ಪಂಜಾಬ್‌, ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರವೇನು?

By Suvarna News  |  First Published Oct 9, 2021, 1:50 PM IST

ಈಗಲೇ 75 ತಲುಪಿರುವ ಸಿದ್ದರಾಮಯ್ಯ ಒಂದು ವೇಳೆ 2023ರಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿದರೂ 77ರಲ್ಲಿರುತ್ತಾರೆ. ಬಹುಶಃ ಜಾಣ ಡಿಕೆಶಿ ಅದನ್ನೆಲ್ಲಾ ಲೆಕ್ಕ ಹಾಕಿ ಈಗ ಸಂಭಾಳಿಸಿಕೊಂಡು ಹೋಗಿ ಮೊದಲು ಅಧಿಕಾರಕ್ಕೆ ತಂದರಾಯಿತು, ಆಮೇಲೆ ನೋಡೋಣ ಎಂಬ ಮನಸ್ಥಿತಿಯಲ್ಲಿದ್ದಾರೆ.


ಒಂದು ಕಡೆ ಗುಲಾಂ ನಬಿ, ಕಪಿಲ್‌ ಸಿಬಲ್‌; ಇನ್ನೊಂದು ಕಡೆ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ರಂಥ ನಾಯಕರು ನೇರವಾಗಿ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ​ ವಿರುದ್ಧ ಆಂತರಿಕ ಯುದ್ಧ ಹೂಡಿರುವಾಗ ಕಾಂಗ್ರೆಸ್‌ ಬಳಿ ಇರುವ ಮಾಸ್‌ ನಾಯಕರು ಅಂದರೆ ಇಬ್ಬರು. ಒಬ್ಬರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಇನ್ನೊಬ್ಬರು ಸಿದ್ದರಾಮಯ್ಯ. ಹೀಗಾಗಿ ಹಿರಿಯರು ಒಬ್ಬೊಬ್ಬರೇ ದೂರ ಆಗುತ್ತಿರುವಾಗ ಸೋನಿಯಾ ಗಾಂಧಿ​ ಅವರೇ ಹಿರಿಯರನ್ನು ಕರೆದು ಮಾತನಾಡಿಸುತ್ತಿದ್ದಾರೆ.

ಸರಿಯಾಗಿ 2 ವರ್ಷದಿಂದ ಸೋನಿಯಾ ಮುಖತಃ ಸಿದ್ದರಾಮಯ್ಯ ಸೇರಿದಂತೆ ಯಾರನ್ನೂ ಭೇಟಿ ಆಗಿರಲಿಲ್ಲ. ಏನಿದ್ದರೂ ರಾಹುಲ್‌ ಗಾಂಧಿಯನ್ನು ಭೇಟಿ ಆಗಿ ಎನ್ನುತ್ತಿದ್ದರು. ಆದರೆ ಪಕ್ಷದ ಪರಿಸ್ಥಿತಿ ನಾಜೂಕು ಆಗುತ್ತಿರುವಾಗ, ಒಬ್ಬೊಬ್ಬರೇ ಹಿರಿಯರು ಹೊರಗೆ ಹೋಗುತ್ತಿರುವಾಗ ಅಳಿದು ಉಳಿದ ನಾಯಕರನ್ನು ಕರೆದು ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸೋನಿಯಾ ಸಿದ್ದುರನ್ನು ಕರೆಸಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಗಾಂಧಿ​ ಪರಿವಾರದ ನಾಯಕರನ್ನು ಭೇಟಿ ಆಗಲು ರಾಜ್ಯದ ನಾಯಕರು ಎರಡು ಮೂರು ದಿನ ಡೇರೆ ಹಾಕಿ ದಿಲ್ಲಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ಈ ಬಾರಿ ಸಿದ್ದು ಸಮಯ ಕೂಡ ಕೇಳದೆ ಸೋನಿಯಾರ ಆಪ್ತ ಕಾರ್ಯದರ್ಶಿ ಮಾಧವನ್‌ ಅವರು ಸಿದ್ದರಾಮಯ್ಯಗೆ ಫೋನ್‌ ಮಾಡಿ ‘ನಾಳೆ ಬರಲೇಬೇಕು, ಮೇಡಂ ಭೇಟಿ ಆಗಬೇಕು ಎಂದಿದ್ದಾರೆ’ ಅಂದಾಗ ಸಿದ್ದು ತರಾತುರಿಯಲ್ಲಿ ದಿಲ್ಲಿಗೆ ಹಾರಿದ್ದಾರೆ.

