ಸುಮಲತಾರ ಹಿಂದೆ ಮುಂದೆ ಸುತ್ತಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ವಾರ್ನಿಂಗ್!

By Kannadaprabha NewsFirst Published Feb 5, 2023, 8:48 AM IST
Highlights

ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಬೆಂಬಲಿಸಿ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌ ಎಚ್ಚರಿಸಿದ್ದಾರೆ.

ಮಂಡ್ಯ (ಫೆ.5) :

ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಬೆಂಬಲಿಸಿ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌ ಎಚ್ಚರಿಸಿದ್ದಾರೆ.

ಇತ್ತೀಚೆಗೆ ಕರ್ನಾಟಕ ಸಂಘದಲ್ಲಿ ಸಂಸದೆ ಸುಮಲತಾ ಬೆಂಬಲಿಗರು ಸಭೆ ಕರೆದಿದ್ದರು. ಈ ಸಭೆಗೆ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಭಾಗಿಯಾಗಿದ್ದರು. ಇನ್ನು ಮುಂದೆ ಅವರ ರಾಜಕೀಯ ತೀರ್ಮಾನದ ಸಭೆ-ಸಮಾರಂಭಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದರೆ ಜಿಲ್ಲಾ ನಾಯಕರ ಗಮನಕ್ಕೆ ತಂದು ಕ್ರಮ ಜರುಗಿಸುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಸುಮಲತಾ ಅವರು ಕಾಂಗ್ರೆಸ್‌ ಸೇರುವರೋ, ಬಿಜೆಪಿ ಸೇರುವರೋ ಅವರ ವಿವೇಚನೆಗೆ ಬಿಟ್ಟದ್ದು. ಅದೇ ರೀತಿ ಕಾಂಗ್ರೆಸ್‌ ಪಕ್ಷಕ್ಕೆ ಸುಮಲತಾರನ್ನು ಸೇರಿಸಿಕೊಂಡರೆ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಅವರೊಂದಿಗೆ ಗುರುತಿಸಿಕೊಳ್ಳುವುದರಿಂದ ಕಾರ್ಯಕರ್ತರು ದೂರವಿರಬೇಕು. ಸುಮಲತಾ ಬೆಂಬಲಿಗರು ಕಾಂಗ್ರೆಸ್‌ ಕಾರ್ಯಕರ್ತರನ್ನು ಸಭೆ-ಸಮಾರಂಭಗಳಿಗೆ ಆಹ್ವಾನಿಸದಂತೆ ತಿಳಿಸಿದರು.

Assembly election: ನಾಗಮಂಗಲದಲ್ಲಿ ಜೆಡಿಎಸ್‌ ಟಾರ್ಗೇಟ್‌..!

2019ರ ಲೋಕಸಭಾ ಚುನಾವಣಾ ಸಮಯದಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಕಣದಲ್ಲಿದ್ದರೂ ಸ್ಥಳೀಯ ಕಾರಣಗಳಿಂದ ಸುಮಲತಾ ಅಂಬರೀಶ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಬೆಂಬಲಿಸಿ ಗೆಲುವಿಗೆ ನೆರವಾಗಿದ್ದರು. ಆದರೆ, ನಂತರದ ಬೆಳವಣಿಗೆಯಲ್ಲಿ ಸುಮಲತಾ ಅವರು ಬಿಜೆಪಿ ಪರವಾದ ನಿಲುವುಗಳನ್ನು ಪ್ರದರ್ಶಿಸುತ್ತಾ, ರೈತ ವಿರೋಧಿ, ಜನವಿರೋಧಿ ಮಸೂದೆಗಳನ್ನು ಬೆಂಬಲಿಸುತ್ತಾ ಬಂದಿದ್ದರು ಎಂದರು.

ಲೋಕಸಭಾ ಚುನಾವಣೆ ಬಳಿಕ ನಡೆದ ಸಹಕಾರ ಸಂಘಗಳ ಚುನಾವಣೆ, ಕೆ.ಆರ್‌.ಪೇಟೆ ಉಪ ಚುನಾವಣೆ, ಎರಡು ವಿಧಾನ ಪರಿಷತ್‌ ಚುನಾವಣೆಗಳಲ್ಲೂ ಸುಮಲತಾ ತಟಸ್ಥ ಧೋರಣೆ ಪ್ರದರ್ಶಿಸಿ ರಾಜಕೀಯ ತೀರ್ಮಾನಗಳನ್ನು ಕೈಗೊಂಡಿರುವುದಿಲ್ಲ. ಹಾಗಾಗಿ ಸುಮಲತಾ ಅವರೊಂದಿಗೆ ಸಭೆ-ಸಮಾರಂಭಗಳಲ್ಲಿ ಯಾರೂ ಗುರುತಿಸಿಕೊಳ್ಳಬಾರದು. ಒಂದು ವೇಳೆ ಗುರುತಿಸಿಕೊಂಡರೆ ಶಿಸ್ತುಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದರು. ಗೋಷ್ಠಿಯಲ್ಲಿ ರುದ್ರಪ್ಪ, ಅಪ್ಪಾಜಿ, ವಿಜಯಲಕ್ಷ್ಮೇ, ಅಂಜನಾ, ವಿಜಯಕುಮಾರ್‌, ನಯೀಂ ಇದ್ದರು.

click me!