ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕೆಲ ವಸ್ತುಗಳ ಬೆಲೆ ಏರಿಕೆ ಅನಿವಾರ್ಯ. ದರ ಏರಿಕೆಗೂ ಗ್ಯಾರಂಟಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಏ.03): ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕೆಲ ವಸ್ತುಗಳ ಬೆಲೆ ಏರಿಕೆ ಅನಿವಾರ್ಯ. ದರ ಏರಿಕೆಗೂ ಗ್ಯಾರಂಟಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕೆಲ ವಸ್ತುಗಳ ಬೆಲೆ ಏರಿಕೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಆಗಿದೆ ಎಂದರು. ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದಾಗ ವ್ಯತ್ಯಾಸಗಳನ್ನು ಸರಿಪಡಿಸಬೇಕು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಸರಿಯಾಗಿರಬೇಕು. ಇಲ್ಲವಾದರೆ, ಈ ರೀತಿ ಆಗುತ್ತದೆ.
ರಾಜ್ಯದಿಂದ ಪಡೆಯುವ ತೆರಿಗೆಯನ್ನು ಸರಿಯಾಗಿ ಲೆಕ್ಕಾಚಾರ ಮಾಡಿ ರಾಜ್ಯಗಳಿಗೆ ಸೂಕ್ತ ಸಂದರ್ಭಗಳಲ್ಲಿ ಕೊಡಬೇಕು ಎಂದರು. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಹೆಚ್ಚು ಹಣ ಬರಬೇಕು. ನಮ್ಮ ರಾಜ್ಯ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಸುಮಾರು 20 ಸಾವಿರ ಕೋಟಿಗೂ ಅಧಿಕ ಹಣ ನೀಡುತ್ತದೆ. ಕೇಂದ್ರವು ರಾಜ್ಯಕ್ಕೆ ಆ ಹಣವನ್ನು ಸರಿಯಾಗಿ ಕೊಡಬೇಕು. ಅದು ಬಿಟ್ಟು ನಿಮ್ಮ ಸಂಪನ್ಮೂಲ ಜಾಸ್ತಿ ಮಾಡಿ ಎಂದಾಗ, ಸರಿದೂಗಿಸಲು ಕೆಲ ಬೆಲೆ ಬೇರಿಕೆ ಅನಿವಾರ್ಯ ಎಂದು ಡೀಸೆಲ್ ಮೇಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲೇ ಸುಮಾರು 51 ಸಾವಿರ ಕೋಟಿ ರು. ಅನುದಾನ ಮೀಸಲಿಡಲಾಗಿದೆ. ದರ ಏರಿಕೆಗೂ ಗ್ಯಾರಂಟಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ರಾಜಣ್ಣ ದೂರೇ ನೀಡದಿದ್ರೆ ನಾನೇನು ಮಾಡಲಿ?: ಹನಿಟ್ರ್ಯಾಪ್ ಪ್ರಕರಣ ಉನ್ನತ ತನಿಖೆಗೆ ಕೊಡುತ್ತೇನೆ ಎಂದು ಹೇಳಿದ್ದೆ. ಆದರೆ ದೂರೇ ನೀಡದಿದ್ದರೆ ನಾನೇನು ಮಾಡಲಿ? ಎಫ್‌ಐಆರ್ ದಾಖಲಾಗದೆ ಯಾವುದೇ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಆಪ್ತರ ಜತೆ ಚರ್ಚಿಸಿ ಹನಿಟ್ರ್ಯಾಪ್ ದೂರು ಬಗ್ಗೆ ತೀರ್ಮಾನಿಸುವುದಾಗಿ ರಾಜಣ್ಣ ಹೇಳಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ, ‘ಅವರಿಗೆ ಬಹಳ ಜನ ಆಪ್ತರು ಇದ್ದಾರೆ. ನಾನೂ ಸೇರಿ ಎಲ್ಲರೂ ಅವರಿಗೆ ಆಪ್ತರೇ.
ಇದನ್ನೂ ಓದಿ: ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟಿದ್ದು: ಡಿ.ಕೆ.ಶಿವಕುಮಾರ್
ಯಾವ ಆಪ್ತರ ಬಳಿ ಮಾತನಾಡುತ್ತಾರೋ ನೀವೇ ಅವರನ್ನು ಕೇಳಬೇಕು. ಭಾನುವಾರ ಕಾರ್ಯಕ್ರಮವೊಂದರಲ್ಲಿ ಜತೆಯಲ್ಲೇ ಇದ್ದೆವು. ಅದರ ಬಗ್ಗೆ ನನ್ನ ಬಳಿ ಏನೂ ಮಾತನಾಡಲಿಲ್ಲ ಎಂದರು. ಹನಿಟ್ರ್ಯಾಪ್ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ಏನೂ ಮಾತನಾಡಲ್ಲ. ಈ ಬಗ್ಗೆ ದೂರು ನೀಡಿದರೆ ತನಿಖೆಗೆ ನೀಡುತ್ತೇನೆ ಎಂದು ಹೇಳಿದ್ದೆ. ಆದರೆ ಅವರು(ರಾಜಣ್ಣ) ದೂರು ಕೊಡಬೇಕಲ್ಲ? ಎಫ್‌ಐಆರ್ ಆಗದೆ ಯಾವುದೇ ತನಿಖೆ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.