
ಬೆಂಗಳೂರು (ಆ.29): ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ಬಿ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಒಂದೇ ಖಾತೆಗೆ ಎರಡು ಬಾರಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ವಾಲ್ಮೀಕಿ ನಿಗಮದ ಖಾತೆಯಿಂದಲೇ ನೇರವಾಗಿ ಮುಂಬೈ ಮೂಲದ ಮೂವರಿಗೆ ಹಣ ವರ್ಗಾವಣೆಯಾಗಿದೆ. ಹಾಗಾದರೆ ನಿಮಗೂ(ಬಿ ನಾಗೇಂದ್ರ) ಇವರಿಗೂ ಇರೋ ಸಂಬಂಧ ಏನು? ಈ ಬಗ್ಗೆ ಬಳ್ಳಾರಿಯ ಮುಸ್ಲಿಂ ಮುಖಂಡರಿಗೆ ಸ್ಪಷ್ಟಪಡಿಸಲಿ. ಈ ಪ್ರಕರಣದಲ್ಲಿ 24 ಜನರು ನೇರವಾಗಿ ಭಾಗಿಯಾಗಿದ್ದಾರೆ. ಆರು ನೂರು ಅಕೌಂಟ್ ಗೆ ಹಣ ವರ್ಗಾವಣೆಯಾಗಿ ಅಲ್ಲಿಂದ ಡ್ರಾ ಮಾಡಿಕೊಳ್ಳಲಾಗಿದೆ. ಅದೇ ಹಣದಿಂದ ನಾಗೇಂದ್ರ ಕಾರು, ಬಂಗಾರ, ಮನೆ ಎಲ್ಲವನ್ನೂ ತೆಗೆದುಕೊಂಡಿದ್ದಾನೆ.. ಇ.ಡಿ.ಚಾರ್ಜ್‌ಶೀಟ್ ಇಟ್ಟುಕೊಂಡು ವಾಗ್ದಾಳಿ ನಡೆಸಿದರು.
ಹುಚ್ಚುಚ್ಚಾಗಿ ಮಾತಾಡೋ ನಾಗೇಂದ್ರ ಕಲಿಯುಗದ ಶಂಬೂಕನಿದ್ದಂತೆ. ನಾಗೇಂದ್ರನ ಮುಟ್ಟಿದ್ರೆ ಒಂದು ಲಕ್ಷ ಜನ ನಾಗೇಂದ್ರ ಬರ್ತಾರೆ ಎಂಬ ಹೇಳಿಕೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಜನಾರ್ದನ ರೆಡ್ಡಿ ಅವರು, 'ಏಯ್ ನಾಗೇಂದ್ರ, ಏಯ್ ಮೂರ್ಖ, ಸೊಕ್ಕಿನಿಂದ ಮಾತಾಡ್ತೀಯಾ? ದುರಹಂಕಾರ ತೋರಿಸ್ತಿಯಾ? ಹುಡುಗ ಆಗಿದ್ದಾಗ ನಿನ್ನನ್ನು ಬೆಳೆಸಿರುವೆ, ನಿನ್ನ ಅಣು ಅಣುವೂ ನನಗೆ ಗೊತ್ತು. ನಮಗೆ ಚಾಲೆಂಜ್ ಮಾಡ್ತಿಯಾ? ಈಗ ರಾಜೀನಾಮೆ ಕೊಡುವಾಗ ಕಣ್ಣೀರು ಹಾಕ್ತಿಯಲ್ಲ ಅದು ಕರ್ಮದ ಕಣ್ಣೀರು. ಮೂರು ಲಕ್ಷ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾದ ಕೋಟ್ಯಂತರ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರ ಕರ್ಮ ಈಗ ಸುತ್ತಿಕೊಂಡಿದೆ. ಸತ್ತ ಚಂದ್ರಶೇಖರ್ ಆತ್ಮದ ಕರ್ಮ ನಿನ್ನನ್ನು ಸುಮ್ಮನೆ ಬಿಡೋಲ್ಲ.. ಕೆಟ್ಟ ಕರ್ಮದ ಕಣ್ಣೀರು ಇನ್ನೂ ಹಾಕಬೇಕಿದೆ ಎಂದು ಎಚ್ಚರಿಸಿದರು.
