ರಾಜ್ಯಸಭೆ ಟಿಕೆಟ್: ಪ್ರಭಾವಿಗಳಿಗೂ ಮೋದಿ ಅರ್ಧಚಂದ್ರ

By Prashant Natu  |  First Published Jun 10, 2022, 12:01 PM IST

ಈಗಲೂ ಕೇಂದ್ರದಲ್ಲಿ ಮಂತ್ರಿ ಆಗಿರುವ ಮುಕ್ತಾರ್‌ ಅಬ್ಬಾಸ್‌ ನಕ್ವಿ ಕೊನೆಯ ದಿನದವರೆಗೂ ತನಗೆ ಇನ್ನೊಮ್ಮೆ ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂದು ಕಾಯುತ್ತಾ ಕುಳಿತಿದ್ದರಂತೆ. ಆದರೆ 29 ರ ರಾತ್ರಿ ಫೋನ್‌ ಮಾಡಿದ ಜೆ.ಪಿ.ನಡ್ಡಾ, ಇಲ್ಲ ನಿಮಗೆ ಟಿಕೆಟ್‌ ಕೊಡಲು ಆಗಲ್ಲ. ನೀವು ಅಜಂಖಾನ್‌ರ ರಾಮಪುರದಿಂದ ಉಪಚುನಾವಣೆಗೆ ನಿಲ್ಲಿ ಎಂದು ಹೇಳಿದರಂತೆ. 


India Gate Column by Prashant Natu

ಈಗಲೂ ಕೇಂದ್ರದಲ್ಲಿ ಮಂತ್ರಿ ಆಗಿರುವ ಮುಕ್ತಾರ್‌ ಅಬ್ಬಾಸ್‌ ನಕ್ವಿ ಕೊನೆಯ ದಿನದವರೆಗೂ ತನಗೆ ಇನ್ನೊಮ್ಮೆ ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂದು ಕಾಯುತ್ತಾ ಕುಳಿತಿದ್ದರಂತೆ. ಆದರೆ 29ರ ರಾತ್ರಿ ಫೋನ್‌ ಮಾಡಿದ ಜೆ.ಪಿ.ನಡ್ಡಾ, ಇಲ್ಲ ನಿಮಗೆ ಟಿಕೆಟ್‌ ಕೊಡಲು ಆಗಲ್ಲ. ನೀವು ಅಜಂಖಾನ್‌ರ ರಾಮಪುರದಿಂದ ಉಪಚುನಾವಣೆಗೆ ನಿಲ್ಲಿ ಎಂದು ಹೇಳಿದರಂತೆ.

Tap to resize

Latest Videos

ರಾಜ್ಯಸಭೆ ಚುನಾವಣೆ: ಸಿದ್ದು ಲೆಕ್ಕಾಚಾರದಲ್ಲಡಗಿದೆ 2023 ರ ತಂತ್ರ!

2002 ರಲ್ಲಿ ಪ್ರಮೋದ್‌ ಮಹಾಜನ್‌ ಪುಣೆಯಿಂದ ದಿಲ್ಲಿಗೆ ಕರೆದುಕೊಂಡು ಬಂದಿದ್ದ ಪ್ರಕಾಶ ಜಾವಡೇಕರ್‌ಗೂ ಕೂಡ ಟಿಕೆಟ್‌ ಕೊಡದೇ ಇರುವುದರಿಂದ ಅವರು ವಾಪಸ್‌ ಪುಣೆಗೆ ಹೋಗುವ ತಯಾರಿಯಲ್ಲಿದ್ದಾರೆ. ಇನ್ನು ಮೋದಿ ಮತ್ತು ಅಮಿತ್‌ ಶಾ ಇಬ್ಬರಿಗೂ ಬಹಳ ಆತ್ಮೀಯರಾಗಿದ್ದ ಓಂಪ್ರಕಾಶ್‌ ಮಾಥುರ್‌ ಕೂಡ ರಾಜಸ್ಥಾನದಿಂದ ಟಿಕೆಟ್‌ ಸಿಗುತ್ತದೆ ಎಂದು ಕಾಯುತ್ತಿದ್ದರು. ಅವರಿಗೂ ಕೊಡೋಕೆ ಆಗಲ್ಲ ಎಂದು ನಡ್ಡಾ ಫೋನ್‌ ಮಾಡಿ ಹೇಳಿದ್ದಾರೆ. ರಾಜಕಾರಣ, ಅಧಿಕಾರ, ಕುರ್ಚಿ ಇವು ಯಾವುವೂ ಶಾಶ್ವತ ಅಲ್ಲ, ಇಲ್ಲಿ ಸದಾ ಕಭಿ ಖುಷಿ ಕಭಿ ಗಮ್‌.

