ಮಡಿಕೇರಿ (ಆ.21) : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಿದ ವೇಳೆ ನಡೆದ ಮೊಟ್ಟೆಎಸೆತ ಘಟನೆಗೆ ಪೊಲೀಸ್ ವೈಫಲ್ಯವೇ ಕಾರಣವೆಂದು ಆರೋಪಿಸಿ ಕಾಂಗ್ರೆಸ್ ಆ.26 ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿರುವ ನಡುವೆಯೇ, ಅದೇ ದಿನ ಬಿಜೆಪಿಯಿಂದ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮಡಿಕೇರಿಯು ಅಂದು ಎರಡೂ ಪಕ್ಷಗಳ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.
26ರಂದು ಸಿದ್ದರಾಮಯ್ಯ ಕೊಡಗಿಗೆ ಬರಲಿ ನೋಡೋಣ: ಬೋಪಯ್ಯ
ಬಿಜೆಪಿ ಸಮಾವೇಶದ ಕುರಿತು ಶನಿವಾರ ಮಾಹಿತಿ ನೀಡಿದ ಶಾಸಕ ಅಪ್ಪಚ್ಚು ರಂಜನ್(MLA Appchhu Ranjan), ಆ.26ರಂದು ಜನಜಾಗೃತಿ ಸಮಾವೇಶವನ್ನು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದೇವೆ. ಕಡಿಮೆ ಅಂದರೂ 50 ಸಾವಿರ ಕರಪತ್ರ ಮಾಡಿ ಮನೆ ಮನೆಗೆ ಹಂಚುತ್ತೇವೆ. ಟಿಪ್ಪು ಸುಲ್ತಾನ್ ವಿಚಾರದಲ್ಲಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಓಲೈಕೆ ರಾಜಕಾರಣದ ವಿರುದ್ಧ ಅಂದು ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.
ಟಿಪ್ಪುವಿನ ವಿಚಾರದಲ್ಲಿ ನಾವು ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ. ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತಾಡುವುದನ್ನು ನಿಲ್ಲಿಸಬೇಕು. 26ರಂದು ಕಾನೂನು ಸುವ್ಯವಸ್ಥೆ ಹದಗೆಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ನಮಗೆ ಕಾರ್ಯಕ್ರಮ ಮಾಡಲು ಅನುಮತಿ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ. ಅದೇ ದಿನ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ದೊಡ್ಡಮಟ್ಟದ ಹೋರಾಟ ರೂಪಿಸಲು ಈಗಾಗಲೇ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ.
'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'
ಮಡಿಕೇರಿ ಚಲೋಗೆ ಬನ್ನಿ: ಕೈ ಶಾಸಕರಿಗೆ ಸೂಚನೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆಎಸೆದ ಪ್ರಕರಣ ಖಂಡಿಸಿ ಆ.26 ರಂದು ಬೆಳಿಗ್ಗೆ 10.30 ಕ್ಕೆ ಮಡಿಕೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮತ್ತು ಮಡಿಕೇರಿ ಚಲೋ ಆಯೋಜಿಸಲಾಗಿದೆ. ಇದರಲ್ಲಿ ಪಕ್ಷದ ವಿಧಾನ ಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ, ರಾಜ್ಯಸಭೆ ಸದಸ್ಯರು ಪಾಲ್ಗೊಳ್ಳುವಂತೆ ಕಾಂಗ್ರೆಸ್ ಸೂಚನೆ ನೀಡಿದೆ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದಾಗ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೆಲವು ಕಿಡಿಗೇಡಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸುವುದರ ಜೊತೆಗೆ ಕಾರಿನ ಮೇಲೆ ಮೊಟ್ಟೆಎಸೆದು ಅಸಾಂವಿಧಾನಿಕವಾಗಿ ವರ್ತಿಸಿದ್ದಾರೆ. ಇದನ್ನು ಖಂಡಿಸಿ ಈ ಹೋರಾಟಕ್ಕೆ ವಿಧಾನ ಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ, ರಾಜ್ಯಸಭೆ ಸದಸ್ಯರು ಮಡಿಕೇರಿ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸೂಚನೆ ನೀಡಿದೆ.