ಆಧುನಿಕ ಭಸ್ಮಾಸುರನಂತೆ ಪ್ರಧಾನಿ ಮೋದಿ ವರ್ತನೆ: ಕಾಂಗ್ರೆಸ್‌

By Govindaraj SFirst Published Dec 3, 2022, 3:00 AM IST
Highlights

ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಬಡ ಮಕ್ಕಳ ವಿದ್ಯಾರ್ಥಿವೇತನ ತಡೆ ಹಿಡಿಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಧುನಿಕ ಭಸ್ಮಾಸುರನಂತೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚಪ್ಪಡಿ ಎಳೆದಿದ್ದಾರೆ.

ಬೆಂಗಳೂರು (ಡಿ.03): ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಬಡ ಮಕ್ಕಳ ವಿದ್ಯಾರ್ಥಿವೇತನ ತಡೆ ಹಿಡಿಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಧುನಿಕ ಭಸ್ಮಾಸುರನಂತೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚಪ್ಪಡಿ ಎಳೆದಿದ್ದಾರೆ. ಕೂಡಲೇ ವಿದ್ಯಾರ್ಥಿ ವೇತನ ನಿಲ್ಲಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ವಿಧಾನಪರಿಷತ್‌ ಕಾಂಗ್ರೆಸ್‌ ಮುಖ್ಯ ಸಚೇತಕ ಪ್ರಕಾಶ್‌ ರಾಥೋಡ್‌, ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ‘ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ತಡೆ ಹಿಡಿಯುವ ಮೂಲಕ ಡಬಲ್‌ ಎಂಜಿನ್‌ ಸರ್ಕಾರ ಸಾಮಾಜಿಕ ನ್ಯಾಯವನ್ನು ಸಮಾಧಿ ಮಾಡಿದೆ’ ಎಂದು ದೂರಿದರು.

Ticket Fight: ತುಮಕೂರಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ

ದೇಶದ ಪ್ರಾಥಮಿಕ ಹಾಗೂ ಮಧ್ಯಮ ಶಾಲೆಗಳಲ್ಲಿ 22.56 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಶೇ.75 ಹಾಗೂ ರಾಜ್ಯದಿಂದ ಶೇ.25 ರಷ್ಟು ಸೇರಿಸಿ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. 2015 ರಿಂದ 2021ರವರೆಗೆ 5 ವರ್ಷದಲ್ಲಿ ಶ್ರೀಮಂತರ 10 ಲಕ್ಷ ಕೋಟಿ ರು. ಬ್ಯಾಂಕ್‌ ಸಾಲ ಮನ್ನಾ ಮಾಡಿರುವ ಮೋದಿ ಅವರು ಬಡವರ ವಿದ್ಯಾರ್ಥಿವೇತನ ತಡೆ ಹಿಡಿದಿರುವುದು ಬಡವರ ವಿರೋಧಿ ಕೃತ್ಯ ಎಂದು ಕಿಡಿಕಾರಿದರು.

ಪ್ರಕಾಶ್‌ ರಾಥೋಡ್‌ ಮಾತನಾಡಿ, ರಾಜ್ಯ ಸರ್ಕಾರವು ಪರಿಶಿಷ್ಟಜಾತಿ ಹಾಗೂ ಪಂಗಡಗಳಿಗೆ ತೀವ್ರ ಅನ್ಯಾಯ ಮಾಡುತ್ತಿದೆ. ಸರ್ಕಾರವು ಬಜೆಟ್‌ನಲ್ಲಿ ಈ ವರ್ಗಗಳಿಗೆ 29,165 ಕೋಟಿ ರು. ಅನುದಾನ ನೀಡಿದ್ದರೂ ಈವರೆಗೆ ಶೇ.15 ರಷ್ಟೂ ಬಳಕೆ ಮಾಡಿಲ್ಲ. ಈ ಮೂಲಕ ಪರಶಿಷ್ಟವರ್ಗಗಳ ವಿರೋಧಿ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದರು.

Tumakuru: ದೇಶಕ್ಕೆ ಕಾಂಗ್ರೆಸ್‌ ಪಕ್ಷ ಸಾಕಷ್ಟು ಕೊಡಿಗೆ ನೀಡಿದೆ: ಡಾ.ಜಿ.ಪರಮೇಶ್ವರ್‌

ಪಿ.ಆರ್‌. ರಮೇಶ್‌ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯಕ್ಕೆ ಮೊದಲು ಶೇ.12 ರಷ್ಟು ಸಾಕ್ಷರತೆ ಇತ್ತು. 75 ವರ್ಷಗಳ ಸುದೀರ್ಘ ಪರಿಶ್ರಮ ಹಾಗೂ ಜನಪರ ಕಾರ್ಯಕ್ರಮಗಳಿಂದಾಗಿ ಇದೀಗ ಸಾಕ್ಷರತೆ ಶೇ.78ಕ್ಕೆ ಹೆಚ್ಚಾಜಿದೆ. ಬಿಜೆಪಿಯವರು ಆರ್‌ಎಸ್‌ಎಸ್‌ ಧೋರಣೆಯಿಂದ ವಿದ್ಯಾರ್ಥಿವೇತನ ಕೈಬಿಟ್ಟಿದ್ದು, ಇದರಿಂದ ಮತ್ತೆ ದಲಿತರು, ಹಿಂದುಳಿದ ವರ್ಗದವರು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಬಿಎಂಪಿ ಮಾಜಿ ಮೇಯರ್‌ ರಾಮಚಂದ್ರಪ್ಪ ಹಾಜರಿದ್ದರು.

click me!