ಆರೋಗ್ಯ ಇಲಾಖೆ ಚೆನ್ನಾಗಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಂಗಳವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮೈಸೂರು (ಜೂ.29): ಆರೋಗ್ಯ ಇಲಾಖೆ ಚೆನ್ನಾಗಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಂಗಳವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, 108 ಆಂಬ್ಯುಲೆನ್ಸ್ ವ್ಯವಸ್ಥೆ ಸರಿಯಿಲ್ಲ. ಅವುಗಳ ನವೀಕರಣ ಮಾಡುತ್ತೇವೆ. ಹೊಸ ಆಂಬ್ಯುಲೆನ್ಸ್ ಬರುತ್ತದೆ. 3 ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿ ಮಾಡುತ್ತೇವೆ ಎಂದು ಹೇಳಿದರು. ಇದು ಮುಖ್ಯಮಂತ್ರಿಗಳ ಜಿಲ್ಲೆ. ಜಿಲ್ಲಾಸ್ಪತ್ರೆಯ ಒಳ್ಳೆಯ ಕಟ್ಟಡ ಇದೆ.
ಆಸ್ಪತ್ರೆಯ ಸದ್ಬಳಕಗೆ ಹೊಸ ರೂಪ ಕೊಡಲು ನಿರ್ಧಾರ ಕೈಗೊಂಡಿದ್ದೇವೆ. ಆ ಮೂಲಕ ಮೈಸೂರು ಜನರ ಆರೋಗ್ಯ ಕಾಪಾಡುವ ಕೆಲಸ ಮಾಡಲಿದ್ದೇವೆ ಎಂದರು. ಕೆ.ಆರ್ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಬರುತ್ತದೆ. ದೂರುಗಳು ನೀಡುವಾಗ ಸ್ಪಷ್ಟತೆ ಇರಲಿ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ನೀಡಿ. ಅಪ್ಲಿಕೇಷನ್ ಹಾಕಲು ಕಾರ್ಯಕರ್ತರೂ ಸಹಕಾರ ನೀಡಿ. ಗ್ರಾಮ ಒನ್ ಕೇಂದ್ರದಲ್ಲಿ ನೆಗೆಟಿವ್ ಆಗಿ ಮಾತನಾಡುವುದು ನಡೆಯುತ್ತಿದೆ. ಆ ಬಗ್ಗೆ ಎಚ್ಚರವಿರಲಿ ಎಂದು ಅವರು ಹೇಳಿದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮಾತನಾಡಿ, ನಗರದಲ್ಲಿ ಮಕ್ಕಳಿಗೆ ಡಯಾಲಿಸಿಸ್ ಮಾಡುವ ಸರ್ಕಾರಿ ವ್ಯವಸ್ಥೆಯಿಲ್ಲ. ಅದನ್ನು ಇಲ್ಲಿ ಆರಂಭಿಸಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಎಂ. ಶಿವಣ್ಣ, ಸೂರಜ್ ಹೆಗ್ಡೆ, ರವಿಶಂಕರ್, ರಘು, ಈಶ್ವರ್ ಚಕ್ಕಡಿ, ಗಿರೀಶ್, ಅಶೋಕ್ ಮೊದಲಾದವರು ಇದ್ದರು.