ನಮ್ಮನ್ನು ರಿಜಕ್ಟ್ ಪೀಸ್ ಅಂತಾನೆ ಇವ್ನು. ಶ್ರೀರಾಮುಲು ಮತ್ತು ನನ್ನ ಹೆಸರನ್ನ ಪದೇಪದೆ ಉಲ್ಲೇಖ ಮಾಡ್ತಾನೆ. ಸಿದ್ದರಾಮಯ್ಯ, ಯಡಿಯೂರಪ್ಪ, ವಾಜಪೇಯಿ, ಎಸ್‌ಎಂ ಕೃಷ್ಣ ಎಲ್ಲರೂ ಸೋತು ಗೆದ್ದವರೇ. ಶ್ರೀರಾಮುಲು ಸೋತಿರೋ ಬಗ್ಗೆ ಮಾತಾಡ್ತಿಯಾ? ಖರ್ಗೆ ಸೋತಿಲ್ವ? ಅವರು ರಿಜಕ್ಟ್ ಪೀಸ್ ಅಲ್ವ? ಕಲಬುರಗಿಯಲ್ಲಿ ಸೋತ ಬಳಿಕ ಎಐಸಿಸಿ ಅಧ್ಯಕ್ಷ ಮಾಡಿಲ್ವ? ಸೋಲು ಗೆಲುವು ರಾಜಕೀಯದಲ್ಲಿ ಸಾಮಾನ್ಯ. ನೀನು ಗೆದ್ದಾದರೂ ಮಾಡಿದ್ದೇನು? ವಾಲ್ಮೀಕಿ ನಿಗಮ ಹಗರಣ ಮಾಡಿದ್ದು ಸಾಧನೆ. ಸಿದ್ದರಾಮಯ್ಯ ಯಾಕೆ ನಿನ್ನ ರಾಜೀನಾಮೆ ಪಡೆದ್ರು? ಈಗ ಡಿಕೆ ಶಿವಕುಮಾರ್ ಯಾಕೆ ರಾಜೀನಾಮೆ ಪಡೆದ್ರು? ಮೊದಲಸಲ ಸದನದಲ್ಲೇ ಸಿದ್ದರಾಮಯ್ಯರೇ ಹಗರಣ ನಡೆದಿರೋದು ಒಪ್ಪಿಕೊಂಡ್ರು. ಹಗರಣ ಮಾಡಿಲ್ಲ ಅಂತಾದ್ರೆ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಪಡೆದ್ರು? ಡಿಕೆ ಶಿವಕುಮಾರ್ಗೆ ಆಗಲಿ, ಸಿದ್ದರಾಮಯ್ಯರಿಗೆ ಆಗಲಿ ಇಬ್ಬರ ಆಯ್ಕೆ ನೀನಲ್ಲ. ನೀನಿವತ್ತು ರಾಜೀನಾಮೆ ಕೊಟ್ಟಿದ್ದಕ್ಕೆ ಚಂದ್ರಶೇಖರ್ ಆತ್ಮ ಖುಷಿ ಪಟ್ಟಿರುತ್ತದೆ ಎಂದು ವಾಗ್ದಾಳಿ ನಡೆಸಿದರು.
ತಾಕತ್ ಬಗ್ಗೆ ಮಾತಾಡ್ತೀಯಾ ಏಯ್ ನಾಗೇಂದ್ರ ನೀನು ನಿನ್ನ ಕಾಂಗ್ರೆಸ್ ಪಕ್ಷ ವಾಲ್ಮೀಕಿ ಹಗರಣದಲ್ಲಿ ತುಕಾರಾಂ ಗೆದ್ದಿರೋದು ಕಣೋ, ನಿನಗೆ ತಾಕತ್ತು ಇದ್ರೆ ಮೊದಲು ತುಕಾರಾಂ ರಾಜೀನಾಮೆ ಕೊಡಿಸು ನೋಡೋಣ. ಯಾರ್ಯಾರಿಗೆ ಎಷ್ಟು ಹಣ ಕೊಟ್ಟು ತುಕಾರಾಂ ಸಂಸದರಾಗಿದ್ದಾರೆ ಎಂದು ನನಗೆ ಗೊತ್ತಿದೆ. ತುಕಾರಾಂ ಸಮೇತ ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಶಾಸಕರ ರಾಜೀನಾಮೆ ಕೊಡಿಸಿ ಚುನಾವಣೆ ನಿಲ್ಲು ನಾನು ರೆಡಿ, ನಾನು ಬಳ್ಳಾರಿಗೆ ಬಂದಿದ್ದೇನೆ.. ನಾಗೇಂದ್ರನ ಸವಾಲಿಗೆ ಪ್ರತಿಸವಾಲು ಹಾಕಿದ ಜನಾರ್ದನ ರೆಡ್ಡಿ!
