ಯತ್ನಾಳ ಕರೆಯಿಸಿ ರಾಜಕೀಯ ದಾಳ ಉರುಳಿಸಿದರೆ ದೇಸಾಯಿ?

By Kannadaprabha News  |  First Published Nov 27, 2022, 10:08 AM IST
  •  ಯತ್ನಾಳ ಕರೆಯಿಸಿ ರಾಜಕೀಯ ದಾಳ ಉರುಳಿಸಿದರೆ ದೇಸಾಯಿ!
  • ಪಂಚಮಸಾಲಿ ಹೋರಾಟದಲ್ಲಿ ವಿನಯ ಜತೆಗಿದ್ದ ಯತ್ನಾಳ ದೇಸಾಯಿ ಕಡೆನಾ?
  • ಉಳವಿ ಪಾದಯಾತ್ರೆಗೆ ಶಾಸಕ ದೇಸಾಯಿ ಯತ್ನಾಳ ಕರೆಯಿದ್ದು ಏತಕ್ಕೆ?

ಬಸವರಾಜ ಹಿರೇಮಠ

ಧಾರವಾಡ (ನ.27) : ಪ್ರಸ್ತುತ ರಾಜಕೀಯ ವಲಯದಲ್ಲಿ ವಿಧಾನಸಭೆ ಚುನಾವಣೆಯ ಚರ್ಚೆ ಹಾಗೂ ಅದಕ್ಕಾಗಿ ಭರದ ಸಿದ್ಧತೆ, ಸಮಾವೇಶಗಳು ನಡೆಯುತ್ತಿವೆ. ರಾಜಕಾರಣಿಗಳು ಜನ್ಮದಿನ ಸೇರಿದಂತೆ ಪ್ರತಿಯೊಂದು ಸಂದರ್ಭವನ್ನು ತಮ್ಮ ರಾಜಕೀಯ ಬೆಳವಣಿಗೆಗಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಹಾಲಿ ಶಾಸಕರಂತೂ ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ವಿವಿಧ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ.

Latest Videos

undefined

ಇತ್ತೀಚೆಗೆ ಧಾರವಾಡದಲ್ಲಿ ಅದರಲ್ಲೂ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಗಮನಿಸಿದರೆ ಶಾಸಕ ಅಮೃತ ದೇಸಾಯಿ ತಮ್ಮ ಕ್ಷೇತ್ರದ ರಾಜಕೀಯ ರಂಗದಲ್ಲಿ ಹೊಸ ದಾಳ ಉರುಳಿಸಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇಸ್ಲಾಂ, ಕ್ರೈಸ್ತ ರಾಷ್ಟ್ರವಾಗಿಸಲು ಹಿಂದು ಸಮಾಜ ಬಿಡಲ್ಲ: ಯತ್ನಾಳ್

ಯತ್ನಾಳ ಬಂದಿದ್ದೇಕೆ?:

ಶಾಸಕ ಅಮೃತ ದೇಸಾಯಿ ಪ್ರತಿ ವರ್ಷ ಗರಗ ಮಡಿವಾಳೇಶ್ವರ ದೇವಸ್ಥಾನದಿಂದ ಉಳವಿ ಬಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಹೋಗುತ್ತಾರೆ. ಕಳೆದ ಆರು ವರ್ಷಗಳಿಂದ ಈ ಪಾದಯಾತ್ರೆ ನಡೆಸುತ್ತಿದ್ದು ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ಧಾರ್ಮಿಕ ಭಾಗವಾಗಿಯೇ ಆರಂಭವಾದ ಈ ಪಾದಯಾತ್ರೆ ಈ ವರ್ಷ ಮಾತ್ರ ಸ್ವಾಮೀಜಿಗಳೊಂದಿಗೆ ಬಿಜೆಪಿ ಸ್ಟಾರ್‌ ಪ್ರಚಾರಕ ‘ಬಸನಗೌಡ ಪಾಟೀಲ ಯತ್ನಾಳ’ ಅವರನ್ನು ಕರೆಯಿಸಿದ್ದು ವಿಶೇಷ ಹಾಗೂ ಚರ್ಚೆಯ ವಿಷಯವೂ ಹೌದು.

ವಿನಯ ಜತೆಗಿದ್ದ ಯತ್ನಾಳ:

ಬಸನಗೌಡ ಯತ್ನಾಳ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರಮುಖ ನಾಯಕ. ಅದೇ ಹೋರಾಟದಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ ಕುಲಕರ್ಣಿ ಸಹ ಯತ್ನಾಳ ಅವರ ಜತೆಗಿದ್ದಾರೆ. ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದ ಹಿಂದಿನ ಶಾಸಕ. ಈಗ ಪುನಃ ಇದೇ ಕ್ಷೇತ್ರಕ್ಕೆ ಸ್ಪರ್ಧಿಸುವುದಾಗಿ ತಮ್ಮ ಜನ್ಮದಿನಾಚರಣೆ ಸಮಯದಲ್ಲಿ ಘೋಷಿಸಿಕೊಂಡಿದ್ದಾರೆ. ಆದರೆ, ಹೋರಾಟದ ಭಾಗವಾಗಿ ವಿನಯ ಅವರ ಜತೆಗಿರುವ ಯತ್ನಾಳ ಅವರನ್ನು ಶಾಸಕ ಅಮೃತ ದೇಸಾಯಿ ಕರೆಯಿಸಿದ್ದು, ಪಾದಯಾತ್ರೆ ಉದ್ಘಾಟನೆ ಮಾಡಿದ್ದು ಏತಕ್ಕೆ ಎಂಬುದು ಇದೀಗ ಹುಟ್ಟಿಕೊಂಡಿರುವ ಚರ್ಚೆಯ ವಿಷಯವಾಗಿದೆ.