Latest Videos

undefined

ಹಾನಗಲ್ ಉಪಸಮರ: ಶಿವಕುಮಾರ್ ಉದಾಸಿ/ಪತ್ನಿಗೆ ಟಿಕೆಟ್ ಕೊಟ್ಟರೆ ಪರಿಣಾಮವೇನು?

ಉಸ್ತುವಾರಿ ಇರಲಿಲ್ಲ, ರಾಹುಲ್‌ ಇರಲಿಲ್ಲ. ಕೇವಲ ಸೋನಿಯಾ ಒಬ್ಬರೇ ಸಿದ್ದುರನ್ನು ಕೂರಿಸಿಕೊಂಡು 35 ನಿಮಿಷ ಮಾತನಾಡಿಸಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿ, ಯಡಿಯೂರಪ್ಪ, ದೇವೇಗೌಡ ಮತ್ತು ಜಾತಿ ಸಮೀಕರಣ ಹೀಗೆ ಎಲ್ಲಾ ವಿಷಯಗಳ ಬಗ್ಗೆ ಸೋನಿಯಾ ಸಿದ್ದು ಅವರ ಅಭಿಪ್ರಾಯ ಆಲಿಸಿದ್ದಾರೆ. ಮುಂದಿನ ಚುನಾವಣೆಯ ತಯಾರಿ ಬಗ್ಗೆ ಕೂಡ ಮಾತನಾಡಿದ್ದಾರೆ.

ದಿಲ್ಲಿ ಮೂಲಗಳು ಮತ್ತು ಸಿದ್ದು ಆಪ್ತ ಮೂಲಗಳು ಹೇಳುವ ಪ್ರಕಾರ, ಹಿರಿಯ ನಾಯಕರೊಂದಿಗೆ ಒಂದು ವೈಯಕ್ತಿಕ ಸಂವಹನ ಇಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಸೋನಿಯಾ ತಾವೇ ಸಿದ್ದರಾಮಯ್ಯರನ್ನು ಕರೆದು ಮಾತನಾಡಿಸಿದ್ದಾರೇ ಹೊರತು, ಹಾಗೆ ಮಾಡಿ, ಹೀಗೆ ಮಾಡಿ ಎಂದು ಸಲಹೆ ಸೂಚನೆ ನೀಡುವ ಗೊಡವೆಗೆ ಹೋಗಿಲ್ಲ. ಸಿದ್ದು ಆಪ್ತರು ಹೇಳುವ ಪ್ರಕಾರ, ಕಳೆದ ಒಂದು ವರ್ಷದಿಂದ ಇದ್ದ ಸಣ್ಣಪುಟ್ಟಬೇಸರ, ದ್ವಂದ್ವ, ಅಸಮಾಧಾನಗಳು ಸೋನಿಯಾ ಭೇಟಿ ನಂತರ ಕಡಿಮೆ ಆಗಿವೆಯಂತೆ.

