
ಮೈಸೂರು, (ನ.09): ರಾಜಕೀಯದಲ್ಲಿ ಬದ್ಧ ವೈರಿಗಳಾಗಿದ್ದ ಜಿಡಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಇದೀಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಕ-ಪಕ್ಕದಲ್ಲಿಯೇ ಕುಳಿತು ನಗುಮುಖದಲ್ಲಿಯೇ ಕುಶಲೋಪಾರಿ ವಿಚಾರಿಸಿದ್ದಾರೆ. ಅಲ್ಲದೇ ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಮೇಲೆ ಸಿದ್ದು-ಜಿಟಿಡಿ ಒಬ್ಬರಿಗೊಬ್ಬರು ಹಾಡಿ ಹೊಗಳಿಕೊಂಡಿದ್ದಾರೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ದೇಶದ ಗಮನಸೆಳೆದಿತ್ತು. ಚುನಾವಣೆ ಫೈಟ್‌ನಲ್ಲಿ ಅಂತಿಮವಾಗಿ ಜಿಟಿ ದೇವೇಗೌಡ ಎದುರು ಸೋಲುಕಂಡರು. ಆಗ ಪರಸ್ಪರ ಎದುರಾಳಿಗಳಾಗಿದ್ದವರು ಇದೀಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಂದಾಗುವ ಮುನ್ಸೂಚನೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡ ಅವರು ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯರ ಗುಣಗಾನ ಮಾಡಿದರು. ಈ ಮೂಲಕ ರಾಜಕೀಯದಲ್ಲಿ ಒಂದಾಗುವ ಸುಳಿವು ಕೊಟ್ಟರು.
Karnataka Politics: 'ದಲಿತರು ಸಿಎಂ ಆದ್ರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ'
ಸಿದ್ದರಾಮಯ್ಯರ ಗುಣಗಾನ ಮಾಡಿದ ಜಿಟಿಡಿ
1983 ರಿಂದ ನಿರಂತರವಾಗಿ ನಾನು ಸಿದ್ದರಾಮಯ್ಯ ಜೊತೆಯಾಗಿ ಬೆಳೆದಿದ್ದೇವೆ. ಜೆಡಿಎಸ್ ಅನ್ನು ನೆಲದಿಂದ ಜೊತೆಯಾಗಿ ಕಟ್ಟಿದ್ದೇವೆ. ನಂತರದ ಘಟನಾವಳಿಗಳಿಂದ ಸಿದ್ದರಾಮಯ್ಯ ಜೆಡಿಎಸ್ ತೊರೆದರು. ಕಾಂಗ್ರೆಸ್‍ಗೆ ಹೋಗಿ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಅವರು ಕೊಟ್ಟ ಅನ್ನಭಾಗ್ಯ ಬಹಳ ಮುಖ್ಯವಾದ ಯೋಜನೆ. ಅವರಿಗೆ ಹಸಿವಿನ ಕಷ್ಟ ಗೊತ್ತಿದೆ. ಸಿದ್ದರಾಮಯ್ಯ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೊಗಳಿದರು.
ಡಾ. ಎಚ್.ಸಿ.ಮಹದೇವಪ್ಪ ಎಂಬ ದಲಿತ ನಾಯಕನನ್ನು ದೊಡ್ಡದಾಗಿ ಬೆಳೆಸಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯನನ್ನು ವೀರಶೈವ ವಿರೋಧಿ ಎಂಬ ಪಟ್ಟ ಕಟ್ಟಿದ್ದರು. ಹಲವು ವೀರಶೈವ ಮುಖಂಡರನ್ನು ಮೈಸೂರು ಭಾಗದಲ್ಲಿ ಬೆಳೆಸಿದ್ದು ಸಿದ್ದರಾಮಯ್ಯ. ದಲಿತರು, ಒಕ್ಕಲಿಗರು, ನಾಯಕರು, ವೀರಶೈವರು ಎಲ್ಲಾ ಸಮುದಾಯವನ್ನು ಸಿದ್ದರಾಮಯ್ಯ ಪ್ರೀತಿಸುತ್ತಾರೆ. ಸಿದ್ದರಾಮಯ್ಯ-ಜಿ.ಟಿ.ದೇವೇಗೌಡ ಯಾಕೆ ಬೇರೆಯಾದರು ಎಂಬ ಕೊರಗು ಜಿಲ್ಲೆಯ ಜನರಿಗೆ ಇತ್ತು. ನಾನು ಯಾವತ್ತೂ ಸಿದ್ದರಾಮಯ್ಯ ಅವರ ವಿರುದ್ಧ ಹಿಂದೆ ಮುಂದೆ ಯಾವುದೇ ಮಾತನಾಡಿಲ್ಲ. ಸಿದ್ದರಾಮಯ್ಯ ಸೋಲಲಿ, ಗೆಲ್ಲಲಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಅವರನ್ನು ಪ್ರೀತಿಸುತ್ತಾರೆ. ಇಂತಹ ನಾಯಕನನ್ನು ಕೊಟ್ಟ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಭಿನಂದನೆ ಎಂದು ಹೇಳಿದರು.
ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಕನ್ಫರ್ಮ್ : ಕ್ಷೇತ್ರದ ಬಗ್ಗೆ ಮಾತ್ರ ಗೊತ್ತಿಲ್ಲ
ಸಿದ್ದರಾಮಯ್ಯ ಮಾತು
ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿದ್ದು ಚಾಮುಂಡೇಶ್ವರಿ ಕ್ಷೇತ್ರ. ಚುನಾವಣೆಯಲ್ಲಿ ಸೋಲು-ಗೆಲವು ಇದ್ದದ್ದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಿದ್ದೇನೆ, ಸೋತಿದ್ದೇನೆ. ಚುನಾವಣೆ ಆದ ಮೇಲೆ ಬೇಸರವಾಗಿತ್ತು. ಆದ್ದರಿಂದ ಕ್ಷೇತ್ರದ ಕಡೆ ಬಂದಿರಲಿಲ್ಲ. ರಾಜಕೀಯದಲ್ಲಿ ಮುನಿಸು ಶಾಶ್ವತವಾಗಿ ಇರುವುದಿಲ್ಲ. ಕೆರೆ ಜೊತೆ ಮುನಿಸಿಕೊಂಡರೆ ನಮಗೇನೆ ತೊಂದರೆ ಎಂದರು.
ನಾನು ಜಿಟಿಡಿ ಪರಸ್ಪರ ಸ್ಪರ್ಧೆ ಮಾಡಿದ್ದೆವು. ಈ ಗಿರಾಕಿ ಚುನಾವಣೆಯಲ್ಲಿ ನನ್ನನ್ನೇ ಸೋಲಿಸಿದ್ದಾನೆ. ಹೀಗಾಗಿ, ನಾವಿಬ್ಬರು ಒಂದೇ ವೇದಿಕೆಗೆ ಬಂದಿರುವುದಕ್ಕೆ ಮಾಧ್ಯಮದವರಿಗೆ ಕೂತುಹಲ. ಜಿಟಿಡಿ ತಮ್ಮ ಭಾಷಣದಲ್ಲಿ ಹೇಳಿದ್ದು ಸತ್ಯ. ಜಿಟಿಡಿ ಕಾಂಗ್ರೆಸ್‌ಗೆ ಬರುತ್ತಾನೆ ಎಂಬ ಊಹಾಪೋಹ ಹರಡಿದೆ. ಅವರಿಗೆ ಕಾಂಗ್ರೆಸ್‍ಗೆ ಬರಲು ಮನಸ್ಸು ಇರುವುದು ನಿಜ ಎಂದು ಸ್ಪಷ್ಟಪಡಿಸಿದರು.
ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಜಿಟಿಡಿಯನ್ನು ಅಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‍ಗೆ ಬರುವುದು ಬಿಡುವುದು ಜಿಟಿಡಿಗೆ ಬಿಟ್ಟಿದ್ದು. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಜಿಟಿಡಿ ಬಂದರೂ ಸ್ವಾಗತ. ಜಿಟಿಡಿ ನನ್ನ ರಾಜಕೀಯ ಎದುರಾಳಿ ಹೊರತು ವೈರಿ ಅಲ್ಲ. ನನಗೂ ಜಿಟಿಡಿಗೂ ವೈಯಕ್ತಿಕ ದ್ವೇಷ ಇಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.