
ಮಂಡ್ಯ(ಜ.12): ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ನಿರ್ದಿಷ್ಟ ಪ್ರಣಾಳಿಕೆ ಹೊಂದಿರುವ, ನನ್ನ ಬೆಂಬಲಿಗರು, ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಹೋಗುವ ಹಾಗೂ ನಾನು ಮಾಡುವ ಕೆಲಸವನ್ನು ಗೌರವದಿಂದ ಸ್ವಾಗತಿಸುವ ಪಕ್ಷವನ್ನು ಸೇರುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಗೌರವವಿಲ್ಲದಿರುವ ಕಡೆ ನಾನು ಹೋಗುವುದೂ ಇಲ್ಲ, ಆ ಪಕ್ಷವನ್ನು ಸೇರುವುದೂ ಇಲ್ಲ. ಈ ಪಕ್ಷ ಸೇರುವುದರಿಂದ ನನಗೇನೋ ಒಳ್ಳೆಯದಾಗುತ್ತದೆ ಎಂದಷ್ಟೇ ಭಾವಿಸುವುದಿಲ್ಲ. ನನ್ನನ್ನೇ ನಂಬಿರುವ ಅಭಿಮಾನಿಗಳು, ಕಾರ್ಯಕರ್ತರಿಗೂ ಒಳ್ಳೆಯ ಸ್ಥಾನ, ಗೌರವ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಪ್ರತಿನಿಧಿಸುವ ಜಿಲ್ಲೆಗೆ ಏನು ಮಾಡುವಿರಿ ಎಂದು ಖಚಿತ ಭರವಸೆ ಕೊಡಬೇಕು. ಸುಳ್ಳು ಆಶ್ವಾಸನೆ ಕೊಟ್ಟು ನನ್ನನ್ನು ಮತ್ತು ಜನರನ್ನು ವಂಚಿಸಬಾರದು ಎಂದು ಹೇಳಿದರು.
Karnataka Politics : ಬಿಜೆಪಿಗೆ ಎಸ್‌ಎಂ ಕೃಷ್ಣ ಆಶೀರ್ವಾದ
ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ನನ್ನನ್ನು ಬೆಂಬಲಿಸಿದ್ದು ಎಲ್ಲರಿಗೂ ಗೊತ್ತಿರುವ ಬಹಿರಂಗ ವಿಚಾರ. ಆ ಪಕ್ಷ ನನ್ನನ್ನು ಬೆಂಬಲಿಸುವಾಗ ನನ್ನೆದುರು ಯಾವುದೇ ಷರತ್ತನ್ನು ಇಟ್ಟಿರಲಿಲ್ಲ. ಗೆದ್ದ ಮೇಲೆ ನಮ್ಮ ಪಕ್ಷವನ್ನು ಸೇರಲೇಬೇಕೆಂದು ಒತ್ತಡವನ್ನೂ ಹೇರಿರಲಿಲ್ಲ. ನನ್ನ ಬೆಂಬಲಿಗರಿಗೆ, ಚುನಾವಣೆಯಲ್ಲಿ ನನ್ನ ಪರವಾಗಿ ನಿಂತವರಿಗೆ ಅನುಕೂಲ ಮಾಡಿಕೊಡುವಂತೆ ನಾನು ಯಾವ ಪಕ್ಷದವರನ್ನೂ ಕೇಳಿಲ್ಲ. ಈ ವಿಚಾರವಾಗಿ ತಾಯಿ ಚಾಮುಂಡೇಶ್ವರಿ ಮೇಲೆ ಸತ್ಯ ಮಾಡಿ ಹೇಳುತ್ತೇನೆ ಎಂದರು.
ಒಂದು ಪಕ್ಷ ಸೇರುವುದರಿಂದ ಕೇವಲ ನನಗಷ್ಟೇ ಒಳ್ಳೆಯದಾಗಬೇಕೆಂದು ಬಯಸುವವಳು ನಾನಲ್ಲ. ನನ್ನನ್ನು ನಂಬಿದವರಿಗೆ ಮೋಸ ಮಾಡುವುದಿಲ್ಲ. ಅಂಬರೀಶ್ ಬದುಕಿದ್ದಾಗ ನಾನು ರಾಜಕೀಯಕ್ಕೆ ಬರುತ್ತೇನೆಂದು ಭಾವಿಸಿರಲಿಲ್ಲ. ಅವರೂ ನನ್ನ ಕುಟುಂಬದಿಂದ ಯಾರೂ ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದರು. ಆದರೆ, ಜನರ ಪ್ರೀತಿ ನನ್ನನ್ನು ರಾಜಕೀಯಕ್ಕೆ ಕರೆತಂದಿತು. ಈಗ ಅವರ ಋುಣ ತೀರಿಸಬೇಕಿರುವುದು ನಮ್ಮ ಕರ್ತವ್ಯವಲ್ಲವೇ ಎಂದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವುದು ಸೂಕ್ತ. ಕೆಲವರು ಕಾವೇರಿ ಹೆಸರು ಇಡಬೇಕೆಂದು ಪ್ರಸ್ತಾವನೆ ಇಟ್ಟಿದ್ದಾರೆ. ಅದು ಅವರ ಅಭಿಪ್ರಾಯ ಎಂದು ಪ್ರತಿಕ್ರಿಯಿಸಿದರು.
ಮಗನಿಗೆ ಟಿಕೆಟ್ ಕೇಳೂ ಇಲ್ಲ, ಅವನೂ ಆಸೆಪಟ್ಟಿಲ್ಲ
ಕಾಂಗ್ರೆಸ್-ಬಿಜೆಪಿಯ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ. ಮನೆಗೆ ಬಂದೂ ಮಾತನಾಡಿದ್ದಾರೆ. ನಿಮ್ಮ ಜೊತೆಗೆ ನಿಮ್ಮ ಮಗನಿಗೂ ಟಿಕೆಟ್ ಕೊಡುತ್ತೇವೆ ಎಂದು ಆಫರ್ ನೀಡಿದ್ದಾರೆ. ಆದರೆ, ನಾನು ಟಿಕೆಟ್ ವಿಚಾರವಾಗಿ ಯಾವುದೇ ಡಿಮಾಂಡ್ ಇಟ್ಟಿಲ್ಲ. ನನ್ನ ಮಗನೂ ಇಟ್ಟಿಲ್ಲ. ಟಿಕೆಟ್‌ಗಾಗಿ ಅವನು ಆಸೆಪಟ್ಟಿಯೂ ಇಲ್ಲ. ಸಮಯ ಬಂದಾಗ ನೋಡಿಕೊಳ್ಳೋಣ. ಮುಖ್ಯವಾಗಿ ನನ್ನ ಕ್ಷೇತ್ರಕ್ಕೆ ಏನು ಕೊಡುತ್ತೀರಾ. ನಾನು ನಿಮ್ಮ ಪಕ್ಷ ಸೇರಿದರೆ ಜನಪರವಾಗಿ ಏನು ಮಾಡುತ್ತೀರಾ ಎಂಬ ಬಗ್ಗೆ ಖಚಿತ ಭರವಸೆ ಕೊಡಿ. ಆಗ ನಾನು ನಿಮ್ಮ ಪಕ್ಷ ಸೇರುತ್ತೇನೆ ಎಂದಿದ್ದೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.