ಸೀಸನ್ಡ್ ರಾಜಕಾರಣಿ ಸೋನಿಯಾ

ವಂಶವಾದ, ವಿದೇಶಿ ಸೊಸೆ ಎಂದೆಲ್ಲಾ ವಿರೋಧ ಪಕ್ಷಗಳು ಕಟುಟೀಕೆ ಮಾಡಿದರೂ ಕಾಂಗ್ರೆಸ್‌ನ ಒಳಗಿನ ನಾಯಕರಿಗೆ ಸೋನಿಯಾ ಬಗ್ಗೆ ಒಂದು ಗೌರವ ಮತ್ತು ವಿಶ್ವಾಸ ಇದೆ. ಖಾಸಗಿ ಆಗಿ ರಾಹುಲ್‌ರ ಅಪ್ರಬುದ್ಧತೆ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್‌ ನಾಯಕರು, ಮೇಡಂ ಗಾಂಧಿ​ ಬಗ್ಗೆ ತುಟಿ ಪಿಟಕ್‌ ಅನ್ನೋದಿಲ್ಲ. ಇದಕ್ಕೆ ಮುಖ್ಯ ಕಾರಣ ತಮ್ಮನ್ನು ಭೇಟಿ ಆಗಲು ಬರುವವರ ಜೊತೆ ಸೋನಿಯಾ ನಡೆದುಕೊಳ್ಳುವ ರೀತಿ ಮತ್ತು ನಿರ್ಣಯ ತೆಗೆದುಕೊಳ್ಳುವಾಗ ವೈಯಕ್ತಿಕ ಇಷ್ಟಾನಿಷ್ಠಗಳನ್ನು ಮಧ್ಯೆ ತರದೇ ಇರುವುದು. ಹೀಗಾಗಿ ಜನಮಾನಸದಲ್ಲಿ ಬೆಂಬಲ ಇಲ್ಲದೇ ಹೋದರೂ ಸೋನಿಯಾ 1998ರಿಂದ 2014ರ ವರೆಗೆ ಪಕ್ಷವನ್ನು ಹಿಡಿದು ಇಟ್ಟಿದ್ದರು.

ಕಾಂಗ್ರೆಸ್‌ ಎಲ್ಲಾ ಸಿದ್ಧಾಂತಗಳ ಮಿಶ್ರಣ ಹೊಂದಿರುವ, ಕೆಳಮಟ್ಟದವರೆಗೂ ಬಲಶಾಲಿ ನಾಯಕರು ಮತ್ತು ಮತದಾರರು ಇರುವ ಪಕ್ಷ. ಅದಕ್ಕೆ ಮೇಲ್ಗಡೆ ಒಬ್ಬ ಎಲ್ಲರನ್ನೂ ಸಮಾಧಾನಪಡಿಸಿ ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕ ಬೇಕು. ಆ ನಾಯಕನ ಸುತ್ತ ಪಾಲಿಟಿಕ್ಸ್‌ ಅರ್ಥ ಆಗುವ ಪ್ರಾಕ್ಟಿಕಲ್‌ ಆಗಿರುವ ರಣತಂತ್ರಗಾರರು ಬೇಕು. ತಾಯಿಗೆ ಇದು ಅರ್ಥ ಆಗಿತ್ತು. ಆದರೆ ಮಗನಿಗೆ ಇದನ್ನು ಮಾಡುವ ಕಸುಬುದಾರಿಕೆ ಇನ್ನೂ ಬಂದಿಲ್ಲ.

ಅಂತೂ ಕಣ್ಣು ಬಿಟ್ಟಿತು ಕೈ ಹೈಕಮಾಂಡ್: ವರ್ಷಗಳ ಬಳಿಕ ಪ್ರಿಯಾಂಕ, ರಾಹುಲ್ ರಣತಂತ್ರ!

2023 ಕ್ಕೆ ನಾನೇ ಸಿಎಂ ಅಂದ್ರಾ ಸಿದ್ದು?

