ಬಿ ನಾಗೇಂದ್ರ ರಾಜೀನಾಮೆ ಆಯ್ತು, ಕೆಪಿಎಸ್‌ಸಿ ಎಇಇ ನೇಮಕಾತಿ ಹಗರಣದಲ್ಲಿ ಈಗ ಪ್ರಿಯಾಂಕ್ ಖರ್ಗೆ ಸರದಿ! ಹೆಚ್‌ಡಿಕೆ ಗಂಭೀರ ಆರೋಪ!

Kannadaprabha News   | Kannada Prabha
Published : Aug 29, 2026, 08:53 AM IST
after B Nagendra resigned now Priyank kharge s turns in kpsc aee scam hdk serious allegation rav

ಸಾರಾಂಶ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ನಡೆದ ಎಇಇ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ. ರಾಜೀನಾಮೆಗೆ ಆಗ್ರಹ

ಬೆಂಗಳೂರು (ಆ.29) : ಪ್ರಿಯಾಂಕ್ ಖರ್ಗೆ(Priyank kharge) ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಂತ್ರಿಯಾಗಿದ್ದಾಗ ಕರ್ನಾಟಕ ಲೋಕಸೇವಾ ಆಯೋಗ(KPSC)ಮುಖಾಂತರ ನಡೆದ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್(ಎಇಇ) ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

ನಾಗೇಂದ್ರ ಆಯ್ತು ಈಗ ಪ್ರಿಯಾಂಕ್ ರಾಜೀನಾಮೆಗೆ ಪಟ್ಟು!

ಈ ಅಕ್ರಮ ನೇಮಕಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು ಹಾಗೂ ಸಚಿವ ಸ್ಥಾನಕ್ಕೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ‘ರಾಜ್ಯದಲ್ಲಿ ಪ್ರಿಯಾಂಕ್ ಕೃಪಾ ಪೋಷಿತ ಮಂಡಳಿ ನಡೆಯುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ ಇದು. ಇಡೀ ಹಗರಣವನ್ನು ಮುಚ್ಚಿ ಹಾಕಲು ಅವರು ಈಗ ಗೃಹ ಖಾತೆ ವಹಿಸಿಕೊಂಡಂತಿದೆ’ ಎಂದು ದೂರಿದರು. ಅಕ್ರಮಕ್ಕೆ ಸಂಬಂಧಿಸಿದ ತನಿಖಾ ವರದಿ, ಓಎಂಆರ್ ಶೀಟ್‌ಗಳನ್ನು ಕಾರ್ಬನ್ ಬಳಸಿ ತಿದ್ದಿರುವ ಹಲವು ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಆರೋಪಿತ ಅಧಿಕಾರಿಗೆ ರಕ್ಷಣೆ:

ನನಗೆ ಅಧಿಕಾರ ಕೊಟ್ಟರೆ ಕೆಪಿಎಸ್ಸಿ ಮತ್ತು ನೇಮಕ ರದ್ದು ಮಾಡುವೆ ಎಂದು ಪ್ರಿಯಾಂಕ್‌ ಹೇಳಿದ್ದಾರೆ. ಕಾನೂನು ಮಾಡುವುದು ನಾವೇ ಎಂದಿದ್ದಾರೆ. ಒಂದು ಕಡೆ ಕೆಪಿಎಸ್ಸಿ ರದ್ದು ಮಾಡುವೆ ಎಂದು ವೀರಾವೇಶದ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು, ಮತ್ತೊಂದು ಕಡೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಂದು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಆಗ್ರಹ:

ಪ್ರಿಯಾಂಕ್ ಖರ್ಗೆ ಅವರು ತಮ್ಮಲ್ಲಿ ಪಾರದರ್ಶಕತೆ ಅಥವಾ ಮಾತಿನ ಮೇಲೆ ನಿಗಾ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಇದನ್ನು ಸಿಬಿಐಗೆ ಕೊಡಬೇಕು ಎಂದು ಹೇಳಿತ್ತು. ಈ ಸರ್ಕಾರದ ಯೋಗ್ಯತೆಗೆ ಒಂದು ಎಫ್ಐಆರ್ ಹಾಕಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.

