ಬಿಜೆಪಿ 70 ಸ್ಥಾನದಲ್ಲಷ್ಟೇ ಗೆಲ್ಲೋದು: ಸಿ.ಎಂ.ಇಬ್ರಾಹಿಂ

Published : Feb 27, 2023, 11:59 AM IST
ಬಿಜೆಪಿ 70 ಸ್ಥಾನದಲ್ಲಷ್ಟೇ ಗೆಲ್ಲೋದು: ಸಿ.ಎಂ.ಇಬ್ರಾಹಿಂ

ಸಾರಾಂಶ

ಮುಂಬರುವ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನದಲ್ಲಿಷ್ಟೇ ಗೆಲ್ಲಲು ಸಾಧ್ಯ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದರು.

ಪಾಂಡವಪುರ (ಫೆ.27): ಮುಂಬರುವ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನದಲ್ಲಿಷ್ಟೇ ಗೆಲ್ಲಲು ಸಾಧ್ಯ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರ ಮತ ಪಡೆದು ಅಧಿಕಾರ ನಡೆಸಿದ ಬಿಜೆಪಿ ಪಂಚಮಸಾಲಿಗಳನ್ನು ಬೀದಿಗೆ ತಂದರು. ಬೇಡ, ಜಂಗಮ ಅವರ ಕಡೆ ತಿರುಗಿಯೂ ನೋಡುತ್ತಿಲ್ಲ. ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪ ಅವರನ್ನು ಶಾಶ್ವತವಾಗಿ ಕೂರಿಸಿದರು. ವಿದಾಯ ಹೇಳಿದ ಬಳಿಕ ಲಿಂಗಾಯತರ ಬೆಂಬಲವನ್ನು ಯಡಿಯೂರಪ್ಪ ಕೇಳುತ್ತಿದ್ದಾರೆ. ಈ ಬಾರಿ ರಾಜ್ಯದ ಲಿಂಗಾಯತರು ಜೆಡಿಎಸ್‌ ಪರವಾಗಿದ್ದಾರೆ ಎಂದರು.

ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಿದ ನಂತರ ಜೆಡಿಎಸ್‌ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಅವರು ಏನು ಮಾಡುತ್ತಾರೆ ಎನ್ನುವುದನ್ನು ನೋಡಿಕೊಂಡು ನಮ್ಮ ಪಟ್ಟಿಯನ್ನು ರಿಲೀಸ್‌ ಮಾಡುವುದಾಗಿ ಹೇಳಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಚನ್‌ ಕ್ಯಾಬಿನೆಟ್‌ ಹೇಳಿಕೆ ವಿಚಾರವಾಗಿ ಪ್ರಶ್ನಿಸಿದಾಗ, ಸಿ.ಟಿ.ರವಿ ಅವರನ್ನು ಆರ್‌ಎಸ್‌ಎಸ್‌ ಯಾವ ಕ್ಯಾಬಿನೆಟ್‌ನಲ್ಲಿ ಇಟ್ಟಿದ್ದಾರೆ ಗೊತ್ತಾ. ಆರ್‌ಎಸ್‌ಎಸ್‌ನವರು ರವಿಗೆ ಅವಕಾಶವನ್ನೇ ನೀಡುತ್ತಿಲ್ಲ. ಸ್ಮಾರ್ಥ ಬ್ರಾಹ್ಮಣರಿಗೆ ಒಳಗಡೆ ಬಿಡುತ್ತಿಲ್ಲ ಇನ್ನು ಗೌಡರಿಗೆ ಬಿಡುತ್ತಾರಾ. ಸುಮ್ನೆ ಗೂಬೆ ಹಾಕಲು ರವಿಯನ್ನು ಇಟ್ಟುಕೊಂಡಿದ್ದಾರೆ. ರೈತರ ಮಕ್ಕಳಿಗೆ ಮರ್ಯಾದೆ ಕೊಡೋದು ಜೆಡಿಎಸ್‌ ಪಕ್ಷದಲ್ಲಿ ಮಾತ್ರ. ಸ್ವಾಭಿಮಾನ ಇಲ್ಲದವರು ನೀವು. ಕಂಡವರ ಮನೆಯಲ್ಲಿ ಕೆಲಸ ಮಾಡಲು ಹೋಗಿದ್ದೀರಿ ಎಂದು ಸಿ.ಟಿ.ರವಿ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ: ಸಚಿವ ಅಶೋಕ್‌ ವ್ಯಂಗ್ಯ