ಯತ್ನಾಳ ಅವರು ನಮ್ಮ ಕಾಕಾ ಇದ್ದಂತೆ. ಅದಕ್ಕಾಗಿ ಕರೆಯಿಸಿದ್ದೇನೆ ಎನ್ನುವ ಮೂಲಕ ದೇಸಾಯಿ ವಿನಯ ಜತೆ ಬರೀ ಸಮಾಜದ ದೃಷ್ಟಿಯಿಂದ ಇದ್ದಾರೆಯೇ ಹೊರತು ರಾಜಕೀಯವಾಗಿ ಯತ್ನಾಳ ಅವರಿಂದ ವಿನಯಗೆ ಯಾವ ಪ್ರಯೋಜನ ಇಲ್ಲ ಎಂಬುದನ್ನು ಕ್ಷೇತ್ರದ ಜನತೆಗೆ ತೋರಿಸಿದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆರಂಭದಲ್ಲಿ ಯತ್ನಾಳ ಪಂಚಮಸಾಲಿ ಹೋರಾಟದಲ್ಲಿ ಇರಲಿಲ್ಲ. ಆದರೆ ಈಗ ಈ ಹೋರಾಟದ ನೇತೃತ್ವ ವಹಿಸಿರುವವರಲ್ಲಿ ಪ್ರಮುಖರು. ಇವರ ಜತೆಗೆ ಮತ್ತೋರ್ವ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸಹ ಹೋರಾಟದಲ್ಲಿದ್ದಾರೆ. ಶಾಸಕ ಅಮೃತ ದೇಸಾಯಿ, ಯತ್ನಾಳ ಮತ್ತು ಅರವಿಂದ ಬೆಲ್ಲದ ಇಬ್ಬರನ್ನೂ ಗರಗ ಮಠಕ್ಕೆ ಕರೆಯಿಸಿ ತಮ್ಮ ಪಾದಯಾತ್ರೆ ಉದ್ಘಾಟನೆ ನೆಪದಲ್ಲಿ ಸಮಾರಂಭ ಸಹ ಮಾಡಿದ್ದಾರೆ. ಹೀಗಾಗಿ ಪಂಚಮಸಾಲಿ ಸಮಾಜದ ಪ್ರಮುಖರಿಬ್ಬರು ನಮ್ಮ ಜತೆಗಿದ್ದಾರೆ ಎಂಬುದನ್ನು ಸಹ ದೇಸಾಯಿ ಕ್ಷೇತ್ರದ ಜನರಿಗೆ ಪರೋಕ್ಷವಾಗಿ ತಿಳಿಸಿರುವುದು ರಾಜಕೀಯ ದಾಳಗಳಲ್ಲಿ ಒಂದು.

ಯಾಮಾರಿದ್ರೆ ಯಮಲೋಕ; ಧಾರವಾಡ ಗ್ರಾಮೀಣ ರಸ್ತೆಗಳು ಗುಂಡಿಮಯ

ಇನ್ನು, ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧದಲ್ಲಿರುವ ವಿನಯ ಕುಲಕರ್ಣಿ ಇತ್ತೀಚೆಗೆ ಚೆನ್ನಮ್ಮನ ಕಿತ್ತೂರಿನಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಸಹ ನಡೆಸಿದ್ದರು. ಅದಾದ ಬಳಿಕ ಮೈಕೊಡವಿಕೊಂಡು ರಾಜಕೀಯದಾಟಕ್ಕೆ ಇಳಿದಿರುವ ದೇಸಾಯಿ ಯತ್ನಾಳ ಅವರನ್ನು ಮತ್ತೊಮ್ಮೆ ಧಾರವಾಡಕ್ಕೆ ಕರೆಯಿಸುವುದಾಗಿಯೂ ಹೇಳಿದ್ದಾರೆ. ಒಟ್ಟಾರೆಯಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಚುನಾವಣಾ ಕಣ ಚುನಾವಣೆ ಸಮೀಪಿಸುತ್ತಿದ್ದಂತೆ ರಂಗು ಪಡೆದುಕೊಳ್ಳುತ್ತಿದೆ. ಬರುವ ದಿನಗಳಲ್ಲಿ ಅಮೃತ ದೇಸಾಯಿ ಅವರ ಮಿಂಚಿನ ಓಟಕ್ಕೆ ವಿನಯ ಕುಲಕರ್ಣಿ ಮತ್ತಾವ ರಾಜಕೀಯ ದಾಳ ಹುಡುಕುತ್ತಾರೆಯೋ ಕಾದು ನೋಡಬೇಕಿದೆ.

click me!