
ಕಾರವಾರ (ಫೆ.10): ‘ನಾನು ಲಾಟರಿ ಸಿಎಂ ಆಗಿಯೇ ಇದ್ದೀನಿ. ಎರಡು ಬಾರಿ ಲಾಟರಿ ಹೊಡೆದಿದೆ. ಈ ಬಾರಿ ಬಂಪರ್ ಲಾಟರಿ ಹೊಡೆಯಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಹೊನ್ನಾವರದಲ್ಲಿ ಗುರುವಾರ ಹಮ್ಮಿಕೊಂಡ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ಲಾಟರಿ ಮುಖ್ಯಮಂತ್ರಿ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈ ಬಾರಿ ಸ್ಪಷ್ಟಬಹುಮತದೊಂದಿಗೆ ನಾವು ಅಧಿಕಾರಕ್ಕೆ ಬರುತ್ತೇವೆ. ಬಂಪರ್ ಲಾಟರಿ ಹೊಡೆಯುತ್ತದೆ ಎಂದರು.
ಬಿಜೆಪಿ ಸಿಎಂ ಬಗ್ಗೆ ಮಾತಾಡೋಕೆ ಕುಮಾರಸ್ವಾಮಿಗೆ ಅರ್ಹತೆಯಿಲ್ಲ ಎಂಬ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಮುಂದಿನ ಸಿಎಂ ಬಗ್ಗೆ ಮಾತನಾಡಿಲ್ಲ. ನಾಡಿನ ಜನತೆಯ ಕ್ಷೇಮಕ್ಕಾಗಿ ಎಚ್ಚರಿಸಿದ್ದೇನೆ. ಜನರ ಹಿತಕ್ಕಾಗಿ ಎಚ್ಚರಿಸುವ ಕಾರ್ಯ ಮಾಡಿದ್ದೇನೆ. ನನ್ನ ಹಿಂದೆ ಕೈ ಕಟ್ಟಿನಿಂತವನು ಬಿ.ಸಿ.ಪಾಟೀಲ್. ಇವರಿಂದ ಕಲಿಯಬೇಕಾದದ್ದು ಏನೂ ಇಲ್ಲ ಎಂದರು. ನಾನು ಕಾಂಗ್ರೆಸ್ ಅಭ್ಯರ್ಥಿಯಾದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಹೇಳಿರುವ ಶಿವಲಿಂಗೇಗೌಡರ ಆಡಿಯೋ ಪ್ರಸ್ತಾಪಿಸಿ, ಶಿವಲಿಂಗೇಗೌಡ ಬೆಳೆದು ಬಿಟ್ಟಿದ್ದಾರೆ.
ಬ್ರಾಹ್ಮಣರು ಸಿಎಂ ಆಗಬಾರದೇ?: ಎಚ್‌ಡಿಕೆ ವಿರುದ್ಧ ಮುನಿರತ್ನ ಕಿಡಿ
ಅವರು 50 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತಾರಾ ಅಥವಾ ಅವರನ್ನು ಜನರು 50 ಸಾವಿರ ಲೀಡ್‌ನಲ್ಲಿ ಮುಳುಗಿಸುತ್ತಾರಾ ಕಾದು ನೋಡಬೇಕು ಎಂದು ಹೇಳಿದರು. ತೆನೆ ಹೊಲದಲ್ಲಿ ಇರಲಿ ಎಂದಿರುವ ಡಿ ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿ, ಹೊಲದಲ್ಲಿ ತೆನೆ ಇದ್ದರೆ ಕೈಗೆ ಕೆಲಸ. ‘ಕೈ’, ನಾಡಿನ ಜನತೆಗೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರೇಖೆ ಅಳಿಸಿದ್ದಾರೆ. ತೆನೆ ಜನರನ್ನು ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ. ಕಾಂಗ್ರೆಸ್ ವಿಫಲವಾಗಿದ್ದಕ್ಕೆ ಕೈ ಮೇಲೆ ಜನರು ರೇಖೆ ಎಳೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿಯವರು ಬ್ರಿಟಿಷರ ರೀತಿ ಒಡೆದಾಳುವ ನೀತಿ ಮಾಡುತ್ತಾರೆ ಎಂಬ ಸಚಿವ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಒಡೆದಾಳುವ ನೀತಿ ಮಾಡಿಲ್ಲ, ನಾವು ಒಡೆಸಿಕೊಂಡಿದ್ದೇವೆ. ಒಡೆಯುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ. ಕಟ್ಟುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು. ಜಾತಿಯ ತಳ ಇಟ್ಟುಕೊಂಡ ಪಕ್ಷ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜಾತ್ಯತೀತದ ಅರ್ಥ ಗೊತ್ತಿದೆಯಾ?. ಅವರಿಗೆ ಗೊತ್ತಿರುವುದು ನಾವೆಲ್ಲ ಮುಂದು, ನೀವೆಲ್ಲ ಹಿಂದು ಅಷ್ಟೇ. ಚಿಕ್ಕಮಗಳೂರಿಂದ ಗೆದ್ದು ಶೃಂಗೇರಿ ಮಠ ಒಡೆದವರಿಗೆ ಬೆಂಬಲ ಕೊಡುತ್ತಿದ್ದಾರೆ. ಶೃಂಗೇರಿ ಮಠ ಉಳಿಸಿದವರನ್ನು ವಿಲನ್ ಮಾಡ್ತಾ ಇದ್ದಾರೆ ಎಂದು ಆಪಾದಿಸಿದರು.
ಮುಂದುವರಿದ ಎಚ್‌ಡಿಕೆ ‘ಹಾರ ದಾಖಲೆ’: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹಾರ ದಾಖಲೆ ಮುಂದುವರಿದಿದೆ. ಈವರೆಗೆ ಅವರು ಪ್ರತಿಷ್ಠಿತ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಹಾಗೂ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಭಾಜನರಾಗಿದ್ದಾರೆ. ಶಾಸಕ ಆರ್.ಮಂಜುನಾಥ್ ನೇತೃತ್ವದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ 20ಕ್ಕೂ ಹೆಚ್ಚು ವಿಶಿಷ್ಟಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಲಾಯಿತು. ರಾಜ್ಯದಲ್ಲಿ ಸುಮಾರು 500 ವಿಶಿಷ್ಟ ಬಗೆಯ ಹಾರಗಳನ್ನು ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಅರ್ಪಿಸಿರುವುದು ವಿಶೇಷವಾಗಿದೆ.
ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!
ಬಾಗಲಗುಂಟೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಕಾಯಾಧ್ಯಕ್ಷ ಎಂ.ಮುನೇಗೌಡ ಅವರು ಬೆಳ್ಳಿ ಹಾರ ಹಾಕಲು ಮುಂದಾದಾಗ ಕುಮಾರಸ್ವಾಮಿ ಅವರು ಇಷ್ಟದ ದೇವರಿಗೆ ಸಮರ್ಪಿಸಲು ಸೂಚಿಸಿದರು. ದವಸ ಧಾನ್ಯ, ಹೊಲಿಗೆಯಂತ್ರ, ಅರಿಶಿನ ಕುಂಕುಮ, ಕ್ರಿಕೆಟ್ ಬಾಲ್, ಮೆಟ್ರೋ ರೈಲು ಮಾದರಿ, ಲೋಹ, ಕೈಗಾರಿಕಾ ಸಾಧನಗಳು ಸೇರಿ ಒಂದೇ ದಿನ 20ಕ್ಕೂ ಹೆಚ್ಚು ಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಿ ಜನತೆ ಸಂತಸ ಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.