ಶುದ್ದ ನೀರಿನ ಬದಲಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅಪಾಯಕಾರಿ ಕೊಳಚೆ ನೀರು ತಂದು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವರಿಗೆ ತಕ್ಕಪಾಠ ಕಲಿಸಬೇಕೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ/ಚಿಂತಾಮಣಿ (ನ.24): ಶುದ್ದ ನೀರಿನ ಬದಲಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅಪಾಯಕಾರಿ ಕೊಳಚೆ ನೀರು ತಂದು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವರಿಗೆ ತಕ್ಕಪಾಠ ಕಲಿಸಬೇಕೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ಜಿಲ್ಲೆಯ ಚಿಂತಾಮಣಿ ತಾಲೂಕಿನ ಶ್ರೀ ಕ್ಷೇತ್ರ ಕೈವಾರದಲ್ಲಿ ಬುಧವಾರ ಯೋಗಿ ನಾರೇಯಣ ತಾತ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮಗೆ ಒಂದು ಬಾರಿ ಸಂಪೂರ್ಣ ಬಹುಮತ ನೀಡಿ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನ ಮಾಡುತ್ತೇವೆಂದು ಕುಮಾರಸ್ವಾಮಿ ಭರವಸೆ ನೀಡಿದರು.
24 ಸಾವಿರ ಕೋಟಿ ಬೇಕಂತೆ: ಕೋಲಾರ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಕೊಡ್ತೀವಿ ಅಂತ ಇಲ್ಲಿವರೆಗೂ 10 ಸಾವಿರ ಕೋಟಿ ಖರ್ಚು ಮಾಡಿದರೂ ಒಂದು ಹನಿ ನೀರು ಬರಲಿಲ್ಲ. ಈಗ 24 ಸಾವಿರ ಕೋಟಿ ಹಣ ಬೇಕಂತೆ. ಈಗ ಬೆಂಗಳೂರಿನ ಕೊಳಚೆ ನೀರನ್ನು ನಿಮಗೆ ಕೊಟ್ಟು ಜನರನ್ನು ವಂಚಿಸಿದ್ದಾರೆ. ಕೋವಿಡ್ ಮತ್ತು ಮಳೆಯ ಅನಾಹುತದಿಂದ ಅನೇಕ ಸಮಸ್ಯೆ ಎದುರಾಗಿದೆ. ಇದರಿಂದ ಈಗಿನ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದರು. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಸೇರಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸಾವಿರಾರು ಜನ ಸಾವಿಗೀಡಾದರು. ಸತ್ತವರ ಕುಟುಂಬಗಳಿಗೆ ಒಂದು ಲಕ್ಷ ಪರಿಹಾರ ಕೊಡೋದಾಗಿ ಹೇಳಿದರು. ಆದರೆ ಒಂದು ರುಪಾಯಿ ಕೂಡ ಇಲ್ಲಿವರೆಗೂ ಬಿಡುಗಡೆಯಾಗಿಲ್ಲ. ನಾವು ಉತ್ತಮ ವೈದ್ಯರನ್ನ ನೇಮಕ ಮಾಡಿ, 24 ಗಂಟೆ ಖಾಸಗಿ ಆಸ್ಪತ್ರೆ ರೀತಿಯಲ್ಲಿ ಸೇವೆ ಸಿಗುವಂತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದರು.
Pancharatna Rathayatra: ಕೋಲಾರಕ್ಕೆ ಯಾರೇ ಬಂದ್ರೂ ನಮ್ಮ ಅಭ್ಯರ್ಥಿ ಬದಲಿಲ್ಲ: ಎಚ್‌ಡಿಕೆ
ಅಂಬೇಡ್ಕರ್ ಹೆಸರೇಳುವಂತೆ ಮನವಿ: ಕುಮಾರಸ್ವಾಮಿ ಮಾತನಾಡುವ ವೇಳೆ ಪಕ್ಷದ ಕಾರ್ಯಕರ್ತನೊಬ್ಬ ಅಂಬೇಡ್ಕರ್ ಹೆಸರು ಹೇಳುವಂತೆ ಮನವಿ ಮಾಡಿದರು. ಆಗ ಕುಮಾರಸ್ವಾಮಿ ಪ್ರತಿಕ್ರಿಯಿಸಿ ಅಂಬೇಡ್ಕರ್ ಹೆಸರು ಹೇಳಿದರೆ ಸಾಲದು, ಆದರೆ ಅವರ ಹೆಸರೇಳಿಕೊಂಡು ಏನೂ ಮಾಡದವರ ಬಗ್ಗೆ ನಾವು ಹೇಳಬೇಕಿದೆ. ತಿನ್ನೋಕೆ ಅನ್ನ ಇಲ್ಲದಂತೆ ಮಾಡಿದ್ದಾರೆ. ಅಂಬೇಡ್ಕರ್ ಸರ್ವರಿಗೂ ಸಮಪಾಲು, ಸಮಬಾಳು ಅಂದರು. ಆದರೆ ಅಧಿಕಾರದಲ್ಲಿದ್ದವರು ಏನೂ ಮಾಡದೆ ಹೋದರು. ಅಂತ ದೇಶ ನಮ್ಮದು ಎಂದರು. ಉಚಿತ ಶಿಕ್ಷಣ ನೀಡುವ ಕೆಲಸ ಸರ್ಕಾರಿ ಶಾಲೆಗಳಿಂದಲೇ ಆಗಬೇಕು. ಬಿಜೆಪಿ ಸರ್ಕಾರ ಬಂದ ಬಳಿಕ ಮಕ್ಕಳಿಗೆ ಶಾಂತಿಯುತ ಬದುಕು ಕಲಿಸೋವ ಬದಲು. ಬೇರೆ ರೀತಿಯದ್ದನ್ನೇ ಕಲಿಸಲು ಹೊರಟಿದ್ದಾರೆಂದು ಕಿಡಿಕಾರಿದ ಎಚ್‌ಡಿಕೆ, 2018ರಲ್ಲಿ ಪಬ್ಲಿಕ್ ಶಾಲೆ ಆರಂಭಿಸಿ 2ಸಾವಿರ ಕೋಟಿ ಹಣ ನೀಡಿದೆ. ಆದರೆ ಬಿಜೆಪಿ ಬಂದ ಬಳಿಕ ಅದನ್ನ ಮುಂದುವರೆಸಲಿಲ್ಲ ಎಂದು ಟೀಕಿಸಿದರು.
