ಜಾತ್ಯತೀತ ಜನತಾದಳ ಪಕ್ಷ ಕರ್ನಾಟಕದಲ್ಲಿ ಹಣದಿಂದ ರಾಜಕೀಯ ಮಾಡುತ್ತಿಲ್ಲ, ಅಂತಹ ಅಗತ್ಯವೂ ಇಲ್ಲ, ಪಕ್ಷಕ್ಕೆ ಹಣಕ್ಕಿಂತ ಜನ ಮುಖ್ಯ. ಜನ ಕೇಂದ್ರಿತ ರಾಜಕೀಯ ನಮ್ಮದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಕಲಬುರಗಿ (ಡಿ.03): ಜಾತ್ಯತೀತ ಜನತಾದಳ ಪಕ್ಷ ಕರ್ನಾಟಕದಲ್ಲಿ ಹಣದಿಂದ ರಾಜಕೀಯ ಮಾಡುತ್ತಿಲ್ಲ, ಅಂತಹ ಅಗತ್ಯವೂ ಇಲ್ಲ, ಪಕ್ಷಕ್ಕೆ ಹಣಕ್ಕಿಂತ ಜನ ಮುಖ್ಯ. ಜನ ಕೇಂದ್ರಿತ ರಾಜಕೀಯ ನಮ್ಮದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಆಳಂದದಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜೆಡಿಎಸ್ ದುಡ್ಡು ನೋಡಿ ರಾಜಕೀಯ ಮಾಡೋದಿದ್ರೆ ಪಂಚರತ್ನ ಯಾತ್ರೆ ಯಾಕೆ ಮಾಡಬೇಕಿತ್ತು? ಜನತಾ ಜಲಧಾರೆ ಜನರಿಂದಲೇ ನಡೆಯುತ್ತಿದೆಯೇ ಹೊರತು ಹಣದಿಂದ ಅಲ್ಲ, ಹಣಕ್ಕಿಂತ ನಮಗೆ ಜನ ಮುಖ್ಯ ಎಂದರು.
ಜೆಡಿಎಸ್ ಹಣದಿಂದ ಉಳಿದಿಲ್ಲ, ಜನರಿಂದ ಉಳಿದಿದೆ. ಹಣದಿಂದಲಾದರೆ ಪಂಚರತ್ನ, ಜನತಾ ಜಲಧಾರೆಯಂತಹ ಕಾರ್ಯಕ್ರಮಗಳನ್ನು ವರ್ಷಗಟ್ಟಲೇ ನಡೆಸಲಾಗುತ್ತಿರಲಿಲ್ಲ. ಯಾರನ್ನೂ ನಾವು ಹಣ ಕೊಟ್ಟು ಕರೆಯಿಸುತ್ತಿಲ್ಲ. ಕಳೆದ ಬಾರಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದ್ದು ಹಣಕ್ಕಾಗಿ ಅಲ್ಲ, ರೈತರ ಹಿತ ಕಾಪಾಡಲಿಕ್ಕಾಗಿ. ವಿರೋಧಿಗಳಿಗೆ ಆರೋಪ ಮಾಡಲು ಏನೂ ಇಲ್ಲ, ಇಲ್ಲದ್ದು ಆರೋಪಿಸುತ್ತ ಕಾಲಹರಣ ಮಾಡುತ್ತಿದ್ದಾರೆಂದರು. ರೌಡಿ ರಾಜಕೀಯ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಗೈಡರು ಆ ಬಗ್ಗೆ ತಾವು ಪ್ರತಿಕ್ರಿಯೆ ನೀಡೋದಿಲ್ಲ ಎಂದರಲ್ಲದೆ ಯಾರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೋ ಅವರನ್ನೇ ಕೇಳಿ ಎಂದರು.
ಕಾವೇರಿ: ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ: ಎಚ್.ಡಿ.ದೇವೇಗೌಡ
ಗಡಿ ವಿವಾದದ ವಿಚಾರದಲ್ಲಿ ಜೆಡಿಎಸ್ ಹಿಂದಿನ ನಿಲುವಿಗೆ ಕಟಿಬದ್ಧ. ಹಿಂದಿನ ಮಹಾಜನ್ ವರದಿಯೇ ಅಂತಿಮ ಎಂಬುದು ನಮ್ಮ ಪಕ್ಷದ ನಿಲುವಾಗಿದ್ದು ಇಂದಿಗೂ ಅದೇ ನಿಲುವಿಗೆ ನಾವು ಬದ್ಧ. ನಾವು ಅದೇ ನಿಲುವನ್ನು ಈಗಲೂ ಬೆಂಬಲಿಸುತ್ತೇವೆ. ವಿನಾಕಾರಣ ವಿವಾದಗಲು ಯಾಕೆ ಚುನಾವಣೆ ಪೂರ್ವ ಹುಟ್ಟು ಹಾಕೋದು, ಇಂತಹ ನಡತೆ ಯಾರಿಗೂ ಸರಿಯಲ್ಲ ಎಂದರು. ಮೊಮ್ಮಕ್ಕಳು ಬರೋ ಚುನಾವಣೆಯಲಿ ಕಣದಲ್ಲಿ ಇರುತ್ತಾರಾ ಎಂದು ಕೇಳಿದ ಪ್ರಶ್ನೆಗೆ ದೇವೇಗೌಡರು ಯಾವುದೇ ಉತ್ತರ ನೀಡಲಿಲ್ಲ. ಅನಿತಾ ಕುಮಾರಸ್ವಾಮಿ, ನಾಸೀರ್ ಹುಸೇನ್ ಉಸ್ತಾದ್ ಸೇರಿದಂತೆ ಅನೇಕರು ಇದ್ದರು.
