
ಬಾಗಲಕೋಟೆ (ಅ.21): ಕುಣಿಯಲಾರದವರು ನೆಲ ಡೊಂಕು ಎಂಬಂತಾಗಿದೆ ಕುಮಾರಸ್ವಾಮಿಯವರ ಸ್ಥಿತಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಇತ್ತೀಚೆಗೆ ಕುಮಾರಸ್ವಾಮಿ ಅವರು, ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ, ನನ್ನ ಕಣ್ಣೀರಿಗೆ ಕಾಂಗ್ರೆಸ್ ಕಾರಣವೆಂದು ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿಕ್ಕೆ ಆಗದೆ ಇರುವವರು ಈ ತರಹ ಹೇಳುತ್ತಾ ತಿರುಗುತ್ತಾರೆ. ಈ ಕುರಿತು ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ದು : ಸ್ವಕ್ಷೇತ್ರವಾದ ಬಾದಾಮಿಯ ಕಾತರಕಿ ಗ್ರಾಮದಲ್ಲಿ ಮಾತನಾಡುವ ವೇಳೆ, ಮತ್ತೆ ನಮ್ಮ ಸರ್ಕಾರ ಬಂದು ನಾನು ಮುಖ್ಯಮಂತ್ರಿಯಾದರೆ ನಿಮಗೆ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ. ಯಾರೂ ಹಸಿವಿನಿಂದ ಮಲಗಬಾರದು, ಹೊಟ್ಟೆತುಂಬಾ ಊಟ ಮಾಡಬೇಕು. ಹೊಟ್ಟೆತುಂಬಾ ಊಟ ಇದ್ದರೆ ಜನ ನೆಮ್ಮದಿಯಿಂದ ಇರ್ತಾರೆ. ಸದ್ಯ ಇರುವ ಸರ್ಕಾರ ದುಡ್ಡಿಲ್ಲದ ದರಿದ್ರ ಸರ್ಕಾರವಾಗಿದೆ. ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಖಜಾನೆ ಯಾವಾಗಲೂ ಭರ್ತಿಯಾಗಿರುತ್ತಿತ್ತು ಎಂದು ಹೇಳಿದರು.
'ಯಡಿಯೂರಪ್ಪನವರನ್ನು ಕೆಳಗಿಳಿಸೋ ಬಗ್ಗೆ ಚಚೆ೯ ನಡೀತಾ ಇರೋದು ನಿಜ'
ಬಹಳ ದಿನ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂಬ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರನ್ನು ತೆಗೆಯಬೇಕೆಂದು ಬಹಳ ದೊಡ್ಡ ಚರ್ಚೆ ನಡೆದಿದೆ. ಹಾಗಂತ ನಾವು ಸರ್ಕಾರವನ್ನು ಬೀಳಿಸಲು ಹೋಗುವುದಿಲ್ಲ. ಅವರನ್ನು ಯಾವಾಗ ಇಳಿಸುತ್ತಾರೆ, ಯಾರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ನನಗೆ ಗೊತ್ತಿಲ್ಲ ಎಂದರು.
ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರವನ್ನು ಗೆದ್ದಾಗಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಎರಡೂ ಕ್ಷೇತ್ರಗಳೇನು ಸಿಎಂ ಜೇಬಿನಲ್ಲಿದ್ದಾವಾ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.