ಮುಂದಿನ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಖಚಿತ: ಡಿ.ಕೆ.ಶಿವಕುಮಾರ್‌

By Kannadaprabha News  |  First Published Feb 22, 2023, 12:22 PM IST

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಯಿಂದ ಬೇಸತ್ತಿರುವ ಕರ್ನಾಟಕದ ಜನತೆ ಮುಂದಿನ ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ರಾಜ್ಯಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು. 
 


ಹನೂರು (ಫೆ.22): ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಯಿಂದ ಬೇಸತ್ತಿರುವ ಕರ್ನಾಟಕದ ಜನತೆ ಮುಂದಿನ ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ರಾಜ್ಯಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಆರ್‌ಎಸ್‌ ದೊಡ್ಡಿಯಲ್ಲಿ ಕಾಂಗ್ರೆಸ್‌ ಪಕ್ಷವು ಮಂಗಳವಾರ ಹಮ್ಮಿಕೊಂಡಿದ್ದ ಹನೂರು ವಿಧಾನಸಭಾ ಕ್ಷೇತ್ರದ ಪ್ರಜಾಧ್ವನಿಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು. ಭ್ರಷ್ಟ ಬಿಜೆಪಿ ಸರ್ಕಾರದ ಜನವಿರೋಧಿ ಕಾರ್ಯಕ್ರಮಗಳು ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ.

ಬಿಜೆಪಿ ಸರ್ಕಾರದ ಪಾಪದ ಪುರಾಣವನ್ನು ಜನರ ಮುಂದೆ ಪ್ರದರ್ಶಿಸಿ, ಜನರ ದುಃಖ, ಕಷ್ಟ, ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡಿದೆ. ಬಿಜೆಪಿ ಸರ್ಕಾರದಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದು, ಗುತ್ತಿಗೆದಾರರ ರಾಜ್ಯಾಧ್ಯಕ್ಷ ಕೆಂಪಣ್ಣ ದಯಾಮರಣ ಕೇಳಿದ್ದು, ರಾಜ್ಯಾದ್ಯಂತ ಗುತ್ತಿಗೆದಾರರು ಸಿಡಿದೇಳಿದ್ದಕ್ಕೆ 40% ಸರ್ಕಾರ ಕಾರಣ. ದೇಶದ ಇತಿಹಾಸವನ್ನು ಒಮ್ಮೆ ನೋಡಿದಾಗ ಬಡವರ ಶೋಷಿತರ ಹಿಂದುಳಿದ ವರ್ಗಗಳ ಪರವಾದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿರುವುದು ಕಾಂಗ್ರೆಸ್‌ ಸರ್ಕಾರ ಎಂಬುದನ್ನು ನಾವೆಲ್ಲರೂ ಮರೆಯಬಾರದು.

Tap to resize

Latest Videos

undefined

ಗೆಲ್ಸಿದ ಆನೆ ಕಾಡಿಗಟ್ಟಿ ಸ್ವಾರ್ಥಕ್ಕೆ ಕಮಲ ಹಿಡಿದ ಮಹೇಶ್‌: ಡಿ.ಕೆ.ಶಿವಕುಮಾರ್‌

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದರೆ 200 ಯೂನಿಟ್‌ ಉಚಿತ ವಿದ್ಯುತ್‌, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌. ಉಚಿತ 10 ಕೆ.ಜಿ. ಪಡಿತರ ಮತ್ತು ಪ್ರತಿ ಕುಟುಂಬದ ಮುಖ್ಯಸ್ಥ ಮಹಿಳೆಯ ಖಾತೆಗೆ ತಿಂಗಳಿಗೆ 2000 ರು. ನೀಡಲಾಗುವುದು ಎಂದು ಭರವಸೆ ನೀಡಿದರು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 7500 ವಿದ್ಯಾರ್ಥಿಗಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, 151 ವಿವಿಧ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. 108 ಕೋಟಿ ರು. ವೆಚ್ಚದಲ್ಲಿ ಉತ್ತಮ ರಸ್ತೆ ನಿರ್ಮಾಣ ಜೊತೆಗೆ ಪ್ರತಿ ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಿ.ಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡಲಾಗಿದೆ ಇದು ಕಾಂಗ್ರೆಸ್‌ ಸರ್ಕಾರದ ಕೊಡುಗೆಯಾಗಿದೆ.