ಸಿದ್ದು ಆಪ್ತ ಮೂಲಗಳು ಹೇಳುವ ಪ್ರಕಾರ ಸೋನಿಯಾ ಜೊತೆಗಿನ ಮಾತುಕತೆಯಲ್ಲಿ ಸಿದ್ದರಾಮಯ್ಯ, ‘2023ರಲ್ಲಿ ಕರ್ನಾಟಕದಲ್ಲಿ ಅ​ಧಿಕಾರಕ್ಕೆ ಬರುತ್ತೇವೆ. ನಾನು ಇನ್ನೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ. ಒಳಜಗಳಗಳಿಗೆ ಅವಕಾಶ ಕೊಡಬಾರದು ಅಷ್ಟೆ. ಲಿಂಗಾಯತರ ಪಂಚಮಸಾಲಿ ಸಮುದಾಯ ನಮ್ಮ ಜೊತೆಗೆ ತರಬೇಕು. ಅದಕ್ಕಾಗಿ ರಣತಂತ್ರ ಹೆಣೆಯಬೇಕು. ಯಡಿಯೂರಪ್ಪ ನಾಯಕತ್ವ ಇರದಿದ್ದರೆ ಲಿಂಗಾಯತರು ಹಿಂದಿನಂತೆ ಬಿಜೆಪಿ ಜೊತೆಗೆ ಹೋಗೋಲ್ಲ. ಮತ ವಿಭಜನೆ ಆದರೆ ನಮಗೆ ಲಾಭ’ ಎಂದು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಸಿದ್ದು ಆಪ್ತರು ಹೇಳುವ ಪ್ರಕಾರ ಎಐಸಿಸಿ ಪುನರ್‌ಸಂಘಟನೆ ಮಾಡುವ ಬಗ್ಗೆ ಸೋನಿಯಾ ಪ್ರಸ್ತಾಪಿಸಿದಾಗ ಸಿದ್ದು ‘ನೀವು ಏನೇ ನಿರ್ಣಯ ತೆಗೆದುಕೊಳ್ಳಿ, ರಾಜ್ಯದಲ್ಲಿ ಪಕ್ಷ ಮತ್ತು ಶಾಸಕರು ನಿಮ್ಮ ಜೊತೆಗೆ ಇರುತ್ತೇವೆ’ ಎಂದು ಹೇಳಿ ಬಂದಿದ್ದಾರೆ. ಮುಂದಿನ 2 ವರ್ಷದಲ್ಲಿ ಚುನಾವಣೆಗಳು ನಡೆಯಲಿರುವ ಪಂಜಾಬ್‌, ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡಗಳಲ್ಲಿ ಸ್ವಂತ ಶಕ್ತಿಯ ಮೇಲೆ 10 ಪ್ರತಿಶತ ವೋಟು ಹಾಕಿಸುವ ಶಕ್ತಿ ಇರುವ ನಾಯಕ ಎಂದರೆ ಸಿದ್ದರಾಮಯ್ಯ ಮಾತ್ರ.

ಉಳಿದ ಮಾಸ್‌ ಲೀಡರ್‌ಗಳಾದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಉತ್ತರಾಖಂಡದಲ್ಲಿ ಹರೀಶ್‌ ರಾವತ್‌ ಹಿಂದಿನ ಜನಪ್ರಿಯತೆ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಸಿದ್ದು ಅವರಿಗೆ ಈ ರಾಜ ಮರ್ಯಾದೆ. ಒಂದು ಕಾಲದಲ್ಲಿ ವೀರೇಂದ್ರ ಪಾಟೀಲ್‌, ದೇವರಾಜ್‌ ಅರಸ್‌, ಬಂಗಾರಪ್ಪರಂಥವರನ್ನು ಚಿಟಿಕೆ ಹೊಡೆಯುವುದರಲ್ಲಿ ತೆಗೆದುಹಾಕಿದ ಕಾಂಗ್ರೆಸ್‌ ಈಗ ಸ್ಥಳೀಯ ನಾಯಕರನ್ನು ಹಿಂದಿನಂತೆ ನಡೆಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಟೈಮ್‌ ಟೈಮ್‌ ಕಿ ಬಾತ್‌ ಹೈ.

ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಯಾಕೆ..?

ದಿಲ್ಲಿಯಲ್ಲಿ ಶಾಕಾಹಾರಿ ಸಿದ್ದು!

