ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ಸಿಗದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್‌ ಜಾರಕಿಹೊಳಿ

By Kannadaprabha News  |  First Published Mar 11, 2023, 6:23 AM IST

ಅಥಣಿ ಕ್ಷೇತ್ರದಿಂದ ಹಾಲಿ ಶಾಸಕ ಮಹೇಶ್‌ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್‌ ಸಿಗದಿದ್ದರೆ ನಾನೂ ಗೋಕಾಕ್‌ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೊಸ ‘ಬಾಂಬ್‌’ ಸಿಡಿಸಿದ್ದಾರೆ.


ವಿಜಯಪುರ (ಮಾ.11): ಅಥಣಿ ಕ್ಷೇತ್ರದಿಂದ ಹಾಲಿ ಶಾಸಕ ಮಹೇಶ್‌ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್‌ ಸಿಗದಿದ್ದರೆ ನಾನೂ ಗೋಕಾಕ್‌ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೊಸ ‘ಬಾಂಬ್‌’ ಸಿಡಿಸಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಇಂಥದ್ದೊಂದು ಸಂದೇಶವನ್ನು ಬಿಜೆಪಿ ಹೈಕಮಾಂಡ್‌ಗೆ ರವಾನಿಸಿದರು. ಈಗಾಗಲೇ ಮಾಜಿ ಡಿಸಿಎಂ, ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇದೀಗ ರಮೇಶ್‌ ಜಾರಕಿಹೊಳಿ ಅವರು ಕುಮಟಳ್ಳಿ ಅವರಿಗೇ ಆ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಪಟ್ಟುಹಿಡಿದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಒಂದೇ ಪಕ್ಷದಲ್ಲಿದ್ದರೂ ಬೆಳಗಾವಿಯಲ್ಲಿ ಸವದಿ ಮತ್ತು ರಮೇಶ್‌ ಜಾರಕಿಹೊಳಿ ಮೊದಲಿನಿಂದಲೂ ಹಾವು-ಮುಂಗುಸಿಯಂತೆ ಕಚ್ಚಾಡಿಕೊಂಡೇ ಬಂದವರು. ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉಭಯ ನಾಯಕರ ನಡುವಿನ ತಿಕ್ಕಾಟ ಮತ್ತಷ್ಟು ತಾರಕ್ಕೇರಿದೆ. ಬಿಜೆಪಿ ಸರ್ಕಾರ ರಚನೆಗಾಗಿ ಆಪ್ತ, ಅಥಣಿ ಶಾಸಕ ಕುಮಟಳ್ಳಿ ಅವರನ್ನು ರಮೇಶ್‌ ಜಾರಕಿಹೊಳಿ ತಮ್ಮ ಜತೆಗೆ ಕರೆದುಕೊಂಡು ಬಂದಿದ್ದರು. ಅಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕುಮಟಳ್ಳಿ ನಂತರ ಉಪಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಂಬಿ ಬಂದವರಿಗೆ ಕೈಕೊಡಬಾರದು ಎಂದು ರಮೇಶ್‌ ಜಾರಕಿಹೊಳಿ ಪಟ್ಟುಹಿಡಿದಿದ್ದಾರೆ.

Tap to resize

Latest Videos

ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿ ದೇಶಕ್ಕೆ ಬಂದಿಲ್ಲ: ಸಿ.ಟಿ.ರವಿ

ಗುರುವಾರ ಅಥಣಿಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ ವೇಳೆಯೂ ರಮೇಶ್‌ ಜಾರಕಿಹೊಳಿ ಕುಮಟಳ್ಳಿ ಪರ ಮಾತಾಡಿದ್ದರು. ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದ ಮಹೇಶ್‌ ಕುಮಟಳ್ಳಿ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಬಹಿರಂಗವಾಗಿಯೇ ಮನವಿ ಮಾಡಿದ್ದರು. ರಮೇಶ್‌ ಜಾರಕಿಹೊಳಿ ಅವರ ಈ ನಡೆಗೆ ಅಥಣಿ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೊಬ್ಬರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು.

ಮುಂಬರುವ ಚುನಾವಣೆಯಲ್ಲಿ ಕುಮಠಳ್ಳಿ ಬೆಂಬಲಿಸಿ: ಅಥಣಿ ಮತಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದ ಶಾಸಕ ಮಹೇಶ ಕುಮಠಳ್ಳಿ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮನವಿ ಮಾಡಿದರು. ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಉಪಚುನಾವಣೆಯಲ್ಲಿ ಬೆಂಬಲಿಸಿದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬೆಂಬಲಿಸಬೇಕು. ಅಥಣಿ ಮತಕ್ಷೇತ್ರದ ಬಹು ದಿನಗಳು ಬೇಡಿಕೆಯಾಗಿದ್ದ ಅಮ್ಮಾಜೇಶ್ವರಿ, ಕೊಟ್ಟಲಗಿ ಏತ ನೀರಾವರಿ ಯೋಜನೆಗೆ ಈಗಾಗಲೇ ಮಂಜೂರಾತಿ ದೊರಕಿದ್ದು, ಕೆಲವೇ ದಿನಗಳಲ್ಲಿಯೇ ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಶತಸಿದ್ಧ: ಜಗದೀಶ್‌ ಶೆಟ್ಟರ್‌

ಅಥಣಿ ಶಾಸಕ ಹಾಗೂ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಮಾತನಾಡಿ, ರಮೇಶ ಜಾರಕಿಹೊಳಿಯವರ ನೀರಾವರಿ ಸಚಿವರಾಗಿದ್ದಾಗ ಅವರ ಪ್ರಯತ್ನದ ಫಲವಾಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮಂಜೂರಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ನಾನು ಇಬ್ಬರೂ ಸೇರಿ ಅಥಣಿ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದೇವೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

click me!