ಹಾಸನ (ಜ.30) : ವಿಧಾನಸಭೆ ಚುನಾವಣೆಗೆ ತಮ್ಮ ಪತ್ನಿ ಭವಾನಿ ರೇವಣ್ಣ ಅವರ ಸ್ಪರ್ಧೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಸೃಷ್ಟಿಯಾಗಿರುವ ದಾಯಾದಿ ಕಲಹದ ಆತಂಕ ತಿಳಿಗೊಳಿಸಲು ಇದೀಗ ಸ್ವತಃ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೇ ಮುಂದಾಗಿದ್ದಾರೆ. ನಾನು ಬದುಕಿರುವವರೆಗೂ ಅಣ್ಣ-ತಮ್ಮಂದಿರು(ರೇವಣ್ಣ-ಕುಮಾರಸ್ವಾಮಿ) ಹೊಡೆದಾಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ. ಜತೆಗೆ, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.
ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆ(Assembly election)ಯಲ್ಲಿ ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ(HD Kumaraswamy) ನಿರ್ಣಯವೇ ಅಂತಿಮ. ಹಾಸನ ಹಾಗೂ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಟಿಕೆಟ್ ಕೊಡುವ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(HD Devegowda), ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ(CM Ibrahim) ಹಾಗೂ ಜಿಲ್ಲೆಯ ಜೆಡಿಎಸ್ ಶಾಸಕರ ನಿರ್ಣಯಕ್ಕೆ ನಾನು ಮತ್ತು ನನ್ನ ಕುಟುಂಬ ಬದ್ಧರಾಗಿರುತ್ತದೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ ಮತ್ತು ನಾನು ಹೊಡೆದಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು.
undefined
ಹಾಸನ ಟಿಕೆಟ್ ಫೈಟ್‌ಗೆ ತೆರೆ: ಪತ್ನಿ, ಮಕ್ಕಳಿಗೆ ನಿರಾಶೆ ಮಾಡಿದ ಎಚ್.ಡಿ. ರೇವಣ್ಣ
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಮತ್ತು ರೇವಣ್ಣ(HD Revanna) ಹೊಡೆದಾಟಕ್ಕೆ ಇಳಿಯಲಿದ್ದಾರೆಂದು ಕಳೆದ ಮೂರು ದಿನಗಳಿಂದ ಚರ್ಚೆ ಆಗುತ್ತಿದೆ. ಯಾರೇ ಆದರೂ ಆ ರೀತಿ ಅಂದುಕೊಂಡಿದ್ದರೆ ಅಂಥವರಿಗೆ ಭ್ರಮನಿರಸನ ಆಗುವುದು ಖಚಿತ. ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಬೈಪಾಸ್ ಸರ್ಜರಿ ಆಗಿದೆ. ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಮತ್ತು ನನ್ನನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಾಸನ ಜಿಲ್ಲೆಯ ಎಲ್ಲಾ ಟಿಕೆಟ್‌ಗಳ ಬಗ್ಗೆ ಕುಮಾರಸ್ವಾಮಿ, ಜಿಲ್ಲೆಯ ಶಾಸಕರು, ಪಕ್ಷದ ರಾಜ್ಯಾಧ್ಯಕ್ಷರು, ದೇವೇಗೌಡರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ. ಈ ವಿಚಾರವಾಗಿ ನಾನಾಗಲಿ, ಪ್ರಜ್ವಲ್, ಸೂರಜ್ ಆಗಲಿ ಏನು ಮಾತನಾಡುತ್ತೇವೆ ಎನ್ನುವುದು ಮುಖ್ಯ ಅಲ್ಲ ಎಂದು ಹೇಳಿದರು.
ದೇವೇಗೌಡರ ಕಣ್ಣಮುಂದೆ ಜೆಡಿಎಸ್ ಸರ್ಕಾರ ತರಬೇಕು ಎಂದು ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ. ಕೊಟ್ಟಮಾತಿನಂತೆ ನಡೆಯುವ ರಾಜಕಾರಣಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಕೊಟ್ಟಮಾತಿನಂತೆ ಸಾಲಮನ್ನಾ ಮಾಡಿದರು. ನಮಗೆ ಬಹುಮತ ಬಂದಿಲ್ಲ. ಸಾಲ ಮನ್ನಾ ಮಾಡೋಕೆ ಆಗಲ್ಲ ಎನ್ನಬಹುದಿತ್ತು. ಆದರೂ ಕೊಟ್ಟಮಾತಿನಂತೆ ನಡೆದುಕೊಂಡಿದ್ದಾರೆ ಎಂದರು.
