Assembly election: ನಾಗಮಂಗಲದಲ್ಲಿ ಜೆಡಿಎಸ್‌ ಟಾರ್ಗೇಟ್‌..!

By Kannadaprabha NewsFirst Published Feb 5, 2023, 8:35 AM IST
Highlights

ನಾಗಮಂಗಲ ಕ್ಷೇತ್ರ ಹಿಂದಿನಿಂದಲೂ ರಾಜಕೀಯ ಜಿದ್ದಾಜಿದ್ದಿನ ಕಣ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗೂ ಜೆಡಿಎಸ್‌ ನೇರ ಟಾರ್ಗೇಟ್‌ ಆಗಿದೆ. ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ರಾಜಕೀಯ ಸನ್ನಿವೇಶ ಸೃಷ್ಟಿಯಾಗಿದೆ. ಸ್ವಪಕ್ಷೀಯರನ್ನು ವಿಶ್ವಾಸದಲ್ಲಿ ಉಳಿಸಿಕೊಳ್ಳಲಾಗದ ಜೆಡಿಎಸ್‌ ಚುನಾವಣೆ ಘೋಷಣೆಗೆ ಮುನ್ನವೇ ಏಕಾಂಗಿಯಾಗಿರುವಂತೆ ಕಂಡುಬರುತ್ತಿದೆ.

ಮಂಡ್ಯ ಮಂಜುನಾಥ

 ಮಂಡ್ಯ (ಫೆ.5) :  ನಾಗಮಂಗಲ ಕ್ಷೇತ್ರ ಹಿಂದಿನಿಂದಲೂ ರಾಜಕೀಯ ಜಿದ್ದಾಜಿದ್ದಿನ ಕಣ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗೂ ಜೆಡಿಎಸ್‌ ನೇರ ಟಾರ್ಗೇಟ್‌ ಆಗಿದೆ. ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ರಾಜಕೀಯ ಸನ್ನಿವೇಶ ಸೃಷ್ಟಿಯಾಗಿದೆ. ಸ್ವಪಕ್ಷೀಯರನ್ನು ವಿಶ್ವಾಸದಲ್ಲಿ ಉಳಿಸಿಕೊಳ್ಳಲಾಗದ ಜೆಡಿಎಸ್‌ ಚುನಾವಣೆ ಘೋಷಣೆಗೆ ಮುನ್ನವೇ ಏಕಾಂಗಿಯಾಗಿರುವಂತೆ ಕಂಡುಬರುತ್ತಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ರಾಜಕೀಯ ಬದ್ಧ ವೈರಿ ಎನ್‌.ಚಲುವರಾಯಸ್ವಾಮಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೆ, ಶಾಸಕ ಕೆ.ಸುರೇಶ್‌ಗೌಡರ ಬಲಗೈ ಭಂಟರೆನಿಸಿದ್ದ ಫೈಟರ್‌ ರವಿ ಬಿಜೆಪಿ ಅಭ್ಯರ್ಥಿ. ಇನ್ನು ಜೆಡಿಎಸ್‌ನಿಂದ ಉಚ್ಛಾಟನೆಗೊಂಡಿರುವ ಎಲ್‌.ಆರ್‌. ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸುವುದು ಖಚಿತವಾಗಿದೆ. ಮುಂಬರುವ ಚುನಾವಣೆಯಲ್ಲಿ ಈ ಮೂವರು ಅಭ್ಯರ್ಥಿಗಳು ಜೆಡಿಎಸ್‌ ಮಣಿಸುವುದನ್ನೇ ನೇರ ಗುರಿಯಾಗಿಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ.

ಮಂಡ್ಯ ರಾಜಕೀಯದ ಎಕ್ಸ್‌ಕ್ಲೂಸಿವ್‌ ದೃಶ್ಯ: ಜೆಡಿಎಸ್‌ ಮಣಿಸಲು ಕಾಂಗ್ರೆಸ್‌ ಮಾಸ್ಟರ್‌ ಪ್ಲಾನ್

ಟೀಕೆ-ವಾಗ್ದಾಳಿಯಲ್ಲೂ ಮುಂದು:

ಚುನಾವಣಾ ಪ್ರಚಾರದಲ್ಲೂ ಫೈಟರ್‌ ರವಿ ಹಾಗೂ ಎಲ್‌.ಆರ್‌.ಶಿವರಾಮೇಗೌಡ ಅವರು ಶಾಸಕ ಸುರೇಶ್‌ಗೌಡರ ವಿರುದ್ಧ ಟೀಕೆ, ವಾಗ್ದಾಳಿ ನಡೆಸುತ್ತಿದ್ದಾರೆ. ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಇಬ್ಬರೂ ಜೆಡಿಎಸ್‌ ವಿರುದ್ಧ ಕೆಂಡಕಾರುತ್ತಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಜೆಡಿಎಸ್‌ ಪಕ್ಷದಲ್ಲಿದ್ದ ಸಮಯದಲ್ಲೇ ಎಲ್‌.ಆರ್‌.ಶಿವರಾಮೇಗೌಡ ಅವರು ಶಾಸಕ ಸುರೇಶ್‌ಗೌಡರ ವಿರುದ್ಧ ತಿರುಗಿಬಿದ್ದಿದ್ದರು. ಪಂಚಾಯ್ತಿ ಮಟ್ಟದಲ್ಲಿ ಪ್ರತ್ಯೇಕವಾಗಿ ಬೆಂಬಲಿಗರ ಸಭೆಗಳನ್ನು ನಡೆಸುತ್ತಾ ಶಾಸಕರ ವಿರುದ್ಧವೇ ಹರಿಹಾಯ್ದಿದ್ದರು. ತಮ್ಮ ಬೆಂಬಲಿಗರನ್ನು ಶಾಸಕರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲವೆಂಬ ಕೋಪ, ಅಸಮಾಧಾನ ಅವರಲ್ಲಿತ್ತು. ಇದೇ ಕಾರಣಕ್ಕೆ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು ಎನ್ನಲಾಗಿದೆ.