ಮುಂದಿನ ಚುನಾವಣೆಯಲ್ಲಿ ಬಳ್ಳಾರಿಯ ಅಖಂಡ ಜಿಲ್ಲೆಯ ಹತ್ತಕ್ಕೆ ಹತ್ತು ಕ್ಷೇತ್ರ ಸೇರಿದಂತೆ ಬಳ್ಳಾರಿ ಲೋಕಸಭಾ ಗೆಲ್ತೇವೆ ಎಂದು ಚಾಲೆಂಜ್ ಮಾಡಿದ ಜನಾರ್ದನ ರೆಡ್ಡಿ, 'ನಾವು ಓಪನ್ ಚಾಲೆಂಜ್ ಮಾಡ್ತೇವೆ ಬನ್ನಿ ಕಾಂಗ್ರೆಸ್ ನಾಯಕರೇ ನಾಗೇಂದ್ರ ಚಾಲೆಂಜ್ ಒಪ್ಪಿಕೊಂಡು ಬನ್ನಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷಕ್ಕೆ ತಲೆತಗ್ಗಿಸೋ ಪರಿಸ್ಥಿತಿ
ಸಿದ್ದರಾಮಯ್ಯ ಸಂಪುಟದಿಂದ ನಾಗೇಂದ್ರನ ತೆಗೆದುಹಾಕಿದಾಗ ಹಗರಣ ನಡೆದಿರಲಿಲ್ಲವ? ಕಾಂಗ್ರೆಸ್ ಪಕ್ಷ ನಾಗೇಂದ್ರನಿಂದಾಗಿ ತಲೆತಗ್ಗಿಸೋ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಪಡೆದಿದ್ದಾರೆ. ಹಗರಣ ನಡೆದಿದ್ದು ಬಿಟ್ಟು ಕಣ್ಣೀರು ಹಾಕೋದೇನು, ಚಾಲೆಂಜ್ ಮಾಡೋದೇನು, ಮನುಸ್ಮೃತಿ, ದಲಿತ.. ಏನೇನೋ ಸಂಬಂಧವಿಲ್ಲದ್ದು ಮಾತನಾಡಿ ಜನರ ದಿಕ್ಕುತಪ್ಪಿಸೋ ಕೆಲಸ ಮಾಡೋ ನಾಗೇಂದ್ರ ನಿಮ್ಮ ಮಾತು ಈಗ ಯಾರೂ ನಂಬುವುದಿಲ್ಲ. ಹಗರಣ ನಡೆದಿದ್ದು ಚಾರ್ಜ್ ಶೀಟ್‌ನಲ್ಲೇ ದಾಖಲಾಗಿದೆ. ಈಗ ದಲಿತ, ಮನುಸ್ಮೃತಿ ಮಾತು ಕೇಳಿದ್ರೆ ಇದೆಲ್ಲ ನಂಬೋಕೆ ಜನರೇನು ಮೂರ್ಖರಾ? ಈಗ ಎಲ್ಲರಿಗೂ ರಾಜಕೀಯ ತಿಳಿವಳಿಕೆ ಇದೆ, ನಿನ್ನ ಮಾತುಗಳಿಂದ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು.
ತುಕಾರಾಂ ಕುಟುಂಬಕ್ಕೆ ಮಂತ್ರಿ ಸಿಕ್ಕರೆ ನಮ್ಮ ಹೋರಾಟ ಮುಂದುವರಿಯುತ್ತೆ
ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ಪಡೆದ್ರೆ ಎಲ್ಲ ಮುಗಿದಂತಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರಿಗೆ ನಾವು ಹೋರಾಟ ಮುಂದುವರಿಸುತ್ತೇವೆ. ನಾಳೆ ನಾಗೇಂದ್ರನ ಸ್ಥಾನಕ್ಕೆ ತುಕಾರಾಂ ಕುಟುಂಬದ ಸದಸ್ಯರು ಮಂತ್ರಿಯಾದರೂ ನಮ್ಮ ಹೋರಾಟ ನಡೆಯುತ್ತೆ ಎಂದು ಎಚ್ಚರಿಸಿದರು.
ವಾಲ್ಮೀಕಿ ಹಗರಣದ ದುಡ್ಡಲ್ಲೇ ತುಕಾರಾಂ ಪತ್ನಿ ಶಾಸಕಿ
ವಾಲ್ಮೀಕಿ ಹಗರಣ ದುಡ್ಡನ್ನು ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಅದೇ ಹಣದಲ್ಲಿ ಸಂಸದ ತುಕಾರಾಂ ಪತ್ನಿ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿದ್ದಾರೆ. ಇಂಥವರನ್ನು ಈಗ ಮಂತ್ರಿಯಾಗಿ ಮಾಡಿದ್ರೆ ನಮ್ಮ ಹೋರಾಟ ನಿಶ್ಚಿತ. ಈ ಬಗ್ಗೆ ನಮ್ಮ ನಾಯಕರಾದ ವಿಜಯೇಂದ್ರ, ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಪಾದಯಾತ್ರೆ ನಿಲ್ಲೋದಿಲ್ಲ. ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗದ ಯಾರೇ ಮಂತ್ರಿಯಾದರೂ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ ಜನಾರ್ದನ ರೆಡ್ಡಿ ಅವರು, ನಾಗೇಂದ್ರ ಒಂದು ವಿಷಯ ಮಾತ್ರ; ರಾಜೀನಾಮೆ ಬಳಿಕವೂ ನಮ್ಮ ಪಾದಯಾತ್ರೆ ಮುಂದುವರಿಯುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.