ಜನರ ಮೇಲೆ ಬಿದ್ದಿರುವುದಕ್ಕೆ ಮತ್ತೊಂದು ಸಾಕ್ಷಿ ಎಂದು ಸುನಿಲ್ ಕುಮಾರ್ ಹೇಳಿದರು. ಅಭಿವೃದ್ಧಿ ವಿಚಾರ ರಾಜ್ಯದಲ್ಲಿ ಸತ್ತೇ ಹೋಗಿದ್ದು, ಕಾಂಗ್ರೆಸ್ ಸರ್ಕಾರ ಸಲ್ಲದ ವಿಚಾರಗಳಲ್ಲಿ ಜನರ ಗಮನ ಹರಿಸುವ ಕೆಲಸದಲ್ಲಿ ನಿರತರಾಗಿದೆ ಎಂದು ಟೀಕಿಸಿದರು. ಧರ್ಮಸ್ಥಳದ ವಿರುದ್ಧ ಎಡಪಂಥೀಯರು ನಡೆಸಿದ ಷಡ್ಯಂತ್ರ ಹಾಗೂ ಮೈಸೂರು ದಸರಾ ಉದ್ಘಾಟನೆಗೆ ಅನ್ಯಮತೀಯರಿಗೆ ಆಹ್ವಾನ ನೀಡಿದಂತಹ ವಿಷಯಗಳನ್ನು ಮುಂದಿಟ್ಟು ಜನಸಮಸ್ಯೆಗಳನ್ನು ಹತ್ತಿಕ್ಕುವ ಕೆಲಸವೇ ಸಿದ್ದರಾಮಯ್ಯ ಸರ್ಕಾರದ ನಿತ್ಯಕಾಯಕ ಎಂದು ಅವರು ವಾಗ್ದಾಳಿ ನಡೆಸಿದರು.
ಸತ್ಯ ಹೇಳಿದ ಸಚಿವರಿಂದ ರಾಜೀನಾಮೆ: ಮತಗಳ್ಳತನ ಕುರಿತು ರಾಹುಲ್ ಗಾಂಧಿ ಮಾಡಿದ್ದ ಆರೋಪದ ವಿಚಾರಕ್ಕೆ ಸಂಬಂಧಿಸಿ ಸಚಿವ ಕೆ.ಎನ್. ರಾಜಣ್ಣ ಅವರು ‘ನಮ್ಮ ಕಾಲದಲ್ಲೇ ಮತಪಟ್ಟಿ ಪರಿಷ್ಕರಣೆ ನಡೆದಿತ್ತು’ ಎಂದು ಸತ್ಯ ಹೇಳಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹೈಕಮಾಂಡ್ ಅವರ ಮೇಲೆ ಒತ್ತಡ ಹೇರಿದ ಪರಿಣಾಮ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ವಿ.ಸುನೀಲ್ ಕುಮಾರ್, ಸತ್ಯಮೇವ ಜಯತೆ ಎಂದು ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುವ ಪಕ್ಷದಲ್ಲಿ ಸತ್ಯಕ್ಕೆ ಬೆಲೆ ಇಲ್ಲ ಎಂಬುದು ಇತ್ತೀಚಿನ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಸತ್ಯವನ್ನು ಒಪ್ಪಿಕೊಂಡ ಸಚಿವನನ್ನು ವಜಾಗೊಳಿಸುವುದು ಕಾಂಗ್ರೆಸ್‌ನ ನೈತಿಕ ದಿವಾಳಿತನದ ಉದಾಹರಣೆ ಎಂದು ಟೀಕಿಸಿದ್ದಾರೆ. ಸತ್ಯ ಹೇಳಿದ ಕಾರಣಕ್ಕೆ ಸಚಿವ ಸ್ಥಾನ ಕಳೆದುಕೊಳ್ಳಬೇಕಾದರೆ, ಅದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ. ಜನರಿಗೆ ನಿಖರವಾದ ಮಾಹಿತಿ ನೀಡಿದವರನ್ನು ಗೌರವಿಸುವ ಬದಲು, ಅವರನ್ನು ರಾಜಕೀಯ ಬಲಿಯಾಡು ಮಾಡುವ ಪದ್ಧತಿ ದುರ್ಭಾಗ್ಯಕರ. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರಾಜಣ್ಣ ಅವರ ರಾಜೀನಾಮೆ ಕಾಂಗ್ರೆಸ್ ಒಳ ಗೊಂದಲಕ್ಕೆ ಹೊಸ ಬಣ್ಣ ತುಂಬಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.