ಸಂವಿಧಾನ ಬದಲಾವಣೆ ಕುರಿತು ನಾನು ಹೇಳಿಕೆ ನೀಡಿದ್ದೇನೆಂಬುದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಬೀತು ಮಾಡದಿದ್ದರೆ ನನ್ನ ವಿರುದ್ಧ ಆರೋಪಿಸುವ ಬಿಜೆಪಿ ನಾಯಕರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಬೆಂಗಳೂರು (ಮಾ.26): ಸಂವಿಧಾನ ಬದಲಾವಣೆ ಕುರಿತು ನಾನು ಹೇಳಿಕೆ ನೀಡಿದ್ದೇನೆಂಬುದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಬೀತು ಮಾಡದಿದ್ದರೆ ನನ್ನ ವಿರುದ್ಧ ಆರೋಪಿಸುವ ಬಿಜೆಪಿ ನಾಯಕರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಲು ನನಗೆ ತಲೆ ಕೆಟ್ಟಿಲ್ಲ. ನಾನು ನೀಡಿದ ಸಂದರ್ಶನದಲ್ಲಿ ಸತ್ಯ ಮಾತನ್ನಾಡಿದ್ದೇನೆ ಹಾಗೂ ನನ್ನ ರಾಜಕೀಯ ನಿಲುವು ತಿಳಿಸಿದ್ದೇನೆ.
ಆದರೆ ಅದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಹುಳುಕು ಮುಚ್ಚಿಕೊಳ್ಳಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಜತೆಗೆ, ಒಂದು ವೇಳೆ ನಾನು ಸಂವಿಧಾನ ಬದಲಿಸುತ್ತೇನೆ ಎಂದು ಹೇಳಿದ್ದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಬಿಜೆಪಿ ನಾಯಕರು ನಿವೃತ್ತಿ ತೆಗೆದುಕೊಳ್ಳುತ್ತಾರೆಯೇ? ನನ್ನ ವಿರುದ್ಧ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆಂದಿದ್ದಾರೆ. ನಾನೂ ಕಾಯುತ್ತಿದ್ದೇನೆ ಎಂದು ಹೇಳಿದರು.
ದೆಹಲಿ ನಾಯಕರು ಗಾಬರಿ ಬಿದ್ದಿದ್ದರು: ಹೈಕಮಾಂಡ್ ನಿಮ್ಮಿಂದ ಮಾಹಿತಿ ಪಡೆಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಬಿಜೆಪಿಗರು ಆರೋಪಿಸುತ್ತಿದ್ದಂತೆ ದೆಹಲಿ ನಾಯಕರು ಗಾಬರಿಯಿಂದ ಕರೆ ಮಾಡಿದ್ದರು. ಆದರೆ, ಅವರಿಗೆ ವಿಷಯ ತಿಳಿಸಿದ್ದೇನೆ. ನಾನು ಮಾತನಾಡಿದ ದೃಶ್ಯದ ತುಣುಕನ್ನು ಕಳುಹಿಸಿ ನಾನು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅವರೂ ಅದನ್ನು ಒಪ್ಪಿದ್ದಾರೆ ಎಂದರು.
ಕಾಡುಗೊಲ್ಲ ಸಮುದಾಯಕ್ಕೆ ಜಾತಿ ಸರ್ಟಿಫಿಕೆಟ್ ನೀಡಲು ಕ್ರಮ: ಸಚಿವ ಶಿವರಾಜ ತಂಗಡಗಿ
ಬಿಜೆಪಿಯಿಂದ ಅಪಪ್ರಚಾರ: ಸಂವಿಧಾನ ಬದಲಾವಣೆ ಕುರಿತು ನಾನು ಎಲ್ಲೂ ಹೇಳಿಲ್ಲ. ಬಿಜೆಪಿ ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ-ಸಂವಿಧಾನ ಕುರಿತು ತಾವು ನೀಡಿದ ಹೇಳಿಕೆ ಸಂಸತ್ತಿನಲ್ಲಿ ಭಾರೀ ಗದ್ದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ದೃಶ್ಯ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯನ್ನು ಬಿಜೆಪಿ ತಿರುಚಿದೆ. 36 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂಥ ವಿಚಾರದಲ್ಲಿ ನಾನು ಬಿಜೆಪಿಯ ಜೆ.ಪಿ.ನಡ್ಡಾ ಅವರಿಗಿಂತಲೂ ಸೂಕ್ಷ್ಮ ರಾಜಕಾರಣಿ. ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರು ಎಳೆದು ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.