ರಾಜಕಾರಣಿಗಳ ಕೆಲಸ ಧರ್ಮದ ಬಗ್ಗೆ ವಿಮರ್ಶೆ ಮಾಡುವುದಲ್ಲ. ಬಡವರ ಪರ ಮತ್ತು ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಬಿಜೆಪಿಯವರಿಗೆ ಈ ಬಾರಿ ಹೀನಾಯ ಸೋಲಾಗುವುದು ಖಚಿತ ಎಂದು ಖಡಕ್ಕಾಗಿ ಹೇಳಿದರು. ಮಠಾಧಿಪತಿಗಳು ಧರ್ಮರಕ್ಷಕರು. ಅವರು ಗುರಿ ತೋರಿಸಬಹುದು. ಸಲಹೆ ಕೊಡಬಹುದು. ಆದರೆ, ಅವರೇ ನೇರವಾಗಿ ರಾಜಕೀಯ ಮಾಡಬಾರದು. ಅವರು ರಾಜಕೀಯಕ್ಕೆ ಬರುವುದು ಮಠದ ಸಂಸ್ಕೃತಿಗೆ ಅವಮಾನ ಮಾಡಿದಂತೆ. ಯಾವ ಮಠಾಧೀಶರು ರಾಜಕೀಯಕ್ಕೆ ಬರುವುದಿಲ್ಲ. ಬಿಜೆಪಿ ಅವರೇ ವೇಷ ಹಾಕಿಸಿ ಡೂಪ್ಲಿಕೇಟ್‌ ಸ್ವಾಮೀಜಿಯನ್ನು ಕರೆ ತರಬಹುದು. ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಮದುವೆ ಆಗಿದ್ದರೆ ಬೆಲೆ ಏರಿಕೆ ಬಿಸಿ ತಟ್ಟುತ್ತಿತ್ತು. ಹೆಂಡತಿ ಮಕ್ಕಳು ಇಲ್ಲದವರ ಕೈಗೆ ದೇಶ ಕೊಟ್ಟರೆ ಬೆಲೆ ಏರಿಕೆ ಆಗದೆ ಇನ್ನೇನಾಗುತ್ತೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕುರಿತು ವ್ಯಂಗ್ಯವಾಡಿದರು.

ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ: ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಜೆಡಿಎಸ್‌ಗೆ ಮಾತ್ರ. ಕಾಂಗ್ರೆಸ್‌ನಿಂದ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಸೋಲಿಸಲು ಆಗುವುದಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ತಾಲೂಕಿನ ಹರಳಹಳ್ಳಿಯ ಬಳಿಯ ಜಾಮಿಯ ಫೈಸುಲ್ ರಸೂಲ್ ಸುನ್ನಿ ಎಜುಕೇಷನ್‌ ಟ್ರಸ್ವ್‌ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಜೆಡಿಎಸ್‌ ಅಲ್ಪ ಸಂಖ್ಯಾತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಜೆಡಿಎಸ್‌ ಅನ್ನು ಬಿಜೆಪಿ ಬಿ-ಟೀಂ ಎಂದು ಟೀಕೆ ಮಾಡುತ್ತಾರೆ. ವಾಸ್ತವದಲ್ಲಿ ಬಿಜೆಪಿಯನ್ನು ಮಣಿಸುವ ಶಕ್ತಿ ಇರುವುದು ರೈತ ಮಕ್ಕಳಿಗೆ ಮಾತ್ರ. ಇವತ್ತಿಗೂ ಜೆಡಿಎಸ್‌ಗೆ ಆ ಶಕ್ತಿ ಇದೆ ಎಂದು ಪುನರುಚ್ಚರಿಸಿದರು.

