ತಾವು ಮತ್ತೊಮ್ಮೆ ಸಿಎಂ ಆದರೆ ದಲಿತರ ಸಾಲ ಮನ್ನಾ ಮಾಡುವುದಾಗಿ ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯನವರು ಯಾವ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂಬುದೇ ನನಗೆ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮೈಸೂರು (ಮೇ.20): ತಾವು ಮತ್ತೊಮ್ಮೆ ಸಿಎಂ ಆದರೆ ದಲಿತರ ಸಾಲ ಮನ್ನಾ ಮಾಡುವುದಾಗಿ ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ ನಾಯಕರು (BJP Leaders) ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯನವರು ಯಾವ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂಬುದೇ ನನಗೆ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ (Mp Pratap Simha) ವ್ಯಂಗ್ಯವಾಡಿದ್ದಾರೆ. ಡಾ.ಜಿ.ಪರಮೇಶ್ವರ ಸಿಎಂ ಆಗುವುದನ್ನ ತಪ್ಪಿಸಿದ್ದೇ ಸಿದ್ದರಾಮಯ್ಯನವರು ದಲಿತರಿಗೆ ಕೊಟ್ಟ ಕೊಡುಗೆ. ಮುನಿಯಪ್ಪ, ಖರ್ಗೆಯವರನ್ನ ಸೋಲಿಸಿದ್ದೇ ಸಿದ್ದರಾಮಯ್ಯ ದಲಿತರಿಗೆ ಕೊಟ್ಟಕೊಡುಗೆ ಎಂದಿದ್ದಾರೆ.
ಇನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಿದ್ದರಾಮಯ್ಯ ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದರೆ ತಾನೇ ಅವರು ಕೊಡುವ ಭರವಸೆ ಈಡೇರುವುದು ಎಂದರು. ಸಿದ್ದರಾಮಯ್ಯ ಗೋಮುಖ ವ್ಯಾಘ್ರತನ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರ ಎಲ್ಲಾ ಹೇಳಿಕೆಗಳು ಗಿಮಿಕ್ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಎದೆ ಮುಟ್ಟಿಕೊಂಡು ಹೇಳಲಿ, ಮೈಸೂರಿನ ಅಭಿವೃದ್ಧಿಗೆ ಅವರ ಕೊಡುಗೆ ಏನೆಂದು? ಲಿಂಗಾಯತರನ್ನ, ಹಿಂದುಳಿದ ಜಾತಿಯನ್ನ ಒಡೆಯುವುದು ಇದೇ ಅವರು ಮಾಡಿದ ಅಭಿವೃದ್ಧಿ ಕಾರ್ಯ. ಅಂದು ಕೆಲಸ ಮಾಡದವರು ಮುಂದೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು.
Mandya: ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಿವೆ: ಸಂಸದ ಪ್ರತಾಪ್ ಸಿಂಹ ಟೀಕೆ!
ನಾನು ಮತ್ತೆ ಸಿಎಂ ಆದರೆ ದಲಿತ ಸಾಲ ಮನ್ನಾ: ನನ್ನ ಅಧಿಕಾರಾವಧಿಯಲ್ಲಿ ದಲಿತರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದೇನೆ. ಈಗ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದರೆ ದಲಿತರ ಸಾಲ ಮನ್ನಾ ಮಾಡುತ್ತೇನೆ.’ ಹೀಗೆ ಹೇಳುವ ಮೂಲಕ ಮತ್ತೆ ಮುಖ್ಯಮಂತ್ರಿ ಹುದ್ದೆಗೇರುವ ಆಕಾಂಕ್ಷೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಷಿತರ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿದ್ದಾಗ ಶೋಷಿತ ಸಮುದಾಯ ಅಭಿವೃದ್ಧಿಯಾಗಬೇಕೆಂದು ದಲಿತರಿಗೆ ಅನುದಾನವನ್ನು 50 ಲಕ್ಷದಿಂದ 1 ಕೋಟಿ ರು. ವರೆಗೆ ಹೆಚ್ಚಳ ಮಾಡುವಂತೆ ಘೋಷಿಸಿದ್ದೆ. ಆದರೆ ನಂತರ ಅದನ್ನು ಯಾರೂ ಅನುಷ್ಠಾನಕ್ಕೆ ತರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಾಡಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಯಡಿಯೂರಪ್ಪ, ಬೊಮ್ಮಾಯಿನೂ ಮಾಡಲಿಲ್ಲ, ಮತ್ತೊಮ್ಮೆ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದರೆ ದಲಿತರ ಸಾಲವನ್ನು ಮನ್ನಾ ಮಾಡುತ್ತೇನೆ. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಕೇವಲ ದಲಿತ ಸಮುದಾಯಕ್ಕೆ ಮಾತ್ರ ಬಳಕೆ ಮಾಡುವೆ’ ಎಂದು ಹೇಳಿದರು.
OBC Reservation: ಜಾತಿ ಗಣತಿ ಆಧರಿಸಿ ಒಬಿಸಿ ಮೀಸಲು ಕೊಡಿ: ಸಿದ್ದರಾಮಯ್ಯ
‘ಈ ಸರ್ಕಾರ ದಲಿತರಿಗೆ ಮೋಸ ಮಾಡಿದೆ. ಈ ವಿಚಾರ ಗೊತ್ತಿದ್ದರೂ ದಲಿತ ಸಂಘಟನೆಗಳು ಏನು ಮಾಡುತ್ತಿವೆ ? ಸಮುದಾಯದ ಪರ ಧ್ವನಿ ಎತ್ತಬೇಕಲ್ಲವೇ? ನಿಮ್ಮ ಹಣವನ್ನು ಬೇರೆಯವರಿಗೆ ಖರ್ಚು ಮಾಡಲಾಗುತ್ತಿದೆ. ಆದರೂ ಈ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ? ಎಂದು ಕಿಡಿಕಾರಿದ ಅವರು, ದಲಿತರಿಗೆ ಗುತ್ತಿಗೆ ಮೀಸಲಾತಿ ತಂದಿದ್ದು ನಾನು. ದಲಿತರಿಗೆ, ಶೋಷಿತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದು ಜನ ವಿರೋಧಿ ಆಡಳಿತದ ವಿರುದ್ಧ ಪ್ರತಿಯೊಬ್ಬರು ಹೋರಾಡಬೇಕು’ ಎಂದು ಕರೆ ನೀಡಿದರು.