ಕಾಂಗ್ರೆಸ್‌ ಪಾಳಯದತ್ತ ಬಿಜೆಪಿ ಮುಖಂಡನ ಚಿತ್ತ..!

By Kannadaprabha News  |  First Published Jun 10, 2022, 1:10 PM IST

*  ವಿಜಯನಗರ ಕ್ಷೇತ್ರದಲ್ಲಿ ಮತ್ತೆ ಮದಗಜಗಳ ಕಾಳಗ
*  ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೆ ಗವಿಯಪ್ಪನವರ ಬೆಂಬಲಿಗರ ಒಲವು
*  ಡಿ.ಕೆ. ಶಿವಕುಮಾರ ಗವಿಯಪ್ಪಗೆ ಇದುವರೆಗೆ ಅಧಿಕೃತ ಆಹ್ವಾನ ನೀಡಿಲ್ಲ
 


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜೂ.10):  ವಿಜಯನಗರ ಕ್ಷೇತ್ರದಲ್ಲಿ ಮತ್ತೆ ಮದಗಜಗಳ ಕಾಳಗಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲು ಚಿತ್ತಹರಿಸಿದ್ದಾರೆ.

Tap to resize

Latest Videos

undefined

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಬಿಜೆಪಿಯಿಂದ ಸ್ಪರ್ಧಿಸಿದ್ದ ಗವಿಯಪ್ಪ ಅವರನ್ನು ಸೋಲಿಸಿದ್ದರು. ಆಗ ಗವಿಯಪ್ಪ ಅವರು ಹಸ್ತಪಕ್ಷ ತೊರೆದು ಕಮಲ ಚಿಹ್ನೆಯಡಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದರು. ಬಳಿಕ ಬದಲಾದ ಸನ್ನಿವೇಶದಲ್ಲಿ ಆನಂದ ಸಿಂಗ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾದರು.

ಬಿಎಸ್‌ವೈ ಅಭಯ:

2019ರ ಉಪಚುನಾವಣೆ ವೇಳೆ ಎಚ್‌.ಆರ್‌. ಗವಿಯಪ್ಪ ಅವರಿಗೆ ಆಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ನೀಡುವ ಅಭಯ ನೀಡಿದ್ದರು. ಆದರೆ ಈಗ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಮತ್ತೆ ಆನಂದ ಸಿಂಗ್‌ ಅವರಿಗೆ ಟಿಕೆಟ್‌ ದೊರೆಯುವ ಲಕ್ಷಣ ಗೋಚರಿಸಿದೆ. ಹಾಗಾಗಿ ಗವಿಯಪ್ಪ ಅವರು ತಮ್ಮ ಬೆಂಬಲಿಗರ ಸಭೆ ಕರೆದು ಬಿಜೆಪಿ ತೊರೆಯುವ ಬಗ್ಗೆ ಚರ್ಚಿಸಿದ್ದಾರೆ.

ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ: ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ರಾಘಣ್ಣ

ಕಾಂಗ್ರೆಸ್‌ ಸೇರ್ಪಡೆಗೆ ಸಲಹೆ:

ಎಚ್‌.ಆರ್‌. ಗವಿಯಪ್ಪ ಅವರು ಕರೆದಿದ್ದ ಸಭೆಯಲ್ಲಿ ಅವರ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲು ಸಲಹೆ ನೀಡಿದ್ದಾರೆ. ಇದರಿಂದ ರಾಜಕೀಯ ನೆಲೆಕಂಡುಕೊಳ್ಳಲು ಅನುಕೂಲವಾಗಲಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಾವು ಬಿಜೆಪಿ ಸೇರುವಂತಾಗಿತ್ತು. ಹಾಗಾಗಿ ಮರಳಿ ತವರು ಮನೆಗೆ ಹೋಗುವುದೇ ವಾಸಿ ಎಂದು ಬೆಂಬಲಿಗರು ಸಲಹೆ ನೀಡಿದ್ದಾರೆ.

ಇನ್ನೂ ಕಾಂಗ್ರೆಸ್‌ನ ಹಲವು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಕೂಡ ವಿಜಯನಗರದಲ್ಲಿ ಕೈ ಪಕ್ಷಕ್ಕೆ ಕಾರ್ಯಕರ್ತರ ಪಡೆಯೇ ಇದೆ. ಆದರೆ ಗಟ್ಟಿನಾಯಕತ್ವದ ಕೊರತೆ ಇದೆ. ಹಾಗಾಗಿ ತಾವು ಬಂದರೆ; ಪಕ್ಷಕ್ಕೆ ಕಾಡುತ್ತಿರುವ ಸ್ಥಳೀಯಮಟ್ಟದ ನಾಯಕತ್ವದ ಕೊರತೆಯೂ ನೀಗಲಿದೆ ಎಂದು ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ಕರೆ:

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಗವಿಯಪ್ಪನವರಿಗೆ ಫೋನ್‌ ಕರೆ ಮಾಡಿ, ಕಾಂಗ್ರೆಸ್‌ಗೆ ಮುಕ್ತ ಆಹ್ವಾನ ನೀಡಿದ್ದಾರೆ. ಏತನ್ಮಧ್ಯೆ, ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಗವಿಯಪ್ಪ ಅವರ ಹೊಸಪೇಟೆ ನಿವಾಸಕ್ಕೆ ಆಗಮಿಸಿ; ರಾಜಕೀಯ ವಿದ್ಯಮಾನದ ಬಗ್ಗೆ ಅರ್ಧ ತಾಸು ಚರ್ಚಿಸಿದ್ದಾರೆ. ಅಲ್ಲದೇ, ಕಾಂಗ್ರೆಸ್‌ಗೆ ಬರಲು ಆಹ್ವಾನ ನೀಡಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಗವಿಯಪ್ಪ ಅವರಿಗೆ ಇದುವರೆಗೆ ಅಧಿಕೃತ ಆಹ್ವಾನ ನೀಡಿಲ್ಲ. ಒಂದು ಕಡೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲು ಗವಿಯಪ್ಪ ಬೆಂಬಲಿಗರು ಒತ್ತಡ ಹೇರುತ್ತಿದ್ದರೂ ಡಿ.ಕೆ. ಶಿವಕುಮಾರ ಅವರು ಇದುವರೆಗೆ ಆಹ್ವಾನ ನೀಡದಿರುವುದು ಕುತೂಹಲಕ್ಕೆಡೆ ಮಾಡಿದೆ.

ನನ್ನ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಸಲಹೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಹಾಗಾಗಿ ಇನ್ನೂ ಎರಡ್ಮೂರು ದಿನದಲ್ಲಿ ನನ್ನ ನಿಲುವು ಸ್ಪಷ್ಟಪಡಿಸುವೆ ಅಂತ ಹೊಸಪೇಟೆ ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪ ತಿಳಿಸಿದ್ದಾರೆ. 

click me!