ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟು, ವಿಷಯಗಳನ್ನು ತಿರುಚಿ ಕಾಂಗ್ರೆಸ್ ಪಕ್ಷ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ಕೆ.ಆರ್.ಪೇಟೆ (ನ.24): ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟು, ವಿಷಯಗಳನ್ನು ತಿರುಚಿ ಕಾಂಗ್ರೆಸ್ ಪಕ್ಷ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು. ಸ್ವಗ್ರಾಮ ಬೂಕನಕೆರೆಯಲ್ಲಿ ಬುಧವಾರ ಗ್ರಾಮದೇವತೆ ಗೋಗಾಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅತ್ಯುತ್ತಮವಾಗಿ ಆಳ್ವಿಕೆ ನಡೆಸುತ್ತಿದ್ದಾರೆ. ಇದನ್ನು ಸಹಿಸದ ವಿರೋಧ ಪಕ್ಷಗಳು ಪ್ರತಿನಿತ್ಯ ದಾಳಿ ನಡೆಸುತ್ತಿವೆ.
ಇದರಿಂದ ಬೊಮ್ಮಾಯಿ ವಿಚಲಿತರಾಗದೇ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ವಿಪಕ್ಷ ನಾಯಕರ ಹುನ್ನಾರ ನಮಗೂ ಗೊತ್ತಿದೆ. ಇದನ್ನು ಸಮರ್ಥವಾಗಿ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಪಕ್ಷವೂ ಎದುರಿಸುತ್ತಿದೆ ಎಂದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುತ್ತಿದ್ದಾಗ ನಾನು ವಿಪಕ್ಷ ನಾಯಕನಾಗಿದ್ದೆ. ಆಡಳಿತದ ಯಂತ್ರ ತಪ್ಪಿದ್ದಾಗ ಎಚ್ಚರಿಸುವ ಕೆಲಸ ಮಾಡುತ್ತಿದ್ದೆ. ಆದರೆ, ಇಂದು ಕಾಂಗ್ರೆಸ್ ನಾಯಕರು ತಪ್ಪಲ್ಲದ ವಿಷಯಗಳನ್ನು ತಿರುಚಿ ರಾಜ್ಯದ ಜನರ ಮುಂದೆ ಇಟ್ಟು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಂದು ಸಲಹೆ ನೀಡಿದರು.
Mandya: ನಾಗಮಂಗಲ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ: ಚಲುವರಾಯಸ್ವಾಮಿ
ಶಾಸಕರ ಆತ್ಮಸಾಕ್ಷಿಗೆ ಬಿಟ್ಟಿದ್ದೇನೆ: ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಶಾಸಕರು ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಅವರ ಆತ್ಮಸಾಕ್ಷಿಗೆ ಬಿಟ್ಟಿದ್ದೀನಿ. ಬಿಜೆಪಿಯನ್ನು ಟೀಕಿಸುವ ಮೊದಲು ನಿಮ್ಮ ಸರಕಾರದಲ್ಲಿ ನೀವೇನು ಮಾಡಿದ್ದೀರಿ ಎಂಬುದನ್ನು ಅರಿಯಬೇಕು ಎಂದರು. ಮೈಷುಗರ್, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಮುಚ್ಚಿಸಿದವರು ಯಾರು? ಇಂದು ಬಿಜೆಪಿ ಸರಕಾರ ಬಂದ ಮೇಲೆ ಎರಡು ಕಾರ್ಖಾನೆಗಳನ್ನು ಆರಂಭಿಸಲಾಗಿದೆ. ರೈತರ ಕಣ್ಣೀರನ್ನು ಒರೆಸುವ ಕೆಲಸವನ್ನು ಬಿಜೆಪಿ ಮಾಡಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದಾರೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮೋದಿಜೀ ದೇಶದ ರಾಜಕಾರಣಕ್ಕೆ ಕರೆದೊಯ್ದಿದ್ದಾರೆ: ನಾನು ಬೂಕನಕೆರೆಯ ಮಣ್ಣಿನ ಮಗ. ನಿಮ್ಮ ಗ್ರಾಮದ ಮಗ ಬೆಂಗಳೂರಲ್ಲಿದ್ದಾನೆ ಅಂತ ತಿಳಿದುಕೊಳ್ಳಿ. ಖಂಡಿತಾ ನಾನು ನಿಮ್ಮ ಕೆಲಸಗಳನ್ನು ಮಾಡಿ ಕೊಡುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನನ್ನ ಮೇಲೆ ವಿಶ್ವಾಸವಿಟ್ಟು ದೇಶದ ರಾಜಕಾರಣಕ್ಕೆ ಕರೆದೊಯ್ದಿದ್ದಾರೆ. ಈ ಊರಿನ ಮಗನಾಗಿ ಮೋದಿಜಿಯವರ ಮತ್ತು ನಿಮ್ಮೆಲ್ಲರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದರು. ಶಾಸಕ ಹಾಗೂ ಸಚಿವ ನಾರಾಯಣಗೌಡರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಅಭಿವೃದ್ಧದ್ಧಿಯ ಮಹಾಪೂರವನ್ನೆ ಹರಿಸಿದ್ದಾರೆ. ಜಿಲ್ಲೆಗೆ ಜನಪರವಾದ ಕೆಲಸಗಳನ್ನು ಮಾಡಿಸಿದ್ದಾರೆ. ಕುಡಿಯುವ ನೀರಿಗೆ, ಹಾಗೂ ಕೃಷಿಗೆ ಬೇಕಾದ ನೀರನ್ನು ಒದಗಿಸಲು ಸಾವಿರಾರು ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿದ್ದೇವೆ.
ರಸ್ತೆ ಅಭಿವೃದ್ಧಿ ಬಗೆಗೆ ಗಮನವನ್ನು ಹರಿಸುವಂತೆ ನಾರಾಯಣಗೌಡರಿಗೆ ಹೇಳಿದ್ದೇನೆ. ಅನುದಾನವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ತಾಲೂಕಿಗೆ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ನಾರಾಯಣಗೌಡರ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನಗೆ ತೃಪ್ತಿಯಿದೆ. ಈ ಅಭಿವೃದ್ದಿಯನ್ನು ನೋಡಿ ಮುಂಬರುವ ಚುನಾವಣೆಯಲ್ಲಿ ನಾರಾಯಣಗೌಡರ ವಿರುದ್ದ ಯಾರೂ ಸ್ಪರ್ಧೆ ಮಾಡುವ ದುಸ್ಸಾಹಸವನ್ನು ಮಾಡಲಾರರು ಎನಿಸುತ್ತೆ ಎಂದು ಅಭಿಪ್ರಾಯಪಟ್ಟರು.
Mandya: ಜೆಡಿಎಸ್‌ನಿಂದ ಒಕ್ಕಲಿಗರ ಉಳಿವು: ಶಾಸಕ ಡಿ.ಸಿ.ತಮ್ಮಣ್ಣ
ಕಾರ್ಯಕ್ರಮದಲ್ಲಿ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ, ಗ್ರಾಪಂ ಅಧ್ಯಕ್ಷೆ ಸುನಂದ, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮುಖಂಡರಾದ ಬಿ.ಜವರಾಯಿಗೌಡ, ಹುಲ್ಲೇಗೌಡ, ಮೀನಾಕ್ಷಿ ಪುಟ್ಟರಾಜು, ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಬೂಕನಕೆರೆ ಮಧುಸೂದನ್ ಮತ್ತಿತರರು ಭಾಗವಹಿಸಿದ್ದರು.