ಎಲ್ಲಾ ಭಾಗ್ಯ ಕೊಟ್ಟು 128ರಿಂದ 78ಕ್ಕೆ ಕುಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಇಬ್ರಾಹಿಂ, ಕೊಟ್ಟಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಎನ್ನುತ್ತೀರಲ್ಲ. ಕಳೆದ ಚುನಾವಣೆಯಲ್ಲಿ ಬಾದಾಮಿಯವರು ಸಿದ್ದರಾಮಯ್ಯನವರನ್ನು ಗೆಲ್ಲಿಸಿದರು. ಈಗ ಬಾದಾಮಿ ಬಿಟ್ಟು ಬೇರೆ ಕ್ಷೇತ್ರವನ್ನು ಹುಡುಕಿಕೊಂಡು ಹೊರಟಿರುವ ನೀವು ಶೂರರೋ, ವೀರರೋ ಉತ್ತರಿಸಿ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ ಎರಡು ಕಡೆ ನಿಂತರೂ ಎರಡೂ ಕಡೆ ಗೆಲ್ಲುತ್ತಿದ್ದಾರೆ. ನಿಮಗೆ ಆ ಧೈರ್ಯ ಇದೆಯಾ. 50 ಸಾವಿರ ವೋಟ್‌ ಇದೆ ಅಂತ ಕೋಲಾರಕ್ಕೆ ಹೋಗಿದ್ದೀಯಾ ಎಂದು ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. 

Grama Vastavya: ಹಾಸ್ಟೆಲ್‌ ಮಕ್ಕಳಿಗೆ ಉಪಾಹಾರ ಬಡಿಸಿದ ಸಚಿವ ಅಶೋಕ್‌

ಕಳೆದ ಚುನಾವಣೆ ಮುಗಿದ ನಂತರ ಕುಮಾರಸ್ವಾಮಿಯೇ ಗಂಡು ಆಗ್ಬೇಕು ಮೇಕಪ್‌ ಮಾಡಿಕೊಂಡು ಬಂದಿರಿ. 14 ತಿಂಗಳಿಗೆ ಶಾಸಕರನ್ನು ಬಾಂಬೆಗೆ ಕಳುಹಿಸಿ ಸರ್ಕಾರವನ್ನು ತೆಗೆದಿರಿ. ನಿಮಗೆ ಹೇಗೆ ಮನಸ್ಸು ಬಂತು ಸಿದ್ದರಾಮಯ್ಯ ಕುಮಾರಣ್ಣ ಯಾರಿಗಾದರೂ ಅನ್ಯಾಯ ಮಾಡಿದ್ದರಾ ಎಂದು ಪ್ರಶ್ನಿಸಿದರು. ಮೊನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಇಬ್ಬರು ಶಾಸಕರಿಗೆ 10 ಕೋಟಿ ಕೊಡಿಸಿ ಬಿಜೆಪಿ ಪರ ಮತ ಹಾಕಿಸಿದಿರಿ. ಶ್ರೀನಿವಾಸ ಗೌಡ ಮತ್ತು ಗುಬ್ಬಿ ವಾಸು ಅವರನ್ನು ಕರೆದುಕೊಂಡು ಹೋಗಿದ್ದು ಏಕೆ. ಅದಕ್ಕೆ ಉತ್ತರ ಕೊಡ್ತೀರಾ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರೇ. ನಮ್ಮನ್ನ ಬಿಜೆಪಿ ಬಿ ಟೀಂ ಅಂತೀರಾ ಎಂದು ಕುಟುಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