* ಶಿಷ್ಯನನ್ನೇ ಹೊರಟ್ಟಿ ವಿರುದ್ಧ ಕಣಕ್ಕಿಳಿಸಲು ಸಿದ್ಧತೆ
* ಹೊರಟ್ಟಿ ಬಳಗದೊಂದಿಗೆ ಗುರುತಿಸಿಕೊಂಡಿದ್ದ ಗಡದಿನ್ನಿ ಅಭ್ಯರ್ಥಿ
* ಹೊರಟ್ಟಿ ಅವರ 5 ಚುನಾವಣೆಯಲ್ಲಿ ದುಡಿದವರ ಪೈಕಿ ಇವರು ಒಬ್ಬರು
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.20): ಏಳು ಬಾರಿ ಗೆದ್ದು ರಾಷ್ಟ್ರದಾಖಲೆ ನಿರ್ಮಿಸಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಅವರನ್ನು ಪಶ್ಚಿಮ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಹಣಿಯಲು ಅವರ ಶಿಷ್ಯ ಬಳಗದಲ್ಲೇ ಗುರುತಿಸಿಕೊಂಡಿದ್ದ ಶಿಕ್ಷಕರೊಬ್ಬರನ್ನು ಕಣಕ್ಕಿಳಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಮಾತುಕತೆ ಕೂಡ ಮುಗಿದಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಅಭ್ಯರ್ಥಿ ಯಾರು?:
ಒಂದು ಕಾಲದಲ್ಲಿ ಬಸವರಾಜ ಹೊರಟ್ಟಿ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಸ್.ಎನ್. ಗಡದಿನ್ನಿ ಎಂಬುವವರೇ ಇದೀಗ ಹೊರಟ್ಟಿವಿರುದ್ಧ ಸ್ಪರ್ಧಿಸುವವರು. ಇವರು ಕೂಡಾ ಶಿಕ್ಷಕರು. ಲ್ಯಾಮಿಂಗಟನ್ ಶಾಲೆಯ ಶಿಕ್ಷಕರಾಗಿರುವ ಇವರು, ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ. ಹೊರಟ್ಟಿ ಅವರ ಹುಟ್ಟುಹಾಕಿದ ಮಾಧ್ಯಮಿಕ ಶಾಲಾ ನೌಕರರ ಸಂಘದಲ್ಲಿ ಗುರುತಿಸಿಕೊಂಡಿದ್ದರು. 2016ರಿಂದ ಆ ಸಂಘದಲ್ಲಿ ಇಲ್ಲ. ಬಳಿಕ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ 6 ವರ್ಷದಿಂದ ಅಂದರೆ ಕಳೆದ ಚುನಾವಣೆಯಿಂದ ಹೊರಟ್ಟಿ ಅವರೊಂದಿಗೆ ಇವರು ಇಲ್ಲ. ಹೊರಟ್ಟಿ ಅವರ 5 ಚುನಾವಣೆಯಲ್ಲಿ ದುಡಿದವರ ಪೈಕಿ ಇವರು ಒಬ್ಬರು. ಇದೀಗ ಹೊರಟ್ಟಿಅವರ ಎದುರಾಳಿಯಾಗಿ ಹೊರಟಿದ್ದಾರೆ.
Family Politics: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಮಲ ಮುಡಿದರೇ ಹೊರಟ್ಟಿ?