ದಿಲ್ಲಿಗೆ ಬಂದರೆ ತಪ್ಪದೆ ಫೇಮಸ್‌ ಕರೀಮ್ಸ್‌ ಹೋಟೆಲ್‌ಗೆ ಹೋಗಿ ಬರುತ್ತಿದ್ದ ಸಿದ್ದರಾಮಯ್ಯ ಈಗ ಜಿಂದಾಲ್‌ ಪ್ರಕೃತಿ ಚಿಕಿತ್ಸೆಗೆ ಹೋಗಿ ಬಂದ ನಂತರ ಕೋಳಿ, ಕುರಿ ಸಹವಾಸ ಬಿಟ್ಟು ಶುದ್ಧ ಶಾಕಾಹಾರಿ ಆಗಿದ್ದಾರೆ. ದಿಲ್ಲಿಯಲ್ಲಿ ಬೆಳಿಗ್ಗೆ ಎದ್ದು ನೆಹರು ಪಾರ್ಕ್ನಲ್ಲಿ ಟ್ರ್ಯಾಕ್‌ ಪ್ಯಾಂಟ್‌, ಟೀಶರ್ಟ್‌ ಹಾಕಿಕೊಂಡು ವಾಕಿಂಗ್‌ ಮಾಡಿ ಬೆವರು ಇಳಿಸಿದ ಅವರು, ಊಟ ಮಾಡಿದ್ದು ತಮ್ಮ ಆಪ್ತ ಕಾರ್ಯದರ್ಶಿ ಮೋಹನ ಮನೆಯಿಂದ ಬಂದ ರಾಗಿ ಮುದ್ದೆ ಸೊಪ್ಪು ಸಾರನ್ನು ಮಾತ್ರ. ಇಲ್ಲ ಅಂದರೆ ದಿಲ್ಲಿಗೆ ಬಂದರೆ ಮೋಹನ್‌ ಮನೆಯಿಂದ ನಾಟಿ ಕೋಳಿ ಬರಲೇಬೇಕಿತ್ತು.

ಸಂಜೆ ಕನಾಟ್‌ ಪ್ಲೇಸ್‌ಗೆ ಹೋಗಿ ಫುಲ್‌ ಮಾರ್ಕೆಟ್‌ ಸುತ್ತಾಡಿದ ಸಿದ್ದು ಶೇವಿಂಗ್‌ ಕಿಟ್‌ ಇಡಲು ಒಂದು ಒಳ್ಳೆ ಲೆದರ್‌ ಬ್ಯಾಗ್‌ಗಾಗಿ ಶಾಪಿಂಗ್‌ ಮಾಡಿದರು. ಬ್ಯಾಗ್‌ ಕೊಂಡಾಗ ಪಕ್ಕದಲ್ಲೇ ಇದ್ದ ಜಮೀರ್‌ ಅಹ್ಮದ್‌ ‘ಸಾರ್‌ ನಾನು ದುಡ್ಡು ಕೊಡುತ್ತೇನೆ’ ಎಂದು ಹೊರಟಾಗ ‘ಏ ಸುಮ್ನೆ ಇರಪ್ಪಾ’ ಎಂದು ಪಂಚೆ ಜೇಬಿನಿಂದ ಹಣ ತೆಗೆದುಕೊಟ್ಟು ಬಿಲ್‌ ತೆಗೆದುಕೊಂಡರು. ಹೋಟೆಲ್‌ ರೂಂ ಬಾಡಿಗೆ ಇರಲಿ, ಶೂ ತೆಗೆದುಕೊಳ್ಳಲಿ, ಬ್ಯಾಗ್‌ ಕೊಳ್ಳಲಿ ತಮ್ಮ ದುಡ್ಡನ್ನು ತಾವೇ ಕೊಡುವುದು ಸಿದ್ದು ಸಂಭಾಳಿಸಿಕೊಂಡು ಬಂದಿರುವ ಒಳ್ಳೆಯ ಪದ್ಧತಿ. ಇಲ್ಲ ಅಂದರೆ ಉಳಿದ ರಾಜಕಾರಣಿಗಳು ಗೊತ್ತಲ್ಲ.

ಸಿದ್ದರಾಮಯ್ಯ ಏಕೆ ಅನಿವಾರ್ಯ?

