
ಬೆಂಗಳೂರು (ಮಾ.25): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಸ್ಲಿಂ ಮೀಸಲು ವಿಚಾರವಾಗಿ ‘ಸಂವಿಧಾನ ಬದಲು’ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಎಷ್ಟರ ಮಟ್ಟಿಗೆ ಹೋಗುತ್ತದೆ ಎಂಬುದಕ್ಕೆ ಡಿಕೆಶಿ ಹೇಳಿಕೆ ಕನ್ನಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೊಂದು ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ಡಿಕೆಶಿ ರಾಜೀನಾಮೆ ನೀಡಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ, ಈರಣ್ಣ ಕಡಾಡಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ವಿಜಯೇಂದ್ರ, ಅಧಿಕಾರಕ್ಕಾಗಿ ಕಾಂಗ್ರೆಸ್ ಎಷ್ಟರ ಮಟ್ಟಿಗೆ ಹೋಗುತ್ತದೆ ಎಂಬುದಕ್ಕೆ ಡಿಕೆಶಿ ಹೇಳಿಕೆ ಕನ್ನಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೆ ಎಂದು ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ನಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದರು. ವಾಸ್ತವವಾಗಿ ಸ್ವಾತಂತ್ರ್ಯದ ನಂತರ ಸಂವಿಧಾನಕ್ಕೆ ಅತಿ ಹೆಚ್ಚು ಬದಲಾವಣೆ ಮಾಡಿದ್ದು ಕಾಂಗ್ರೆಸ್. ಇಂದು ಶಿವಕುಮಾರ್‌ರ ಹೇಳಿಕೆಯಿಂದ ಇವರ ಬಂಡವಾಳ ಬಯಲಾಗಿದೆ. ಆದರೆ, ಇಂತಹದ್ದಕ್ಕೆಲ್ಲ ಪ್ರಧಾನಿ ಮೋದಿ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಅರ್ಹರ ಮನೆ ಬಾಗಿಲಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಈ ಹಿಂದೆ ಬಿಜೆಪಿಯಲ್ಲಿ ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿದವರಿಗೆ ಟಿಕೆಟ್ ನೀಡಿಲ್ಲ. ಈಗ ಕಾಂಗ್ರೆಸ್‌ನಿಂದಲೂ ಸಂವಿಧಾನ ಬದಲಾವಣೆ ಹೇಳಿಕೆ ಪ್ರಸ್ತಾಪವಾಗಿದೆ. ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಈರಣ್ಣ ಕಡಾಡಿ, ನಾರಾಯಣ್ ಸಾ ಬಾಂಡಿಂಗೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಡಿಕೆಶಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ ಅವರನ್ನು ಕೂಡಲೇ ಸಂಪುಟದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಮುಸ್ಲಿಮರಿಗೆ 4%ರಷ್ಟು ಮೀಸಲು ನೀಡುವುದರ ವಿರುದ್ಧ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಇನ್ನು ಮುಂದೆ ರಾಹುಲ್ ಗಾಂಧಿಯವರಿಗೆ ಸಂವಿಧಾನ ಪುಸ್ತಕ ಹಿಡಿದುಕೊಳ್ಳುವ ನೈತಿಕ ಹಕ್ಕಿಲ್ಲ. ಕರ್ನಾಟಕದಲ್ಲಿ ಇರುವುದು ಸಂವಿಧಾನ ವಿರೋಧಿ ಸರ್ಕಾರ. ಇಂಥ ಸರ್ಕಾರಕ್ಕೆ ಆಳ್ವಿಕೆ ಮಾಡಲು ನೈತಿಕತೆ ಇಲ್ಲ. ಸರ್ಕಾರವೇ ರಾಜೀನಾಮೆ ಕೊಡಬೇಕು. ಧರ್ಮಾಧಾರಿತ ವಿಚಾರಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಆಂಧ್ರ, ಪಶ್ಚಿಮ ಬಂಗಾಳ ರಾಜ್ಯಗಳ ವಿಚಾರವಾಗಿ ಸುಪ್ರೀಂಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ ಎಂದು ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಬಿಬಿಎಂಪಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಗಾಡಿ: ಡಿ.ಕೆ.ಶಿವಕುಮಾರ್
ಕರ್ನಾಟಕ ಇಂದು ಮತೀಯ ರಾಜ್ಯವಾಗುತ್ತಿದ್ದು, ಓಟ್ ಬ್ಯಾಂಕ್ ಓಲೈಕೆ ಮಿತಿ ಮೀರಿದೆ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಇದೇ ವೇಳೆ, ಕಲಬುರಗಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಎನ್.ರವಿಕುಮಾರ್, ಕಾರ್ಕಳದಲ್ಲಿ ಮಾತನಾಡಿದ ಮಾಜಿ ಸಚಿವ ವಿ.ಸುನೀಲ್ ಕುಮಾರ್, ಅಲ್ಪಸಂಖ್ಯಾತರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಬಿಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಇದನ್ನು ತಡೆಯುತ್ತೇವೆ. ಇದಕ್ಕಾಗಿ ಎಂತಹ ಹೋರಾಟಕ್ಕೂ ಬಿಜೆಪಿ ಸಿದ್ದ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.