ಸಬ್‌ ಕಮಿಟಿ ವರದಿಯಲ್ಲಿ ಅಕ್ರಮ ಉಲ್ಲೇಖ:

ಅಕ್ರಮ ನಡೆದಿರುವುದು, ಓಎಂಆರ್ ಶೀಟ್ ತಿದ್ದಿರುವುದು ಫೋರೆನ್ಸಿಕ್ ತನಿಖೆ ವರದಿಯಲ್ಲಿ ಸಾಬೀತಾಗಿದೆ. ಸಬ್ ಕಮಿಟಿ ಓಎಂಆರ್ ಶೀಟ್ ಸೇರಿ ಎಲ್ಲವನ್ನೂ ಪರಿಶೀಲಿಸಿದೆ. ನ್ಯೂನತೆ ಕಂಡು ಬಂದ ಹಿನ್ನೆಲೆಯಲ್ಲಿ ಆ ಸಬ್ ಕಮಿಟಿ ಸದಸ್ಯರು 24 ಅಭ್ಯರ್ಥಿಗಳಿಗೆ ನೊಟೀಸ್ ಕೊಟ್ಟಿದ್ದಾರೆ. ಆ ಸಮಿತಿ ಮುಂದೆ 20 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದು, ಉಳಿದ ನಾಲ್ವರು ಗೈರು ಹಾಜರಾಗಿದ್ದಾರೆ. ಹೀಗಾಗಿ ಫೋರೆನ್ಸಿಕ್ ಪ್ರಯೋಗಾಲಕ್ಕೆ ಓಎಂಆರ್ ಶೀಟ್ ಸೇರಿ ಎಲ್ಲವನ್ನೂ ಕಳುಹಿಸಿದ್ದರು. ಆಯೋಗದ ಕಾರ್ಯದರ್ಶಿ ಡಿಪಿಆರ್‌ಗೆ ಸಿಸಿಟಿವಿ ಪರಿಶೀಲನೆಗಾಗಿ ಪತ್ರ ಬರೆದಿದ್ದರು. ಬಳಿಕ ಫೋರೆನ್ಸಿಕ್ ಲ್ಯಾಬ್ ಗೆ ಫೂಟೇಜ್‌ ಕಳಿಸುತ್ತಾರೆ. ಅಲ್ಲಿ ಅಕ್ರಮ ಆಗಿರುವುದು ಸಾಬೀತಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.

ಶೀಘ್ರದಲ್ಲೇ ಮತ್ತಷ್ಟು ದಾಖಲೆ ಬಿಡುಗಡೆ:

ಈ ವಿಷಯವನ್ನು ನಾನು ಇಲ್ಲಿಗೆ ಬಿಡುವುದಿಲ್ಲ. ಈಗ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಯಾವುದೇ ಕ್ರಮ ಆಗದೆ ನಾನು ಬಿಡಲ್ಲ. ಈ ಅಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಭಾಗಿಯಾಗಿದ್ದಾರೆ. 24 ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮ ಸಾಬೀತಾಗಿದೆ. ಆದರೂ ಪ್ರಿಯಾಂಕ್ ಖರ್ಗೆ ತರಾತುರಿಯಲ್ಲಿ ನೇಮಕಾತಿ ಮಾಡಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಸಚಿವ ಆಗ್ರಹಿಸಿದರು.

ಅಧ್ಯಕ್ಷ, ಸದಸ್ಯರ ಒಪ್ಪಿಗೆ ಇಲ್ಲದೆ ಲಿಸ್ಟ್‌ ಅಂತಿಮ:

ಅಂದಿನ ಕಾರ್ಯದರ್ಶಿ ಅವರು ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರು ಒಪ್ಪಿಗೆ ಇಲ್ಲದೆ ಪ್ರಾವಿಷನ್ ಲಿಸ್ಟ್ ಅಂತಿಮಗೊಳಿಸಿದ್ದಾರೆ. ಯಾರ ಒತ್ತಡದ ಮೇಲೆ ಅವರು ಇದೆಲ್ಲವನ್ನೂ ಮಾಡಿದರು ಎಂಬುದು ಗೊತ್ತಾಗಬೇಕಿದೆ. ಅವರ ವಿರುದ್ಧ ಸರ್ಕಾರ ಏನು ಕ್ರಮ ಜರುಗಿಸಿದೆ? ಈ ನೇಮಕಾತಿ ಅಕ್ರಮದಲ್ಲಿ ಯಾರಿಗೆ ಕಿಕ್ ಬ್ಯಾಕ್ ಹೋಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಲಿ. 24 ಅಭ್ಯರ್ಥಿಗಳು ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅವರ ಓಎಂಆರ್ ಶೀಟ್ ಗಳು ತಿದ್ದುಪಡಿ ಆಗಿವೆ. ಅಕ್ರಮ ಆಗಿದೆ ಅಂತ ವರದಿ ‌ಇದೆ. ಇದರ ಬಗ್ಗೆ ಅವರು ಯಾಕೆ ಮಾತಾಡಲ್ಲ ಎಂದು ಪ್ರಶ್ನಿಸಿದರು.

ಯುವ ಜನರು ಬೀದಿಗಿಳಿದು ಹೋರಾಡಿ:

ರಾಜ್ಯದಲ್ಲಿ ಇಷ್ಟೆಲ್ಲ ಅನ್ಯಾಯ ಮತ್ತು ಅಕ್ರಮಗಳು ನಡೆಯುತ್ತಿವೆ. ನಿರುದ್ಯೋಗಿಗಳು, ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಮೌನವಾಗಿರುವುದೇಕೆ? ನೀವೆಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕು. ನಿರುದ್ಯೋಗಿಗಳು ಎದ್ದೇಳದಿದ್ದರೆ ನಿಮಗೆ ಉದ್ಯೋಗ ಸಿಗುವುದು ಸುಲಭವಲ್ಲ. ಹೀಗಾಗಿ ಬೀದಿಗಿಳಿದು ಹೋರಾಟ ಮಾಡಿ ಎಂದು ಕರೆ ನೀಡಿದರು.

ಮುಖ್ಯಾಂಶಗಳು

  • ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅಕ್ರಮ ನೇಮಕಾತಿ ಸಂಬಂಧ ದಾಖಲೆ ಪ್ರದರ್ಶಿಸಿದರು.
  • ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎಇಇಗಳ ನೇಮಕಕ್ಕೆ 2023ರಲ್ಲಿ ಪರೀಕ್ಷೆ, 24 ಜನರ ಆಯ್ಕೆ
  • ಆದರೆ ಕೆಲ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆನಂದ್‌ ಸಿದ್ದಾರೆಡ್ಡಿ ದೂರು
  • ಈ ಹಿನ್ನೆಲೆಯಲ್ಲಿ ತನಿಖೆಗೆ ಕೆಪಿಎಸ್ಸಿ ಸದಸ್ಯ ವಿಜಯ್‌ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚನೆ
  • ಅಕ್ರಮದ ಬಗ್ಗೆ ಸಿಸಿಟೀವಿ, ವಿಡಿಯೋ ಸಾಕ್ಷ್ಯಗಳಿವೆ. ಸಿಐಡಿ ತನಿಖೆ ಸೂಕ್ತ ಎಂದು ಸಮಿತಿ ವರದಿ
  • ಆದರೂ ಸಿಐಡಿ ತನಿಖೆಗೆ ಆದೇಶಿಸದ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷ ಮತ್ತು ಕಾರ್ಯದರ್ಶಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

B Nagendra Redux: ಒಂದೇ ಹಗರಣಕ್ಕೆ ಎರಡು ಬಾರಿ ನಾಗೇಂದ್ರ ರಾಜೀನಾಮೆ, ಸಂಪುಟದ 2 ಖಾಲಿ ಸ್ಥಾನಗಳು ಯಾರಿಗೆ?
KPSC Scam: 200 ಕೋಟಿ ಪಡೆದು ಸಾಹುಕಾರನ ಅಧ್ಯಕ್ಷ ಮಾಡಿದ್ದು ಯಾರು? ಶಿವಶಂಕರಪ್ಪ ಮನೆಯಲ್ಲಿ ಯಾರ ಫೋಟೋ ಇವೆ? ಹೆಚ್‌ಡಿಕೆಗೆ ಪ್ರಿಯಾಂಕ್ ಸವಾಲ್!