ದಕ್ಷಿಣ ಭಾರತದಲ್ಲಿ ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಬಿಡಿ, ಪುದುಚೇರಿಯಲ್ಲೂ ಕಾಂಗ್ರೆಸ್‌ ಬಳಿ ಅಧಿಕಾರ ಇಲ್ಲ. ಏಕಾಂಗಿ ಆಗಿ ಅಧಿಕಾರಕ್ಕೆ ಬರುವ ಸಾಮರ್ಥ್ಯ ಪಕ್ಷಕ್ಕೆ ಇರುವ ರಾಜ್ಯ ಎಂದರೆ ಕರ್ನಾಟಕ ಒಂದೇ. ‘ಸಿದ್ದು ವರ್ಸಸ್‌ ಡಿ.ಕೆ.ಶಿವಕುಮಾರ್‌’ ವಿಕೋಪಕ್ಕೆ ಹೋಗಿ ಅಧಿಕಾರ ಕಳೆದುಕೊಂಡರೆ ಎಂಬ ಚಿಂತೆ ದಿಲ್ಲಿ ನಾಯಕರಿಗಿದೆ. ಹೀಗಾಗಿ ಫಲಿತಾಂಶ ಅದಲು-ಬದಲು ಮಾಡುವ ಶಕ್ತಿ ಇರುವ ಸಿದ್ದರಾಮಯ್ಯರನ್ನು ಜೊತೆಗೆ ಕರೆದುಕೊಂಡು ಹೋಗಿ ಎಂದು ಹೈಕಮಾಂಡ್‌ ನಾಯಕರು ಡಿಕೆಶಿಗೆ ತಿಳಿಸಿ ಹೇಳುತ್ತಲೇ ಇದ್ದಾರೆ.

ಡಿ.ಕೆ.ಶಿವಕುಮಾರ್‌ ಒಳ್ಳೆಯ ಸಂಘಟಕ, ರಣತಂತ್ರಗಾರ. ಆದರೆ ಅವರದೇ ಒಕ್ಕಲಿಗ ಜಾತಿಯ ವೋಟುಗಳು ಕನಕಪುರದ ಹೊರಗೆ ದಂಡಿಯಾಗಿ ಶಿವಕುಮಾರ್‌ ಹೆಸರಿನ ಮೇಲೆ ಬರುವುದಿಲ್ಲ. ಆದರೆ ಕುರುಬರು ಮತ್ತು ಮುಸ್ಲಿಮರ ಮತವನ್ನು ತಮ್ಮ ಹೆಸರಿನಿಂದ ತೆಗೆದುಕೊಳ್ಳುವ ಶಕ್ತಿ ಸಿದ್ದರಾಮಯ್ಯಗೆ ಇದೆ. ಮೊದಲಿಗೆ ತಮ್ಮ ಸಹಜ ರಾಜಕೀಯ ಶೈಲಿಯಂತೆ ಸಿದ್ದು ಮತ್ತು ಅವರ ಬೆಂಬಲಿಗರನ್ನು ಪಕ್ಕಕ್ಕೆ ತಳ್ಳಲು ಹೋದ ಡಿ.ಕೆ.ಶಿವಕುಮಾರ್‌, ದಿಲ್ಲಿ ನಾಯಕರು ತಿಳಿಸಿ ಹೇಳಿದ ನಂತರ ಸಿದ್ದುರನ್ನು ಜೊತೆಗೆ ಕರೆದುಕೊಂಡೇ ರಾಜ್ಯ ಸುತ್ತುತ್ತಿದ್ದಾರೆ.

ಆದರೆ ಸಮಸ್ಯೆ ಇರುವುದು ಸಿದ್ದರಾಮಯ್ಯ ಅವರ ವಯಸ್ಸಿನಲ್ಲಿ. ಈಗಲೇ 75 ತಲುಪಿರುವ ಅವರು ಒಂದು ವೇಳೆ 2023ರಲ್ಲಿ ಅಧಿಕಾರ ಹಿಡಿದರೂ 77ರಲ್ಲಿರುತ್ತಾರೆ. ಬಹುಶಃ ಜಾಣ ಶಿವಕುಮಾರ್‌ ಅದನ್ನೆಲ್ಲಾ ಲೆಕ್ಕ ಹಾಕಿ ಈಗ ಸಂಭಾಳಿಸಿಕೊಂಡು ಹೋಗಿ ಮೊದಲು ಅಧಿಕಾರಕ್ಕೆ ತಂದರಾಯಿತು, ಆಮೇಲೆ ನೋಡೋಣ ಎಂಬ ಮನಸ್ಥಿತಿಯಲ್ಲಿದ್ದಾರೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!