ಮಡಿಕೇರಿ (ಆ.21): ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಆ.18ರಂದು ನಡೆದ ಮೊಟ್ಟೆಎಸೆತ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್- ಬಿಜೆಪಿ ನಾಯಕರು ಆರೋಪ, ಪ್ರತ್ಯಾರೋಪಗಳಲ್ಲಿ ಮಾಡುತ್ತಿದ್ದಾರೆ. ಈ ಘಟನೆ ಇದೀಗ ರಾಜಕೀಯ ಪ್ರತಿಷ್ಠೆಯಾಗಿದೆ. ಕೊಡಗಿನ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಹಿಂತಿರುಗುವ ವೇಳೆ ಕುಶಾಲನಗರದ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆಎಸೆಯಲಾಗಿತ್ತು. ಆ ಮೊಟ್ಟೆಎಸೆದಾತ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ನಾಯಕರು ಹೇಳಿದರೆ, ಆತ ಕಾಂಗ್ರೆಸ್‌ನವನು ಎಂದು ಬಿಜೆಪಿ ಶಾಸರು ಹೇಳುತ್ತಿದ್ದಾರೆ. ಅಲ್ಲದೆ ಮೊಟ್ಟೆಎಸೆತ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಪತ್, ನಾನು ಮೂಲತಃ ಜೆಡಿಎಸ್ ಪಕ್ಷದವನು. ಜೀವಿಜಯ ಅವರು ಕಾಂಗ್ರೆಸ್ ಸೇರ್ಪಡೆಯ ಹಿನ್ನೆಲೆಯಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದು, ಅನೇಕ ಗೊಂದಲಗಳನ್ನು ಸೃಷ್ಟಿಸಿದೆ.
ಮೊಟ್ಟೆ ಎಸೆತದಲ್ಲಿ ಡಿಕೆಶಿ ಕೈವಾಡ: ನಳಿನ್‌ಕುಮಾರ್ ಕಟೀಲ್ ಶಂಕೆ
ಆರೋಪ- ಪ್ರತ್ಯಾರೋಪ: ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮೊಟ್ಟೆಎಸೆದಾತ ಬಿಜೆಪಿ ಕಾರ್ಯಕರ್ತ ಎಂದು ಆರೋಪಿಸ್ದಿ, ಶಾಸಕ ಅಪ್ಪಚ್ಚು ರಂಜನ್ ಅವರ ಜೊತೆಗಿರುವ ಫೋಟೋವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಸಕ ಅಪ್ಪಚ್ಚು ರಂಜನ್, ಮೊಟ್ಟೆಎಸೆದ ಸಂಪತ್ ಬಿಜೆಪಿ ಕಾರ್ಯಕರ್ತ ಅಲ್ಲ. ಆತ ಕಾಂಗ್ರೆಸ್‌ನವನು. ಫೋಟೋ ತೆಗೆಸಿಕೊಂಡರೆ ಬಿಜೆಪಿ ಕಾರ್ಯಕರ್ತ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಕೈ ಪ್ರತಿಭಟನೆ- ಕಮಲ ಸಮಾವೇಶ: ವಿಪಕ್ಷ ನಾಯಕರ ಜಿಲ್ಲಾ ಭೇಟಿ ವೇಳೆ ಪೊಲೀಸ್ ಇಲಾಖೆ ವೈಫಲ್ಯ ತೋರಿದೆ ಎಂದು ಆರೋಪಿಸಿ ಮಡಿಕೇರಿಯಲ್ಲಿ ಆ.26ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಡಿಕೇರಿ ಚಲೋ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ನಾನಾ ಕಡೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕರು ಜಿಲ್ಲೆಗೆ ಆಗಮಿಸಿ ಮಡಿಕೇರಿಯ ಜಿಲ್ಲಾ ಪೊಲೀಸ್ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮಡಿಕೇರಿ ಚಲೋ ದಿನದಂದೇ ಕೊಡಗು ಜಿಲ್ಲಾ ಬಿಜೆಪಿಯಿಂದ ಬೃಹತ್ ಜನ ಜಾಗೃತಿ ಸಮಾವೇಶ ನಡೆಯಲಿದೆ. ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಲಿದ್ದಾರೆಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾದ ಮೊಟ್ಟೆಎಸೆತ