ಜೆಡಿಎಸ್ ಬೆಂಬಲ:
ಹೊರಟ್ಟಿ ಅವರನ್ನು ಸೋಲಿಸಬೇಕೆಂದು ಹಠಕ್ಕೆ ಬಿದ್ದು ಅವರ ವಿರುದ್ಧ ಸ್ಪರ್ಧಿಸಲು ನಿಶ್ಚಿಯಿಸಿದ್ದಾರೆ. ಇದಕ್ಕಾಗಿ ಸಕಲ ತಯಾರಿಯನ್ನೂ ಮಾಡಿಕೊಂಡಿರುವುದುಂಟು. ಅತ್ತ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದ ಹೊರಟ್ಟಿಬಿಜೆಪಿ ಸೇರಿರುವುದರಿಂದ ಜೆಡಿಎಸ್‌ಗೂ ಯಾರೂ ಅಭ್ಯರ್ಥಿಗಳು ಇಲ್ಲದಂತಾಗಿದೆ. ಹೀಗಾಗಿ ಇವರಿಗೆ ಟಿಕೆಟ್ ಕೊಡಬೇಕೆಂಬ ಪ್ಲ್ಯಾನ್ ಪಕ್ಷದ್ದು. ಈ ಸಂಬಂಧ ಈಗಾಗಲೇ ಎರಡ್ಮೂರು ಬಾರಿ ಗಡದಿನ್ನಿ ಅವರೊಂದಿಗೆ ಚರ್ಚೆ ನಡೆಸಿರುವುದುಂಟು. ಜೆಡಿಎಸ್ ಸೇರಲು ಗಡದಿನ್ನಿ ಹಿಂಜರಿಯುತ್ತಿದ್ದು, ಬೆಂಬಲ ಕೊಡಿ ಎಂದು ಕೇಳಿಕೊಂಡಿದ್ದಾರಂತೆ. ಆದರೆ ಪಕ್ಷಕ್ಕೆ ಸೇರಿಕೊಳ್ಳಿ ನಿಮಗೆ ಟಿಕೆಟ್ ಕೊಡುತ್ತೇವೆ ಎಂದು ಜೆಡಿಎಸ್ ವರಿಷ್ಠರು ಹೇಳಿರುವುದುಂಟು. ಈ ಸಂಬಂಧ ಮಾತುಕತೆ ನಡೆಯುತ್ತಿದೆ.
JDS ತೊರೆದು BJP ಸೇರಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಬಹುತೇಕವಾಗಿ ಇವರು ಪಕ್ಷಕ್ಕೆ ಸೇರುವುದು ಖಚಿತ. ಬಳಿಕ ಟಿಕೆಟ್ ಕೊಡಲಾಗುವುದು. ಒಂದು ವೇಳೆ ಪಕ್ಷಕ್ಕೆ ಸೇರದಿದ್ದರೂ ಬೆಂಬಲ ಕೊಡುವ ಬಗ್ಗೆ ಮುಂದೆ ಯೋಚಿಸಿ ನಿರ್ಧರಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ತಮ್ಮನ್ನು ಬಿಟ್ಟು ಹೋಗಿರುವ ಹೊರಟ್ಟಿಅವರನ್ನು ಸೋಲಿಸಲು ಜೆಡಿಎಸ್ ಕೂಡ ಏನೆಲ್ಲ ಕಸರತ್ತು ಮಾಡುತ್ತಿರುವುದಂತೂ ಸತ್ಯ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ನಾನು ಮುಂಚೆ ಹೊರಟ್ಟಿ ಅವರೊಂದಿಗೆ ಇದ್ದೆ. ಅವರ ಸಂಘಟನೆಯಲ್ಲೇ ಗುರುತಿಸಿಕೊಂಡಿದ್ದೆ. 5 ಚುನಾವಣೆಯಲ್ಲಿ ಅವರ ಪರವಾಗಿಯೇ ಕೆಲಸ ಮಾಡಿದ್ದೇನೆ. ಆದರೆ 2016ರ ಚುನಾವಣೆ ಮುಗಿದ ಮೇಲೆ ಅವರು ನಮ್ಮನ್ನು ಸಂಘಟನೆಯಿಂದ ದೂರವಿಟ್ಟರು. ಇದೀಗ ನಾನೇ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಜೆಡಿಎಸ್ ಬೆಂಬಲ ನೀಡಲು ಮುಂದೆ ಬಂದಿದೆ ಅಂತ ನಿವೃತ್ತ ಶಿಕ್ಷಕ ಎಸ್.ಎನ್. ಗಡದಿನ್ನಿ ತಿಳಿಸಿದ್ದಾರೆ.
ಜೆಡಿಎಸ್‌ನಿಂದ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಗಡದಿನ್ನಿ ಕೂಡ ಒಬ್ಬರು. ಅವರೊಂದಿಗೆ ಈಗಾಗಲೇ ಮೂರ್ನಾಲ್ಕು ಬಾರಿ ಚರ್ಚೆ ಕೂಡ ನಡೆದಿರುವುದುಂಟು. ಬಹುತೇಕ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆಯುಂಟು. ಆದರೂ ಈ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಅಂತ ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದ್ದಾರೆ.