ರೇವಣ್ಣ, ಕುಮಾರಣ್ಣ, ದೇವೇಗೌಡರೇ ಸ್ಪರ್ಧಿಸಲಿ ನಾನು ಹೆದರೋಲ್ಲ: ಕೆ.ಸಿ.ನಾರಾಯಣಗೌಡ

By Kannadaprabha NewsFirst Published Feb 5, 2023, 9:00 AM IST
Highlights

ಮುಂದಿನ ಚುನಾವಣೆಯಲ್ಲಿ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ರೇವಣ್ಣ, ಕುಮಾರಣ್ಣ ಅಷ್ಟೇಕೆ ದೇವೇಗೌಡರೇ ಬಂದು ಸ್ಪರ್ಧಿಸಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಚಿವ, ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡ ಧೈರ್ಯವಾಗಿ ಹೇಳಿದರು.

ಮಂಡ್ಯ (ಫೆ.5) : ಮುಂದಿನ ಚುನಾವಣೆಯಲ್ಲಿ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ರೇವಣ್ಣ, ಕುಮಾರಣ್ಣ ಅಷ್ಟೇಕೆ ದೇವೇಗೌಡರೇ ಬಂದು ಸ್ಪರ್ಧಿಸಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಚಿವ, ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡ ಧೈರ್ಯವಾಗಿ ಹೇಳಿದರು.

ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಚುನಾವಣಾ ಕಣ. ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ಯಾರನ್ನೂ ಬರಬೇಡಿ ಎಂದು ಹೇಳಲಾಗುವುದಿಲ್ಲ. ರೇವಣ್ಣನಾದ್ರೂ ಬರಲಿ, ಕುಮಾರಣ್ಣ ಬೇಕಾದರೂ ಬರಲಿ, ದೇವೇಗೌಡರೇ ಕಣಕ್ಕಿಳಿಯಲಿ. ನಾನೇ ಅವರಿಗೆ ಖುದ್ದು ಆಹ್ವಾನ ಕೊಡುತ್ತಿದ್ದೇನೆ. ಯಾರೇ ಬಂದು ಸ್ಪರ್ಧೆ ಮಾಡಿದರೂ ನನಗೆ ಭಯ ಇಲ್ಲ ಎಂದು ರೇವಣ್ಣ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆಯಾಗುತ್ತಿರುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಆಲಿಬಾಬ ಕಥೆಗೆ ಹೋಲಿಸಿದ ಜೆಡಿಎಸ್‌ ಮುಖಂಡನಿಗೆ ಸಚಿವ ನಾರಾಯಣಗೌಡರ ತರಾಟೆ

ಕ್ಷೇತ್ರದೊಳಗೆ ನನಗೆ ಯಾವುದೇ ಭಯದ ವಾತಾವರಣ ಇಲ್ಲ. ಚುನಾವಣೆಯನ್ನು ಎದುರಿಸುವುದು ನಮ್ಮ ಧರ್ಮ. ಯಾರನ್ನು ಆಯ್ಕೆ ಮಾಡಬೇಕೆಂದು ನಮ್ಮ ತಾಲೂಕಿನ ಮತದಾರ ದೇವತೆಗಳು ನಿರ್ಧರಿಸುತ್ತಾರೆ. ಅವರನ್ನು ಬರಬೇಡಿ ಎಂದು ಹೇಳಲು ನಾನು ಯಾರು. ಬರುವವರನ್ನು ನಾವು ಬೇಡ ಎನ್ನುವುದಿಲ್ಲ ಎಂದು ನುಡಿದರು.

ಜೆಡಿಎಸ್‌ನಲ್ಲಿ ಟಿಕೆಟ್‌ ಗೊಂದಲವಿರುವುದಕ್ಕೆ ನಾನೇನು ಹೇಳಲಿ. ನಾನು ಜೆಡಿಎಸ್‌ ಬಿಟ್ಟವನು. ಪಕ್ಷಕಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಟಿಕೆಟ್‌ಗೊಂದಲ ಅವರ ಪಕ್ಷಕ್ಕೆ ಬಿಟ್ಟವಿಚಾರ ಎಂದರು.

