ಶಿವಾನಂದ ಗೊಂಬಿ
ಹುಬ್ಬಳ್ಳಿ (ನ.27) : ಬಂಡಾಯ ನೆಲ, ಮಹದಾಯಿ ಹೋರಾಟ ಎಂದರೆ ಥಟ್ಟನೆ ನೆನಪಾಗುವುದು ನವಲಗುಂದ. ಮಹದಾಯಿ ಹೋರಾಟದಲ್ಲಿ ಈಗಲೂ ನಿರಂತರವಾಗಿರುವ ನವಲಗುಂದದಲ್ಲಿ ಇದೀಗ ಚುನಾವಣೆ ರಂಗೇರುತ್ತಿದೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರಿಂದ ಹೇಗಾದರೂ ಮಾಡಿ ಕ್ಷೇತ್ರ ಕಸಿದುಕೊಳ್ಳಬೇಕೆಂಬ ಇರಾದೆ ಹೊಂದಿರುವ ಕಾಂಗ್ರೆಸ್, ಅದಕ್ಕಾಗಿ ಸಾಕಷ್ಟುಕಸರತ್ತು ನಡೆಸುತ್ತಿದೆ. ಅತ್ತ ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬ ಹಂಬಲ ಬಿಜೆಪಿಯದ್ದು. ಆದರೆ ಎರಡೂ ಪಕ್ಷಗಳು ಈಗಿನಿಂದಲೇ ಚುನಾವಣೆ ತಯಾರಿಯಲ್ಲಿ ತೊಡಗಿವೆ.
undefined
ಒಂದು ಕಾಲದಲ್ಲಿ ಈ ಕ್ಷೇತ್ರವೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಸಂಘಟಿತವಾಗಿ ಪ್ರಾಬಲ್ಯ ಹೊಂದಿದವು. ಇತ್ತೀಚಿಗಂತೂ ಬಿಜೆಪಿ ಕ್ಷೇತ್ರವನ್ನು ಹಿಡಿತಕ್ಕೆ ಪಡೆದುಕೊಂಡಿದೆ. ಕಳೆದ ಚುನಾವಣೆ ವರೆಗೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೆ ಕಳೆದ ವರ್ಷದವರೆಗೂ ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಈ ಸಲ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರಾ ನೇರ ಸ್ಪರ್ಧೆ ನಡೆಯುವುದು ಬಹುತೇಕ ಖಚಿತ.
Hubballi: ಮಂಗಳೂರು ಸ್ಪೋಟದ ಬಳಿಕ ಅವಳಿ ನಗರದಲ್ಲಿ ಹೈ ಅಲರ್ಟ್ ಆದ ಖಾಕಿ ಪಡೆ!
ಟಿಕೆಟ್‌ಗಾಗಿ ಪೈಪೋಟಿ:
ಸದ್ಯ ಬಿಜೆಪಿಯ ಶಾಸಕ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 3 ಬಾರಿ ಚುನಾವಣೆ ಎದುರಿಸಿರುವ ಮುನೇನಕೊಪ್ಪ ಎರಡು ಬಾರಿ ಗೆದ್ದಿದ್ದರೆ, ಒಂದು ಬಾರಿ ಪರಾಭವಗೊಂಡಿದ್ದಾರೆ. ಇದೀಗ ಸಚಿವರಾಗಿರುವ ಮುನೇನಕೊಪ್ಪ ಕ್ಷೇತ್ರದಲ್ಲಿನ ಬೆಣ್ಣಿಹಳ್ಳ, ತುಪರಿಹಳ್ಳ ಸೇರಿದಂತೆ ಹಲವಾರು ಉತ್ತಮ ಕೆಲಸಗಳನ್ನು ಮಾಡಿ ಜನಮನ್ನಣೆ ಪಡೆದು ಹಿಡಿತ ಸಾಧಿಸಿದ್ದಾರೆ.