ಸಿದ್ದರಾಮಯ್ಯ(Siddaramaiah) ಅವರು ಕೊಡಗು ಭೇಟಿಯ ಸಂದರ್ಭದಲ್ಲಿ ಮೊಟ್ಟೆಎಸೆದ ಘಟನೆ ಈಗ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಆಗಮಿಸಿದ ಸಂದರ್ಭದಲ್ಲಿ ಸೂಕ್ತ ಬಂದೋಬÓ್ತ… ಮಾಡಿಲ್ಲ. ಪೊಲೀಸ್ ಇಲಾಖೆ ವೈಫಲ್ಯ ತೋರಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆ.26ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇತ್ತಕಡೆಯಲ್ಲಿ ಬಿಜೆಪಿ ಕೂಡ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ಈ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಗೆ ಎರಡೂ ಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾನು ಕಾಂಗ್ರೆಸ್ ಕಾರ್ಯಕರ್ತನೇ ಎಂದ ಸಂಪತ್
ನನಗೂ ಸಂಪತ್‌ಗೂ ಪರಿಚಯವಿಲ್ಲ; ಶಾಸಕ ರಂಜನ್ ಸ್ಪಷ್ಟನೆ:
ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆ ಭೇಟಿ ವೇಳೆ ಪ್ರತಿಭಟನೆ ಮೊಟ್ಟೆಎಸೆತ ವಿವಾದಕ್ಕೀಗ ಎರಡೂ ಪಕ್ಷಗಳು ಕಾವು ನೀಡುತ್ತಿವೆ. ಬಂಧಿತನಾಗಿರುವ ಆರೋಪಿ ಸಂಪತ್ ಎಂಬಾತ ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೊಂದಿಗಿರುವ ಫೋಟೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿ, ಮೊಟ್ಟೆಎಸೆದ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ರಂಜನ್, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆಎಸೆದ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಅಲ್ಲ. ರಾಮನವಮಿ ಸಂದರ್ಭ ಆತ ಕೇಸರಿ ಶಾಲು ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದಾನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ನನಗೂ ಸಂಪತ್‌ಗೂ ಪರಿಚಯವಿಲ್ಲ: ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಂಜನ್, ನಾನು ಶಾಸಕ ಎಂದ ಮೇಲೆ ಎಷ್ಟೋ ಜನ ಬಂದು ಜತೆಗೆ ನಿಂತು ಫೋಟೋ ತೆಗೆದುಕೊಳ್ಳುತ್ತಾರೆ. ನನಗೂ ಸಂಪತ್‌ಗೂ ಪರಿಚಯವಿಲ್ಲ, ಅವನು ಯಾರೂ ಎಂದೇ ನನಗೆ ಗೊತ್ತೇ ಇಲ್ಲ. ಅವನು ಕಾರ್ಯಕರ್ತರ ಮೆಂಬರ್‌ಶಿಪ್ ತೆಗೆದುಕೊಂಡೂ ಇಲ್ಲ. ಅಂದು ನಾನು ಕುಶಾಲನಗರ ಠಾಣೆಗೆ ಹೋಗಿ ಬಿಜೆಪಿ ಕಾರ್ಯಕರ್ತರನ್ನು ಬಿಡಿಸಿದಾಗ ಅಲ್ಲಿ ಸಂಪತ್ ಇರಲಿಲ್ಲ ಎಂದ ರಂಜನ್, ಸಂಪತ್ ನಮ್ಮ ಪಕ್ಷದ ಕಾರ್ಯಕರ್ತ ಆಗಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಲೂಟಿಕೋರ ಮನ್ಸೂರ್ ಖಾನ್ ಜೊತೆ ಫೋಟೋ ತೆಗೆಸಿಕೊಂಡಿಲ್ವ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ ರಂಜನ್, ಹಾಗಾದರೆ ಅವರೆಲ್ಲ ಮನ್ಸೂರ್ ಖಾನ್‌ನ ಅಕ್ರಮದ ಪಾಲುದಾರರು ಎನ್ನಲಾಗುತ್ತದೆಯೇ ಎಂದರು.