ಹಣ ಕೊಡದಿದ್ದಕ್ಕೆ ಅಖಾಡ ಪ್ರವೇಶ:

ಮೂರು ಚುನಾವಣೆಗಳಿಂದ ಕೆ.ಸುರೇಶ್‌ಗೌಡರಿಗೆ ಫೈಟರ್‌ ರವಿ ಹಣ ನೀಡುತಿದ್ದು, 2018ರ ಚುನಾವಣೆ ಸಮಯದಲ್ಲೂ ಹಣಕಾಸಿನ ಕೊರತೆ ಎದುರಾದಾಗ ಎಲ್‌.ಆರ್‌.ಶಿವರಾಮೇಗೌಡ ಮತ್ತು ಎನ್‌.ಅಪ್ಪಾಜಿಗೌಡ ಸೇರಿ ಮನವೊಲಿಸಿ ಸುರೇಶ್‌ಗೌಡರಿಗೆ ಹಣ ಕೊಡಿಸಿದ್ದರು ಎಂದು ಫೈಟರ್‌ ರವಿ ಅವರೇ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ. ಇದರ ನಡುವೆಯೂ ಕೊಟ್ಟಹಣವನ್ನು ಸುರೇಶ್‌ಗೌಡರು ವಾಪಸ್‌ ನೀಡದ ಕಾರಣ ಅವರ ವಿರುದ್ಧ ಇಂದಿಗೂ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಬೆಳವಣಿಗೆ ಫೈಟರ್‌ ರವಿ ರಾಜಕೀಯ ಪ್ರವೇಶಿಸಲು ಕಾರಣವಾಯಿತು. ಪ್ರಸ್ತುತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್‌ಗೌಡರ ವಿರುದ್ಧ ತೊಡೆ ತಟ್ಟಿದ್ದಾರೆ.

ವಿರೋಧಿ ನಡೆ:

2004ರ ಚುನಾವಣೆಯಲ್ಲಿ ಎಲ್‌.ಆರ್‌.ಶಿವರಾಮೇಗೌಡರು ನಾಗಮಂಗಲ ಕ್ಷೇತ್ರಕ್ಕೆ ಸುರೇಶ್‌ಗೌಡರನ್ನು ತಂದು ಪರಿಚಯಿಸಿದರು. ಆದರೆ, ವಿಧಾನ ಪರಿಷತ್‌ ಚುನಾವಣೆಗೆ ಶಿವರಾಮೇಗೌಡರು ಸ್ಪರ್ಧಿಸಿದಾಗ ವಿರುದ್ಧ ಮಾಡಿದರು. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲೂ ಸುರೇಶ್‌ಗೌಡರು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎನ್‌.ಅಪ್ಪಾಜಿಗೌಡರ ವಿರುದ್ಧ ಮಾಡಿದರೆಂಬ ಆರೋಪಕ್ಕೆ ಗುರಿಯಾಗಿ ಎಲ್ಲರೂ ಶಾಸಕ ಕೆ.ಸುರೇಶ್‌ಗೌಡರ ವಿರೋಧಿಗಳಾಗಿ ಬದಲಾಗಲು ಕಾರಣವಾಯಿತು ಎಂಬ ಮಾತುಗಳು ಕ್ಷೇತ್ರದೊಳಗೆ ಕೇಳಿಬರುತ್ತಿವೆ.

ಶತ್ರುವಿನ ಶತ್ರು ಮಿತ್ರ:

ಶತ್ರುವಿನ ಶತ್ರು ಮಿತ್ರ ಎಂಬ ಮಾತಿನಂತೆ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಚಲುವರಾಯಸ್ವಾಮಿ ಅವರು ತಮ್ಮ ರಾಜಕೀಯ ವೈರಿಯಾಗಿರುವ ಶಾಸಕ ಕೆ.ಸುರೇಶ್‌ಗೌಡರ ವಿರುದ್ಧ ಟೀಕಾಸ್ತ್ರವನ್ನೇ ಪ್ರಯೋಗಿಸದೆ ಕ್ಷೇತ್ರದೊಳಗಿನ ಬೆಳವಣಿಗೆಗಳನ್ನು ಸೂಕ್ಷ ್ಮವಾಗಿ ಅವಲೋಕಿಸುತ್ತಾ ತಮ್ಮ ಪಾಡಿಗೆ ತಾವು ಕ್ಷೇತ್ರದೊಳಗೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಳೆದ ಚುನಾವಣಾ ಸಮಯದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಟೀಕಿಸಿ ಉಂಟಾದ ಸೋಲಿನಿಂದ ಪಾಠ ಕಲಿತಿರುವ ಚಲುವರಾಯಸ್ವಾಮಿ ಅವರು ಜನರ ಭಾವನೆ ಅರ್ಥ ಮಾಡಿಕೊಂಡು ಅದನ್ನು ಕೆರಳಿಸಲು ಮುಂದಾಗದೆ ಚಾಣಾಕ್ಷ ನಡೆಯನ್ನು ಪ್ರದರ್ಶಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಶಕ್ತಿಗಳೆಲ್ಲವೂ ಒಗ್ಗಟ್ಟಾಗಿ ಭಾರೀ ಅಂತರದಿಂದ ಸುರೇಶ್‌ಗೌಡರಿಗೆ ಗೆಲುವನ್ನು ತಂದುಕೊಟ್ಟಿದ್ದವು. ಈಗ ಅದೇ ಸುರೇಶ್‌ಗೌಡರ ವಿರುದ್ಧ ಕಾಂಗ್ರೆಸ್‌, ಬಿಜೆಪಿ, ಪಕ್ಷೇತರ ಅಭ್ಯರ್ಥಿ ಸೇರಿದಂತೆ ಸ್ವಪಕ್ಷೀಯರೂ ತಿರುಗಿಬಿದ್ದು, ಸೋಲಿನ ಚಕ್ರವ್ಯೂಹ ರಚಿಸಿದ್ದಾರೆ. ಇದನ್ನು ಸುರೇಶ್‌ಗೌಡರು ಯಾವ ರೀತಿ ಬೇಧಿಸಿ ಗೆದ್ದುಬರುವರೋ ಅಥವಾ ಸೋತು ಶರಣಾಗತರಾಗುವರೋ ಚುನಾವಣೆವರೆಗೆ ಕಾದುನೋಡಬೇಕಿದೆ.

Mandya: ರಾಜ್ಯ, ರಾಷ್ಟ್ರಕ್ಕೆ ಕಾಂಗ್ರೆಸ್‌ ಅನಿವಾರ್ಯ: ಚಲುವರಾಯಸ್ವಾಮಿ

ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಶಾಸಕ ಸುರೇಶ್‌ಗೌಡ?

ನಾಗಮಂಗಲ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಕೆ.ಸುರೇಶ್‌ಗೌಡರಿಗೆ ಈ ಚುನಾವಣೆ ಸಮಯದಲ್ಲಿ ಎದುರಾಗಿರುವ ಪರಿಸ್ಥಿತಿ ಹಿಂದೆಂದೂ ಸೃಷ್ಟಿಯಾಗಿರಲಿಲ್ಲ. ಆಗೆಲ್ಲಾ ಜೆಡಿಎಸ್‌ ಅಥವಾ ಕಾಂಗ್ರೆಸ್‌ನಿಂದ ಎನ್‌.ಚಲುವರಾಯಸ್ವಾಮಿ ಅವರೊಬ್ಬರೇ ಪ್ರಬಲ ಎದುರಾಳಿಯಾಗಿದ್ದರು. ಈಗ ಯಾರನ್ನು ಎದುರಿಸಬೇಕೆಂಬುದೇ ಅವರಿಗೆ ತಿಳಿಯುತ್ತಿಲ್ಲ. ತಮ್ಮ ಆಪ್ತರಾಗಿದ್ದವರೇ ಎದುರಾಳಿಯಾಗಿರುವುದು ಚಿಂತೆಗೀಡುಮಾಡಿದೆ. ಸ್ವಪಕ್ಷದೊಳಗಿರುವವರೂ ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಏಕಾಂಗಿಯಾಗಿರುವಂತೆ ಕಂಡುಬರುತ್ತಿದ್ದಾರೆ. ಇವರ ನೆರವಿಗೆ ದಳಪತಿಗಳು ಬರುವರೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಎನ್‌.ಚಲುವರಾಯಸ್ವಾಮಿ ಅವರನ್ನು ಸೋಲಿಸುವ ತಂತ್ರಗಾರಿಕೆಯನ್ನು ರೂಪಿಸುವುದಕ್ಕೆ ದಳಪತಿಗಳಿಗೆ ಸಮಯಾವಕಾಶದ ಕೊರತೆ ಕಾಡುತ್ತಿರುವಂತಿದೆ. ತಮ್ಮ ಹಾಗೂ ಕುಟುಂಬದ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವ ಅವರು ಸುರೇಶ್‌ಗೌಡರ ನೆರವಿಗೆ ಹೇಗೆ ನಿಲ್ಲುವರೆನ್ನುವುದು ಪ್ರಶ್ನೆಯಾಗಿದೆ.

click me!