ಕುತೂಹಲ ಮೂಡಿಸಿದ ಎಚ್‌ಡಿಕೆ ಪುತ್ರ ನಿಖಿಲ್ ನಡೆ

By Kannadaprabha News  |  First Published Oct 21, 2020, 8:30 AM IST

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಡೆಯೊಂದು ಸಾಕಷ್ಟು ಕುತೂಹಲ ಮೂಡಿಸಿದೆ. 


ಬೆಂಗಳೂರು (ಅ.21):  ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿರುವ ಆರ್‌.ಆರ್‌.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ಪಕ್ಷದ ಅಭ್ಯರ್ಥಿ ಪರ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ದೂರ ಉಳಿದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಸಂಸದ ಪ್ರಜ್ವಲ್‌ ರೇವಣ್ಣ ಸಹ ಶಿರಾ ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ರಣತಂತ್ರ ಹೆಣೆಯುವಲ್ಲಿ ನಿರತರಾಗಿದ್ದಾರೆ. ಆದರೆ, ನಿಖಿಲ್‌ ಕುಮಾರಸ್ವಾಮಿ ಮಾತ್ರ ಉಪಚುನಾವಣೆಗೂ, ತಮಗೂ ಯಾವುದೇ ಸಂಬಂಧ ಇಲ್ಲವೆಂಬತೆ ದೂರ ಉಳಿದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Tap to resize

Latest Videos

ಸಿನಿಮಾದಲ್ಲಿ ಆಸಕ್ತಿ?:

ರಾಜಕೀಯ ಕ್ಷೇತ್ರಕ್ಕಿಂತ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಹೆಚ್ಚಿನ ಆಸಕ್ತಿ ಹೊಂದಿರುವ ಕಾರಣ ಪ್ರಚಾರದಿಂದ ಅಂತರ ಕಾಯ್ದುಕೊಂಡಿರಬಹುದು ಎಂಬ ಮಾತುಗಳು ಕೇಳಿಬಂದಿವೆ. ಶಿರಾ ಕ್ಷೇತ್ರದಲ್ಲಿ ಪ್ರಜ್ವಲ್‌ ರೇವಣ್ಣ ಪ್ರಚಾರದಲ್ಲಿ ತೊಡಗಿರುವ ಕಾರಣ ಅಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ, ಅಲ್ಲಿ ಹೋಗದೆ ಇದ್ದರೆ ಅದನ್ನು ಒಪ್ಪಬಹುದಿತ್ತೇನೊ. ಆದರೆ, ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಏನು ಅಡಚಣೆಯಿದೆ ಎಂಬುದು ಇದೀಗ ಜೆಡಿಎಸ್‌ ಪಾಳೆಯದಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ.

ಮೈತ್ರಿ ಸರ್ಕಾರ ಪತನದ ಆಡಿಯೋ ಬಾಂಬ್, ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಸಂಚಲನ ...

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ತಮ್ಮ ಸಿನಿಮಾಕ್ಕೆ ಹಣ ಹೂಡುವ ನಿರ್ಮಾಪಕ ಮುನಿರತ್ನ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮುನಿರತ್ನ ಅವರು ಈಗಾಗಲೇ ಕುರುಕ್ಷೇತ್ರ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಲ್ಲದೇ, ಮತ್ತೊಂದು ಸಿನಿಮಾ ಕೂಡ ನಿಖಿಲ್‌ಗಾಗಿ ನಿರ್ಮಿಸುವೆ ಎಂದಿದ್ದಾರೆ. ಸಿನಿಮಾ ಭವಿಷ್ಯಕ್ಕೆ ಪೆಟ್ಟು ಬೀಳಬಾರದು ಎಂಬ ಕಾರಣಕ್ಕಾಗಿ ಆರ್‌.ಆರ್‌.ನಗರ ಕ್ಷೇತ್ರದಿಂದ ದೂರ ಉಳಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಕ್ಷದ ಮುಖಂಡರಾಗಿ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಬೇಕಾದ ಜವಾಬ್ದಾರಿ ಇರುತ್ತದೆ. ಪಕ್ಷದ ಯುವಘಟಕ ಅಧ್ಯಕ್ಷರಾಗಿ ಯುವ ಕಾರ್ಯಕರ್ತರನ್ನು ಪ್ರೋತ್ಸಾಹಿಸದಿದ್ದರೆ ಸಹಜವಾಗಿ ಕಾರ್ಯಕರ್ತರು ಸಹ ಉತ್ಸಾಹ ತೋರುವುದಿಲ್ಲ. ಅಲ್ಲದೇ, ಅನ್ಯ ಪಕ್ಷಗಳತ್ತ ವಾಲುವ ಸಾಧ್ಯತೆಯೂ ಇರುತ್ತದೆ ಎಂದು ಪಕ್ಷದ ಕೆಲವು ನಾಯಕರು ಬೇಸರ ವ್ಯಕ್ತಪಡಿಸಿದ್ದು, ಇನ್ನು ಕೆಲವು ದಿನ ಪ್ರಚಾರ ನಡೆಯಲಿದೆ. ಆ ಸಂದರ್ಭದಲ್ಲಿಯಾದರೂ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾರ್ಯಕರ್ತರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

click me!