Chitradurga: ಬೊಮ್ಮದೇವರಹಟ್ಟಿ ಬಳಿ ದೇವರ ಎತ್ತುಗಳಿಗೆ ಕಾಡ್ತಿದೆ ಮೇವಿನ ಅಭಾವ
ಆರೋಗ್ಯ ಕ್ಷೇತ್ರದಲ್ಲೂ ಮೈಸೂರು ಮೊದಲ ಸ್ಥಾನದಲ್ಲಿರಲಿ: ಮೈಸೂರು ಅಭಿವೃದ್ಧಿ ಹೊಂದಿರುವ ಜಿಲ್ಲೆಗಳಲ್ಲೊಂದಾಗಿದ್ದು, ಮುಖ್ಯಮಂತ್ರಿಯವರ ತವರು ಜಿಲ್ಲೆಯೂ ಆಗಿದೆ. ಹೀಗಾಗಿ, ಇಲ್ಲಿನ ಆರೋಗ್ಯ ವ್ಯವಸ್ಥೆಯು ರಾಜ್ಯ ಮಟ್ಟದಲ್ಲಿ ಅಗ್ರ ಸ್ಥಾನಕ್ಕೆ ಸೇರುವಂತೆ ಕಾರ್ಯ ನಿರ್ವಹಿಸಬೇಕು. ಮೂಲ ಸೌಲಭ್ಯವನ್ನು ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಪಂ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕುಂದುಕೊರತೆಯನ್ನು ಪರಿಶೀಲಿಸಿ ನಿವಾರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ತಮಿಳುನಾಡು, ಕೇರಳ ರಾಜ್ಯ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆಯನ್ನು ಹೊಂದಿವೆ. ಅದರಂತೆ ಮೈಸೂರಿನಲ್ಲಿಯು ಆರೋಗ್ಯಕ್ಕೆ ಸಂಬಂಧಿಸಿದ ಸವಲತ್ತುಗಳು ಸಾರ್ವಜನಿಕರಿಗೆ ಸಿಗುವಂತೆ ಕರ್ತವ್ಯ ನಿರ್ವಹಿಸಿ. ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪೈಕಿ ಮೈಸೂರು ಅಗ್ರಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಎಲ್ಲಾ ವೈದ್ಯಾಧಿಕಾರಿಗಳ ಜವಾಬ್ದಾರಿ ಎಂದು ಅವರು ಹೇಳಿದರು. ತಾಲೂಕು ಆಸ್ಪತ್ರೆಗಳಿಗೆ ಸುಸಜ್ಜಿತ ಕಟ್ಟಡ, ವೈದ್ಯಕೀಯ ಉಪಕರಣಗಳ ಜತೆಗೆ ಅಗತ್ಯ ಸಿಬ್ಬಂದಿ ಇದ್ದರೂ ಹೊರ ರೋಗಿಗಳ ಪ್ರಮಾಣ ಕುಸಿದಿರುವುದಕ್ಕೆ ಕಾರಣ ಏನು? ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಲಭ್ಯವಿದ್ದರೆ ಜನರು ಏಕೆ ಬೇರೆಡೆಗೆ ಹೋಗುತ್ತಾರೆ ಎಂದು ಅವರು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
Davanagere: ಭದ್ರಾ ಕಾಲುವೆ ದುರಸ್ಥಿಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ
ಪಿರಿಯಾಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳ ದಾಖಲಾತಿ ಕಡಿಮೆ ಇರುವುದು ಸ್ತ್ರೀ ರೋಗ ತಜ್ಞರು ಮತ್ತು ಅರವಳಿಕೆ ತಜ್ಞರು ಇಲ್ಲದೇ ಇರುವುದೇ ಕಾರಣ. ಬಹುಪಾಲು ಮಂದಿ ಕೆ.ಆರ್. ನಗರ ಮತ್ತು ಮಡಿಕೇರಿ ಆಸ್ಪತ್ರೆಗೆ ಹೋಗುತ್ತಾರೆ ಎಂದು ತಾಲೂಕು ವೈದ್ಯಾಧಿಕಾರಿ ಮಾಹಿತಿ ನೀಡಿದರು. ಸಚಿವರು ಕೂಡಲೇ ಅಗತ್ಯ ವೈದ್ಯರನ್ನು ನೇಮಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಪಿರಿಯಾಪಟ್ಟಣ ಮಾತ್ರವಲ್ಲದೇ ಹುಣಸೂರು ಮತ್ತು ಟಿ. ನರಸೀಪುರದಲ್ಲೂ ಆಸ್ಪತ್ರೆಗಳಿಗೆ ರೋಗಿಗಳು ಬರುವ ಪ್ರಮಾಣ ತಗ್ಗಿದೆ. ಗುಣಮಟ್ಟದ ಚಿಕಿತ್ಸೆ ಇಲ್ಲಿಯೇ ಲಭ್ಯವಾದರೆ ಜನರು ಬೇರೆಡೆ ಹೋಗುವುದಿಲ್ಲ. ವೈದ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.