ಕೆಆರ್ ಪೇಟೆಯಲ್ಲಿ ಶುರುವಾಯ್ತು ಗಿಫ್ಟ್ ಪಾಲಿಟಿಕ್ಸ್:

ಮಂಡ್ಯ: ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಚುನಾವಣೆಗೂ ಮುನ್ನವೇ ಗಿಫ್‌್ಟಪಾಲಿಟಿಕ್ಸ್‌ ಶುರುವಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸಚಿವ ಹಾಗೂ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡ ಅವರು ಗ್ರಾಪಂ ಸದಸ್ಯರಿಗೆ ಭರ್ಜರಿ ಉಡುಗೊರೆ ನೀಡುತ್ತಿದ್ದಾರೆ. ಈ ಮೂಲಕ ಚುನಾವಣಾ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಲಾರಂಭಿಸಿದ್ದಾರೆ.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿ ಶುಭಾಶಯದ ಹೆಸರಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳಿಗೆ 32 ಇಂಚಿನ 500ಕ್ಕೂ ಹೆಚ್ಚು ಸ್ಮಾರ್ಚ್‌ ಟಿವಿ ನೀಡಿ ಅಭಿನಂದಿಸಿದ್ದಾರೆ. ಪಂಚಾಯ್ತಿ ಮಟ್ಟದಲ್ಲಿ ಮತ ಬ್ಯಾಂಕ್‌ ಗಟ್ಟಿಗೊಳಿಸಲು ಸ್ಮಾರ್ಚ್‌ ಟಿವಿಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆಂಬ ಮಾತುಗಳು ಕ್ಷೇತ್ರದೊಳಗೆ ಕೇಳಿಬರುತ್ತಿವೆ.

ಸಚಿವರು ನೀಡಿದ ಉಡುಗೊರೆಯಿಂದ ಸಂತಸಗೊಂಡಿರುವ ಪಂಚಾಯ್ತಿ ಸದಸ್ಯರು ಹಾಗೂ ಪರಾಜಿತರು ನಾರಾಯಣಗೌಡರ ಪರ ಜೈಕಾರ ಹಾಕುತ್ತಿದ್ದಾರೆ. 2023ರ ಚುನಾವಣೆಯಲ್ಲೂ ಕ್ಷೇತ್ರದೊಳಗೆ ಶಾಸಕ ಕೆ.ಸಿ.ನಾರಾಯಣಗೌಡರದ್ದೇ ಝೇಂಕಾರ ಎಂದು ಹೇಳುತ್ತಿದ್ದಾರೆ.

Assembly election: ಬೆಳಗಾವಿ ಉತ್ತರ ಕ್ಷೇತ್ರಕ್ಕೂ ವ್ಯಾಪಿಸಿದ ಗಿಫ್ಟ್ ಪಾಲಿಟಿಕ್ಸ್: ಬಿಜೆಪಿ ಟಿಕೆಟ್‌ಗೆ ಭಾರಿ ಲಾಬಿ

ಅಂದ ಹಾಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀಡಲಾಗಿರುವ 32 ಇಂಚಿನ ಸ್ಮಾರ್ಚ್‌ ಟೀವಿಯ ವಿಶೇಷತೆ ಎಂದರೆ ಟಿ.ವಿ.ಆನ್‌ ಮಾಡಿದರೆ ಕೆ.ಸಿ.ನಾರಾಯಣಗೌಡರ ಫೋಟೋ ಬರುವ ರೀತಿಯಲ್ಲಿ ತಾಂತ್ರಿಕತೆ ಅಳವಡಿಸಿ ನಂತರದಲ್ಲಿ ವಿವಿಧ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಸಚಿವರು ಕ್ಷೇತ್ರದಲ್ಲಿ ಹಂಚಿಕೆ ಮಾಡಿರುವ ಎಲ್ಲಾ ಟೀವಿಗಳಲ್ಲೂ ಇದೇ ರೀತಿಯ ತಾಂತ್ರಿಕತೆಯನ್ನು ಅಳವಡಿಸಲಾಗಿದೆ.

click me!