ಇನ್ನು ಇವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ದೊಡ್ಡ ಪಡೆಯೇ ಪೈಪೋಟಿಗಿಳಿದಿದೆ. ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಪರಾಭವಗೊಂಡಿರುವ ವಿನೋದ ಅಸೂಟಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸಂಬಂಧಿ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಬಾಪುಗೌಡ ಪಾಟೀಲ, ಕಳೆದ 30 ವರ್ಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವ ರಾಜಶೇಖರ ಮೆಣಸಿನಕಾಯಿ, ಚಂಬಣ್ಣ ಹಾಳದೋಟರ ಹೀಗೆ ಎಂಟು ಜನರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಆದರೆ ಕೋನರಡ್ಡಿ, ಅಸೂಟಿ ಕೊಂಚ ಮುಂಚೂಣಿಯಲ್ಲಿದ್ದಾರೆ. ಅಸೂಟಿಯಂತೂ ಕೋನರಡ್ಡಿ ಅವರೊಂದಿಗೆ ತೆರಳಿ ಅರ್ಜಿ ಸಲ್ಲಿಸಿರುವುದುಂಟು. ಈ ನಡುವೆ ಈ ಸಲ ತಮಗೆ ಟಿಕೆಟ್ ಎಂದು ಹೇಳಿಕೊಳ್ಳುವ ಎಲ್ಲರೂ ಈಗಲೇ ಪ್ರಚಾರವನ್ನು ಶುರು ಹಚ್ಚಿಕೊಂಡಿದ್ದಾರೆ. ಈ ನಡುವೆ ವಲಸೆ ಹಾಗೂ ಮೂಲ ಕಾಂಗ್ರೆಸ್ ಎಂಬ ಪ್ರಶ್ನೆ ಕೇಳಿ ಬರುತ್ತಿದ್ದು, ಇದು ಕಾಂಗ್ರೆಸ್‌ನಲ್ಲಿ ಭಿನ್ನಮತಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.
ಟಿಕೆಟ್ ಸಿಗದಿದ್ದರೆ ಕೆಲವರು ಬಂಡಾಯ ಏಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗೆ ಬಂಡಾಯ ಅಭ್ಯರ್ಥಿಗಳನ್ನೇ ತನ್ನತ್ತ ಸೆಳೆದು ಟಿಕೆಟ್ ಕೊಡುವ ಹವಣಿಕೆ ಜೆಡಿಎಸ್ ಹೊಂದಿದೆ. ಹೀಗೆ ಮಾಡುವ ಮೂಲಕ ತನ್ನ ಅಸ್ತಿತ್ವ ಇದೆ ಎಂಬುದನ್ನು ತೋರಿಸುವ ಕೆಲಸ ಜೆಡಿಎಸ್ ಮಾಡಲಿದೆ ಎಂಬ ಮಾತು ಕ್ಷೇತ್ರದಿಂದ ಕೇಳಿ ಬರುತ್ತಿದೆ. ಈಗಲೇ ಕೆಲವರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನೂ ಆ ಪಕ್ಷದ ಮುಖಂಡರು ಮಾಡುತ್ತಿರುವುದುಂಟು.
Hubballi: ರೈಲಿನಲ್ಲಿ ಆಂಧ್ರ ವ್ಯಕ್ತಿಯ ಬರ್ಬರ ಹತ್ಯೆ: ಎರಡು ವಾರ ಕಳೆದರೂ ಪತ್ತೆಯಾಗದ ಹಂತಕರ ಸುಳಿವು
ಹಾಗೇನಾದರೂ ಆದರೆ ಮತ್ತೆ ಕ್ಷೇತ್ರ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತವೆ. ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬುದರ ಮೇಲೆ ಕ್ಷೇತ್ರದಲ್ಲಿನ ಅಖಾಡ ನಿರ್ಧಾರವಾಗಲಿದೆ. ಸದ್ಯಕ್ಕಂತೂ ಎಲ್ಲರೂ ತಮಗೆ ಟಿಕೆಟ್ ಎಂದು ಘೋಷಿಸಿಕೊಂಡು ಕ್ಷೇತ್ರದಲ್ಲಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಮುನೇನಕೊಪ್ಪ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲು ಇನ್ನಷ್ಟುದಿನ ಕಾಯುವುದು ಅನಿವಾರ್ಯ.