
ಕಾಗವಾಡ(ಅ.03): ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಣಗಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದ್ದು, ಆಡಳಿತ ಪಕ್ಷದ ಹಿರಿಯ ಶಾಸಕರೊಬ್ಬರು ತಮ್ಮ ಹಾಗೂ ಸರ್ಕಾರದ ವೈಫಲ್ಯವನ್ನು ಬಹಿರಂಗವಾಗಿಯೇ ಒಪ್ಪಿಕೊಂಡರು. ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ, ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ತಿಳಿಸಿದರು.
ಉಗಾರ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸುಲಲಿತವಾಗಿ ನಡೆಯಬೇಕಾದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಟ್ಟಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೇ ದೇಶ ಕಟ್ಟಲು ಸಾಧ್ಯ. ಆದರೆ, ಇಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ನಡುವೆ ತಾಳಮೇಳ ಇಲ್ಲದಂತಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಯಾರೊಬ್ಬರು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಬಡ ಜನತೆಗೆ ನ್ಯಾಯ ಸಿಗಲು ಸಾಧ್ಯ ಎಂದರು.
ಬಿಜೆಪಿ- ಜೆಡಿಎಸ್ ಮೈತ್ರಿ: ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣ, ಲಕ್ಷ್ಮಣ ಸವದಿ
ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆಗಳಲ್ಲಿ ಕೇವಲ ಮೂರ್ನಾಲ್ಕು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೊದಲೇ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಸ್ಥಿತಿ ಅಯೋಮಯವಾಗಿದೆ. ಸರ್ಕಾರ ಇತ್ತ ಗಮನ ಹರಿಸಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ರೈತರು ಟಿಸಿ ಅಳವಡಿಸಬೇಕಾದರೆ ₹5 ರಿಂದ 6 ಲಕ್ಷಗಳ ವೆಚ್ಚವನ್ನು ಹೆಸ್ಕಾಂನವರು ವಿಧಿಸುತ್ತಾರೆ. ಅಷ್ಟು ಹಣ ರೈತರ ಬಳಿ ಇದ್ದಿದ್ದರೆ ಅವರೇಕೆ ಕೃಷಿ ಕಾಯಕ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಎಸ್ಟಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬಳು ಹಿಟ್ಟಿನ ಗಿರಣಿಗಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಎದುರಿಸುತ್ತಿರುವ ಸಮಸ್ಯೆಯನ್ನು ಮಾಧ್ಯಮದವರ ಎದುರು ಬಿಚ್ಚಿಟ್ಟರು. ಹಿಟ್ಟಿನ ಗಿರಣಿಯ ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂನವರು ₹45 ಸಾವಿರ ಖರ್ಚು ಹೇಳುತ್ತಾರೆ. ಆ ಬಡ ಮಹಿಳೆ ದುಡ್ಡು ಎಲ್ಲಿಂದ ತರಬೇಕು? ಈ ಬಗ್ಗೆ ಮುಖ್ಯಮಂತ್ರಿಗಳು ಏಕೆ ಗಮನ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ
ಎಲ್ಲರದ್ದೂ ತಪ್ಪಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಾಮಾಜಿಕ ನ್ಯಾಯ ಕೊಡಲು ಆಗುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದರೆ ಮಾತ್ರ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.