ಕಾಂಗ್ರೆಸ್‌ನ ಜಿ-23 ನಾಯಕರ ಕತೆ

ರಾಹುಲ್‌ ಗಾಂಧಿ ವಿರುದ್ಧ ತಿರುಗಿ ಬಿದ್ದಿದ್ದ ಜಿ-23ರಲ್ಲಿ ಗುಲಾಂ ನಬಿ ಆಜಾದ್‌ ಮತ್ತು ಆನಂದ್‌ ಶರ್ಮಾರನ್ನು ಕೊನೆಯ ದಿನದವರೆಗೂ ಕಾಯಿಸಿ ರಾಜ್ಯಸಭಾ ಟಿಕೆಟ್‌ ಕೊಡದ ಕಾಂಗ್ರೆಸ್‌ ಹೈಕಮಾಂಡ್‌, ಜಿ-23ರಲ್ಲೇ ಇದ್ದ ಮುಕುಲ್‌ ವಾಸ್ನಿಕ್‌ಗೆ ಮಾತ್ರ ಟಿಕೆಟ್‌ ಕೊಟ್ಟಿದೆ. ಗುಲಾಂ ನಬಿ ಆಜಾದ್‌ಗೆ ರಾಜಸ್ಥಾನದಿಂದ ಟಿಕೆಟ್‌ ಕೊಡುವಂತೆ ಅಶೋಕ್‌ ಗೆಹ್ಲೋಟ್‌ ಕೇಳಿದ್ದರಂತೆ. ಆದರೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಗಷ್ಟೇ ಮನೆಗೆ ಬಂದಿದ್ದ ಗುಲಾಂ ನಬಿ ಅವರನ್ನು ಕರೆಸಿಕೊಂಡು ಸೋನಿಯಾ ನಿಮಗೆ ಟಿಕೆಟ್‌ ನೀಡಲು ಆಗಲ್ಲ, ರಾಹುಲ್‌ ಮತ್ತು ಪ್ರಿಯಾಂಕಾ ಒಪ್ಪುತ್ತಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

ಮೇಲ್ಮನೆ ಟಿಕೆಟ್ ಫೈಟ್: ವಿಜಯೇಂದ್ರ ಟಿಕೆಟ್ ಕೈ ಬಿಟ್ಟಿದ್ದು ಸ್ವತಃ ಮೋದಿ..!

ಜಿ-23 ರಲ್ಲಿದ್ದ ಇನ್ನೊಬ್ಬ ಘಟಾನುಘಟಿ ಆನಂದ್‌ ಶರ್ಮಾಗೆ ಟಿಕೆಟ್‌ ಕೊಡಿ ಎಂದು ಹರ್ಯಾಣದ ಭೂಪಿಂದರ್‌ ಸಿಂಗ್‌ ಹೂಡಾ ಕೇಳಿಕೊಂಡಿದ್ದರು. ಆದರೆ ಅವರಿಗೂ ಟಿಕೆಟ್‌ ಕೊಡಲು ರಾಹುಲ್‌ ಒಪ್ಪಲಿಲ್ಲ. ಹೀಗಾಗಿ ಬೇಸರದಲ್ಲಿರುವ ಆನಂದ್‌ ಶರ್ಮಾ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಸಮಯ ಕೇಳಿದ್ದಾರಂತೆ. ಆದರೆ ಅದೇ ಜಿ-23 ರಲ್ಲಿದ್ದ ಮುಕುಲ್‌ ವಾಸ್ನಿಕ್‌ಗೆ ಟಿಕೆಟ್‌ ದೊರೆತಿದೆ. ಅದಕ್ಕೆ ಮುಖ್ಯ ಕಾರಣ ವಾಸ್ನಿಕ್‌ ಜಿ-23 ಸಭೆಯ ವಿವರಗಳನ್ನು ರಾಹುಲ್‌ ಮತ್ತು ಪ್ರಿಯಾಂಕಾಗೆ ಕೊಡುತ್ತಿದ್ದರಂತೆ. ಇವತ್ತಿನ ಕಾಂಗ್ರೆಸ್‌ನ ರಾಜಕಾರಣ ವಿಚಿತ್ರವಾಗಿದೆ. ಅದು ಹಳೆಯ ಕಾಲದ ಅರಮನೆ ಕಾರಸ್ಥಾನವನ್ನು ಹೋಲುತ್ತದೆ.