ಚುನಾವಣೆ ಅಖಾಡಕ್ಕೆ ಇಳಿದು ಪ್ರಚಾರ ಮಾಡುವೇ: ನಾಡಿನ ಜನರ ಉತ್ತಮ ಬದುಕಿಗಾಗಿ ಪಾರದರ್ಶಕ ಆಡಳಿತ ನೀಡುವ ಜೆಡಿಎಸ್ ಸರ್ಕಾರ ರಚನೆಗಾಗಿ ಮುಂಬರುವ ಚುನಾವಣೆ ಅಖಾಡಕ್ಕಿಳಿದು ಪ್ರಚಾರ ಮಾಡುವೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆಯ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗುತ್ತೇನೆ. ಎಲ್ಲೆಡೆ ಪ್ರಚಾರಕ್ಕೆ ಹೋಗುತ್ತೇನೆಂದು ಗೌಡರು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರು ಪಂಚರತ್ನ ರಥಯಾತ್ರೆಯಲ್ಲಿ ತೊಡಗಿದ್ದಾರೆ. ಯಾತ್ರೆ ಸಾಗುವ ಹಳ್ಳಿಗಳಲ್ಲಿ ಪಕ್ಷದ ಮುಖಂಡರುಗಳು, ಮಾಜಿ ಹಾಗೂ ಹಾಲಿ ಶಾಸಕರುಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೂ ಮನೆ, ಮನೆಗೂ ತೆರಳಿ ನಡೆಸುವಂತೆ ಹೇಳಿದ್ದೇನೆ ಎಂದರು.
ದುಡ್ಡಿದ್ರೆನೇ ರಾಜಕೀಯನಾ, ಪತ್ರಕರ್ತರ ಪ್ರಶ್ನೆಗೆ ದೇವೇಗೌಡ ಸಿಡಿಮಿಡಿ: ದುಡ್ಡಿನ ರಾಜಕೀಯ ವಿಷಯವಾಗಿ ಪತ್ರಕರ್ತರೊಬ್ಬರು ಕೇಳಿದ ಪ್ರಧ್ನೆಗೆ ಗೌಡರು ತೀವ್ರ ಸಿಡಿಮಿಡಿಗೊಂಡ ಪ್ರಸಂಗ ಆಳಂದದಲ್ಲಿ ನಡೆಯಿತು. ಕುಮಾರಸ್ವಾಮಿ ಹಣದ ರಾಜಕೀಯ ಮಾಡುವುದಾಗಿದ್ದರೆ ಎಲ್ಲಡೆ ಪಂಚರತ್ನ ಕಾರ್ಯಕ್ರಮ ದುಡ್ಡಿನಿಂದಲೇ ನಡೆಯುತ್ತಿದೆಯೆ? ಎಂದು ಮಾಜಿ ಪ್ರಧಾನಿ ಖಾರವಾಗಿಯೇ ಪ್ರಶ್ನಿಸಿ ಪತ್ರಕರ್ತನಿಗೇ ಪಾಟೀಸವಾಲು ಹಾಕಿದರು.
ಎಲ್ಲ ರಾಜ್ಯದಲ್ಲೂ ಕನಿಷ್ಠ ಒಬ್ಬ ಜೆಡಿಎಸ್ ಶಾಸಕ ಇರಬೇಕು: ದೇವೇಗೌಡ
ಕಳೆದೊಂದು ವರ್ಷದಿಂದ ರಾಜ್ಯದೆಲ್ಲೆಡೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಜಲಧಾರೆ ಯಾತ್ರೆ ನಡೆದಿದ್ದು ದುಡ್ಡಿದ್ದರೆ ಜನರ ಬರುತ್ತಾರೆ ಅಂತ ನೀವು ಅಂದುಕೊಂಡಿದ್ದರೆ ತಪ್ಪು, ದುಡ್ಡಿದ್ದರೆ ಮಾತ್ರ ರಾಜಕೀಯ ಎನ್ನುವುದು ಸರಿಯಲ್ಲ, ಜೆಡಿಎಸ್ ಪಕ್ಷದಲ್ಲಿ ಜನರ ಮನಸಿಗೆ ನಾಟುವ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಮುಂದೆಯೂ ತರುವುದಿದೆ ಎಂದರು.