ಇದೇ ಚಾಮರಾಜನಗರದಲ್ಲಿ ಕೋವಿಡ್‌ ಸೋಂಕಿತರು ಆಕ್ಸಿಜನ್‌ ಇಲ್ಲದೆ 26 ಜನರು ಮೃತಪಟ್ಟಸಂದರ್ಭದಲ್ಲಿ ಬಿಜೆಪಿ ಆಡಳಿತ ಸರ್ಕಾರದ ಯಾವೊಬ್ಬ ಸಚಿವರೂ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಂದಾಗಲಿಲ್ಲ. ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳುವ ಜೊತೆಗೆ ತಲಾ ಒಂದು ಲಕ್ಷ ಪರಿಹಾರ ನೀಡಿರುವುದು ನಿಮ್ಮೆಲ್ಲರ ಕಣ್ಮುಂದೆ ಇದೆ.

ಧರ್ಮದ ಹೆಸರಿನಲ್ಲಿ ಬಿಜೆಪಿ ಆಟ: ಸಮಾಜದ ಒಗ್ಗಟ್ಟನ್ನು ಬಯಸುವ ಕಾಂಗ್ರೆಸ್‌ ಪಕ್ಷವು ಜನರ ಸಂಬಂಧಗಳನ್ನು ಬೆಸೆಯುವ ಪಕ್ಷವಾಗಿದೆ. ಆದರೆ ಬಿಜೆಪಿ ಧರ್ಮದ ಹೆಸರಿನಲ್ಲಿ ಜನರನ್ನು ಸಂಬಂಧವನ್ನು ಕತ್ತರಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದ್ದರಿಂದ ನಾಡಿನ ಜನತೆ ಬಿಜೆಪಿ ಪಕ್ಷವನ್ನು ದೂರ ಇಡುವ ಮನಸ್ಸು ಮಾಡಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದಂತಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಕೊಲೆ ಮಾಡಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ಸರ್ಕಾರದ ಸಚಿವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದರೂ ಸಹ ಪೊಲೀಸ್‌ ಇಲಾಖೆ ಈವರೆಗೆ ಯಾವುದೇ ಪ್ರಕರಣ ದಾಖಲು ಮಾಡಿಲ್ಲದಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅ​ಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟಅಧಿಕಾರಿಗಳು ಮತ್ತು ಮುಖಂಡರಿಗೆ ತಕ್ಕ ಪಾಠ ಕಲಿಸುವುದಾಗಿ ವಾಗ್ದಾನ ಮಾಡಿದರು.

ಹನೂರು ಅಭಿವೃದ್ಧಿಗೆ ಅನುದಾನ ಇಲ್ಲ: ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಶಾಸಕ ಆರ್‌ ನರೇಂದ್ರ ಬಿಜೆಪಿ ದುರಾಡಳಿತವನ್ನು ಜನರಿಗೆ ತಿಳಿಸುವ ಉದ್ದೇಶವೇ ಪ್ರಜಾಧ್ವನಿಯಾತ್ರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹನೂರು ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅನುದಾನದ ಕೊಡುಗೆ ಶೂನ್ಯವಾಗಿದೆ

ಸಿದ್ದರಾಮಯ್ಯರವರ ಕಾಂಗ್ರೆಸ್‌ ಸರ್ಕಾರ ಅ​ಕಾರದಲ್ಲಿದ್ದಾಗ ನಮ್ಮ ಕ್ಷೇತ್ರಕ್ಕೆ 132 ಕೋಟಿ ರು.ವೆಚ್ಚದಲ್ಲಿ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನವಾಗಿದೆ. ಇದರಿಂದ ಹದಿನೈದು ಸಾವಿರ ಎಕರೆ ಭೂಮಿಗೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 108 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ, ಹನೂರು ತಾಲೂಕು ಘೋಷಣೆ ಎಲ್ಲವೂ ಸಹ ಕಾಂಗ್ರೆಸ್‌ ಸರ್ಕಾರದ ಕೊಡುಗೆಯಾಗಿದೆ. ನಾವು ಅಧಿಕಾರಕ್ಕಾಗಿ ಎಂದೂ ಆಸೆ ಪಡುವವರಲ್ಲ ಬದಲಾಗಿ ಜನರ ಸೇವೆ ಮಾಡಲು ಬಂದಿದ್ದೇವೆ. ಹನೂರಿನ ಜನತೆ ನಮ್ಮ ಕುಟುಂಬಸ್ಥರ ಬೆಂಬಲವಾಗಿ ನಿಂತು ಒಂಬತ್ತು ಬಾರಿ ನಮ್ಮನ್ನು ಆಯ್ಕೆ ಮಾಡಿದ್ದೀರಿ ಅದಕ್ಕಾಗಿ ಹನೂರು ಕ್ಷೇತ್ರದ ಜನತೆಗೆ ನಾವು ಸದಾ ಋುಣಿಯಾಗಿರುತ್ತೇವೆ.