ರೈತನಿಂದ 25 ಸಾವಿರ ರು.ಗಳ ಚೆಕ್: ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ನಾರಾಯಣ ಸ್ವಾಮಿ ಅವರ ಪುತ್ರ ಚಂದ್ರಶೇಖರ್ ತಮ್ಮ ಸಾಲ ಮನ್ನಾ ಆಗಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಹೋರಾಟಕ್ಕೆ ಬೆಂಬಲವಾಗಿ 25 ಸಾವಿರ ರು, ಚೆಕ್ ನೀಡಿ ಗಮನ ಸೆಳೆದರು. ಈ ವೇಳೆ ಚೆಕ್ ಸ್ಪೀಕರಿಸಿದ ಕುಮಾರಸ್ವಾಮಿ ಇಂತಹವರಿಂದಾಗಿ ಪಕ್ಷಕ್ಕೆ ಇನ್ನಷ್ಟುಬಲ ಬಂದಿದೆ ಎಂದರು. ಈ ವೇಳೆ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಕೋಲಾರ ಎಂಲ್‌ಸಿ ಇಂಚರ ಗೋವಿಂದಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಮಾಜಿ ಎಂಎಲ್‌ಸಿ ತೂಪಲ್ಲಿ ಆರ್.ಚೌಡರೆಡ್ಡಿ, ಚಿಂತಾಮಣಿ ಮುಖಂಡರಾದ ದಿನ್ನಮಿಂದಹಳ್ಳಿ ಬೈರಾರೆಡ್ಡಿ, ವಿ.ಅಮರ್, ಜಿಪಂ ಮಾಜಿ ಸದಸ್ಯ ಮೌಲಾ, ಕೋಲಾರದ ರಾಜೇಶ್ವರಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
Pancharatna Rathayatra: ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಿರಿ: ಎಚ್ಡಿಕೆ ವಾಗ್ದಾಳಿ
ದಿನಾ 50 ಲಕ್ಷ ಎಲ್ಲಿಂದ ತರಲಿ?: ದಿನ ನಿತ್ಯ ನನ್ನ ಬಳಿಗೆ ಅನೇಕರು ಸಹಾಯ ಕೇಳಿಕೊಂಡು ಬರುತ್ತಾರೆ. ಆದರೆ ನಾನು ಎಲ್ಲಿಂದ ಹಣ ತರಲಿ. ನಾನು ಬೇರೆ ರಾಜಕಾರಣಿಗಳ ರೀತಿ ಖಾಸಗಿ ಶಾಲೆ ಇಟ್ಟುಕೊಂಡಿಲ್ಲ ಅಥವಾ ಉದ್ಯಮಿಯೂ ಅಲ್ಲ. ಪ್ರತಿ ದಿನ ಸಹಾಯ ಮಾಡಬೇಕು ಅಂದರೆ ಕನಿಷ್ಠ 50 ಲಕ್ಷ ಬೇಕು. ಆದರೆ ಅಷ್ಟುಹಣ ಎಲ್ಲಿಂದ ತರಲಿ. ನಮಗೆ ಒಂದು ಬಾರಿ ಸಂಪೂರ್ಣ ಬಹುಮತದ ಅವಕಾಶ ಕೊಡಿ. ನಿಮಗೆ ಉತ್ತಮ ಬದುಕು ಕೊಟ್ಟಿಕೊಡುತ್ತೇವೆ. 60 ವರ್ಷ ಮೇಲ್ಪಟ್ಟವರಿಗೆ ಕೊನೆಯವರೆಗೂ ಪಿಂಚಣಿ ಕೊಡಲಾಗುವುದು. ಅಷ್ಟೇ ಅಲ್ಲ ವಿಧವಾ ವೇತನ, ಅಂಗವಿಕಲರಿಗೆ ಕೂಡ ಪಿಂಚಣಿ ಹಣ ಹೆಚ್ಚಳ ಮಾಡಲಾಗುವುದೆಂದು ಮಾಜಿ ಸಿಎಂ ಎಚ್‌ಡಿ.ಕುಮಾರಸ್ವಾಮಿ ತಿಳಿಸಿದರು.