ಪ್ರಜ್ವಲ್, ಸೂರಜ್ ರಾಜೀನಾಮೆಗೆ ಸಿದ್ಧ:
ಇದೇ ವೇಳೆ ಕುಟುಂಬ ರಾಜಕಾರಣದ ಆರೋಪ ಕುರಿತು ಎಚ್.ಡಿ.ರೇವಣ್ಣ ತೀವ್ರ ಕಿಡಿಕಾರಿದ್ದಾರೆ. ನಮ್ಮದು ಕುಟುಂಬ ರಾಜಕಾರಣ ಎನ್ನುವುದಾದರೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇಲ್ಲವೇ? ನಮ್ಮ ಮಕ್ಕಳ ಮೇಲೆ ಅಷ್ಟೊಂದು ಕಣ್ಣಿದ್ದರೆ ಸಂಸದ ಪ್ರಜ್ವಲ್, ಎಂಎಲ್ಸಿ ಸೂರಜ್ ಅವರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದರು.
ನನ್ನ, ರೇವಣ್ಣ ಮಧ್ಯೆ ಗೊಂದಲ ಸೃಷ್ಟಿಸಲು ಸಾಧ್ಯವಿಲ್ಲ: ಎಚ್‌ಡಿಕೆ
ರಾಯಚೂರು : ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅವರು ಟಿಕೆಟ್ ಕೇಳಿರುವುದು ದೊಡ್ಡ ವಿಷಯವಲ್ಲ. ಆ ಕುರಿತ ಗೊಂದಲವೇನಿದ್ದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಮಕ್ಕಳಾಡಿದ ಮಾತುಗಳನ್ನು ದೊಡ್ಡದನ್ನಾಗಿ ಮಾಡುವ ಅಗತ್ಯವಿಲ್ಲ. ನನ್ನ ಮತ್ತು ಸೋದರ ಎಚ್.ಡಿ.ರೇವಣ್ಣ ನಡುವೆ ಗೊಂದಲ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಎಚ್.ಡಿ.ರೇವಣ್ಣ ಅವರು ಪಕ್ಷದ ಹಿತದೃಷ್ಟಿಯಿಂದ ತಮಗಿರುವ ಅನುಭವದ ಆಧಾರದ ಮೇರೆಗೆ ಟಿಕೆಟ್ ವಿಚಾರದ ದೃಷ್ಟಿಯಿಂದ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಪಕ್ಷದ ಬಗ್ಗೆ ಗೊಂದಲ ಸೃಷ್ಟಿಸುವವರಿಗೆ ಇತಿಶ್ರೀ ಹಾಡಿದ್ದಾರೆ. ನಾವು ಯಾವುದೇ ವಿಚಾರವಾದರೂ ಒಟ್ಟಾಗಿ ಕೂತು ತೀರ್ಮಾನ ಮಾಡುತ್ತೇವೆ. ಹಾಸನ ಮಾತ್ರವಲ್ಲ ಉಳಿದ ಕ್ಷೇತ್ರಗಳ ಟಿಕೆಟ್ ವಿಚಾರವನ್ನೂ ಸಮಾನ ಮನಸ್ಕರು ಕೂತು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
Karnataka Election 2023: ಹಾಸನ ಜೆಡಿಎಸ್ ಟಿಕೆಟ್ ಫೈಟ್: ಭವಾನಿ ರೇವಣ್ಣ ಪಟ್ಟು, ಹೆಚ್.ಡಿ.ಕೆಗೆ ಇಕ್ಕಟ್ಟು
ಎಚ್‌ಡಿಕೆಯದ್ದು ಹೋರಾಟ
ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಬೈಪಾಸ್ ಸರ್ಜರಿ ಆಗಿದೆ. ಆದರೂ ದೇವೇಗೌಡರ ಕಣ್ಣಮುಂದೆ ಜೆಡಿಎಸ್ ಸರ್ಕಾರ ತರಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಕೊಟ್ಟಮಾತಿನಂತೆ ನಡೆಯುವ ರಾಜಕಾರಣಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಕುಮಾರಸ್ವಾಮಿ ಹಾಗೂ ನಾನು ಹೊಡೆದಾಟಕ್ಕೆ ಇಳಿಯುತ್ತೇವೆ ಎಂದು ಯಾರಾದರೂ ಭಾವಿಸಿದ್ದರೆ ಅವರಿಗೆ ಭ್ರಮನಿರಸನ ಖಚಿತ.
- ಎಚ್.ಡಿ. ರೇವಣ್ಣ, ಮಾಜಿ ಸಚಿವ
ಮನೆಯೊಳಗೇ ಬಗೆಹರಿಸ್ತೀವಿ
ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅವರು ಟಿಕೆಟ್ ಕೇಳಿರುವುದು ದೊಡ್ಡ ವಿಷಯವಲ್ಲ. ಆ ಕುರಿತ ಗೊಂದಲವೇನಿದ್ದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ನನ್ನ ಮತ್ತು ಸೋದರ ಎಚ್.ಡಿ.ರೇವಣ್ಣ ನಡುವೆ ಗೊಂದಲ ಸೃಷ್ಟಿಸಲು ಸಾಧ್ಯವಿಲ್ಲ. ಎಚ್.ಡಿ.ರೇವಣ್ಣ ಅವರು ಪಕ್ಷದ ಹಿತದೃಷ್ಟಿಯಿಂದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
- ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