ಕಳೆದ ಮೂರುವರೆ ವರ್ಷದಿಂದ ಬಿಜೆಪಿ ಸರ್ಕಾರದಿಂದ ಕ್ಷೇತ್ರಕ್ಕೆ ಯಾವುದೇ ಕೊಡುಗೆ ಇಲ್ಲ. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನೂರಿಗೆ ಆಗಮಿಸಿದ್ದರು. 900 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅದೆಲ್ಲ ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿದ್ದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಅವರು ಕೆರೆ ತುಂಬಿಸುವ ಯೋಜನೆಗೆ 132 ಕೋಟಿ ಬಿಡುಗಡೆ ಮಾಡಿದರು. 15 ಸಾವಿರ ಎಕರೆ ಜಮೀನಿಗೆ ನೀರು ಸಿಗುತ್ತಿದೆ. 

ಪ್ರತಿ ಹಳ್ಳಿಯ ಟಾಪ್‌ 10 ಕಾಂಗ್ರೆಸ್‌ ಕಾರ್ಯಕರ್ತರಿಗೆ ಟಿವಿ ಗಿಫ್ಟ್‌: ಡಿ.ಕೆ.​ಶಿ​ವ​ಕು​ಮಾರ್‌

ಕೊಳ್ಳೇಗಾಲದಿಂದ ಹನೂರು ತನಕ ಕೆಶಿಪ್‌ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಕಾಂಗ್ರೆಸ್‌ ಅವಧಿಯಲ್ಲಿ ಹಣ ಬಿಡುಗಡೆಯಾಗಿತ್ತು. ಆದರೆ, ಹನೂರಿನಿಂದ ಮ.ಬೆಟ್ಟತನಕ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಹನೂರು ಕ್ಷೇತ್ರದ ಜನತೆ ಸ್ವಾಭಿಮಾನಿಗಳು. ಇತ್ತೀಚೆಗೆ ಬೆಂಗಳೂರಿನ ಕೆಲವು ಉದ್ಯಮಿಗಳು ಬಂದು ಹನೂರು ಜನತೆಯ ಸ್ವಾಭಿಮಾನದ ಬದುಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಜನತೆ ಇವರ ಆಮಿಷಗಳಿಗೆ ಎಂದು ಸೋಲಬೇಡಿ. ಕಾಂಗ್ರೆಸ್‌ ಪಕ್ಷ ನಿಮ್ಮ ಬೆಂಬಲವಾಗಿ ನಿಂತಿರುತ್ತದೆ ಪಕ್ಷವನ್ನು ಬೆಂಬಲಿಸಿ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮಾಜಿ ಸಂಸದ ಧ್ರುವನಾರಾಯಣ, ಬಿ ವಿ ಶ್ರೀನಿವಾಸ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌, ಕೇರಳ ರಾಜ್ಯದ ಕಾಂಗ್ರೆಸ್‌ ಶಾಸಕ ಅನಿಲ್‌ಕುಮಾರ್‌, ಮಾಜಿ ಶಾಸಕರಾದ ಎ ಆರ್‌ ಕೃಷ್ಣಮೂರ್ತಿ, ಬಾಲರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಸೇನ್‌. ಚಿತ್ರ ನಟ, ನಿರ್ದೇಶಕ ಸಾಧುಕೋಕಿಲ. ಇನ್ನಿತರೆ ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಜರಿದ್ದರು.

click me!