ಕಾಂಗ್ರೆಸ್‌ನವರಿಗೆ ಸಂಸ್ಕೃತಿ ಇಲ್ಲ: ಬೋಪಯ್ಯ ಸ್ಪೀಕರ್ ಆಗಿದ್ದಾಗ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರ ಪುಂಡಾಟದ ಕ್ಯಾಸೆಟ್ ನನ್ನ ಬಳಿ ಇದೆ. ಕಾಂಗ್ರೆಸ್‌ವರು ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್‌ನವರಿಗೆ ಯಾವ ಸಂಸ್ಕೃತಿಯೂ ಇಲ್ಲ, ದೇವಸ್ಥಾನ ಸಂಸ್ಕೃತಿಯಂತೂ ಇಲ್ಲ. ಧರ್ಮಸ್ಥಳ ಕ್ಷೇತ್ರಕ್ಕೆ ಮೀನು, ಮಾಂಸ ತಿಂದುಕೊಂಡು ಹೋಗುತ್ತಾರೆ. ಮೊನ್ನೆ ಮಡಿಕೇರಿಗೆ ಬಂದಾಗ ಕೋಳಿ ಸಾರು ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಮಡಿಕೇರಿಯಲ್ಲಿ ಮಾಂಸ ತಿಂದು ಅಂದೇ ಕೊಡ್ಲಿಪೇಟೆ ಬಸವೇಶ್ವರ ದೇವಾಲಯಕ್ಕೆ ಹೋಗಿದ್ದಾರೆ. ಇವರಿಗೆ ದೇವರ ಮೇಲೆ ಭಕ್ತಿ ಇದೆಯಾ? ಇವರೆಲ್ಲಾ ದೇವಸ್ಥಾನಕ್ಕೆ ಯಾಕೆ ಹೋಗೋದು ಎಂದು ಸಿದ್ದರಾಮಯ್ಯ ವಿರುದ್ಧ ಶಾಸಕ ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.
26ಕ್ಕೆ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ: ಬಿಜೆಪಿ ಪಕ್ಷದಿಂದ ಆ.26ರಂದು ಜನಜಾಗೃತಿ ಸಮಾವೇಶವನ್ನು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದೇವೆ. ಕಡಿಮೆ ಅಂದರೂ 50 ಸಾವಿರ ಕರಪತ್ರ ಮಾಡಿ ಮನೆ ಮನೆಗೆ ಹಂಚುತ್ತೇವೆ. ಟಿಪ್ಪು ಬಗ್ಗೆ ಸಿದ್ದರಾಮಯ್ಯಗೆ ಇರುವ ಓಲೈಕೆ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ. ಟಿಪ್ಪುವಿನ ವಿಚಾರಕ್ಕೆ ನಾವು ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ. 26ರಂದು ಕಾನೂನು ಸುವ್ಯವಸ್ಥೆ ಹದಗೆಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ನಮಗೆ ಕಾರ್ಯಕ್ರಮ ಮಾಡಲು ಅನುಮತಿ ಕೊಡಲೇಬೇಕು. ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತಾಡುವುದನ್ನು ನಿಲ್ಲಿಸಬೇಕು ಎಂದು ರಂಜನ್ ಹೇಳಿದರು.
ಕಾಂಗ್ರೆಸ್ ಬಾವುಟ, ಹಿಂದೂ ಕಾರ್ಯಕರ್ತ, ಶಾಸಕ ರಂಜನ್ ಜೊತೆ ಫೋಟೊ!
ಮೊಟ್ಟೆಎಸೆದಿರುವ ಸಂಪತ್ ಹಿಂದೂ ಸಂಘಟನೆಗಳ ಕಾರ್ಯಕರ್ತನಾಗಿದ್ದು, ಸಂಘ ಪರಿವಾರದ ಪಥ ಸಂಚನದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಇರುವುದು, ಕಾಮಗಾರಿ ಉದ್ಘಾಟನೆಯ ಸಂದರ್ಭದಲ್ಲಿ ರಂಜನ್ ಅವರ ಜೊತೆಯಲ್ಲಿರುವುದು. ಹಿಂದೂ ಸಮಾವೇಶವೊಂದರಲ್ಲಿ ಗಣವೇಷ ಧರಿಸಿ ಜೊತೆಗಿರವುದು ಹಾಗೂ ಕಾಂಗ್ರೆಸ್ ಬಾವುಟ ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.