ಹಾರ್ದಿಕ್‌ ಕಾಂಗ್ರೆಸ್‌ ತೊರೆದಿದ್ದು ಯಾಕೆ?

2020ರಲ್ಲಿ ಕೊರೋನಾ ಕಾಲದಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಾರ್ದಿಕ್‌ ಪಟೇಲ್‌ ತಂದೆ ತೀರಿಕೊಂಡಿದ್ದರು. ಆಗ ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಬಿಡಿ, ಸ್ಥಳೀಯ ರಾಜ್ಯ ನಾಯಕರೂ ಭೇಟಿ ಕೊಡೋದು ಬೇಡ, ಒಂದು ಫೋನ್‌ ಮಾಡಿ ಕೂಡ ಸಾಂತ್ವನ ಹೇಳಲಿಲ್ಲವಂತೆ. ಆದರೆ ಅದೇ ಸಮಯದಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ, ಅನಂದಿ ಬೆನ್‌ ಪಟೇಲ್‌, ಪುರುಷೋತ್ತಮ್‌ ರೂಪಾಲಾ ಎಲ್ಲರೂ ಫೋನ್‌ ಮಾಡಿ ಸಾಂತ್ವನ ಹೇಳಿದ್ದರಂತೆ. ಆಗಲೇ ಹಾರ್ದಿಕ್‌ಗೆ ಕಾಂಗ್ರೆಸ್‌ ಸಹವಾಸ ಸಾಕು ಅನ್ನಿಸಿತ್ತಂತೆ.

ಇನ್ನು ಕಳೆದ ವರ್ಷ ಹಾರ್ದಿಕ್‌ ಪಾಟಿದಾರ ಆಂದೋಲನದಲ್ಲಿ ತನ್ನ ಜೊತೆಗಿದ್ದವರಿಗೆ ಕಾಂಗ್ರೆಸ್‌ ಪದಾಧಿಕಾರಿ ಮಾಡಿ ಎಂದು ಪಟ್ಟಿಕೊಟ್ಟರೆ, ಒಬ್ಬರಿಗೂ ಕೂಡ ಜಾಗ ಕೊಡಲಿಲ್ಲವಂತೆ. ಹೀಗಾಗಿ ಹಾರ್ದಿಕ್‌ ಕಾಂಗ್ರೆಸ್‌ನ ಸಹವಾಸ ಸಾಕು ಎಂದು ಹೊರಗೆ ಬರುವ ತೀರ್ಮಾನ ತೆಗೆದುಕೊಂಡರಂತೆ. ಇದರಲ್ಲಿ ಎರಡು ವಿಷಯಗಳಿವೆ. ಹಾರ್ದಿಕ್‌ ಪಟೇಲ್‌ಗೆ ಭಾಷಣದ ಕಲೆ, ಸೆಳೆಯುವ ಶಕ್ತಿ, ಸಂಘಟನಾ ಕೌಶಲ್ಯದÜ ಜೊತೆಗೆ ಅತಿಯಾದ ಮಹತ್ವಾಕಾಂಕ್ಷೆ ಇದೆ. ಹೀಗಾಗಿ ತಾಳ್ಮೆ ಇಲ್ಲವೇ ಇಲ್ಲ. ಜೊತೆಗೆ ಮೊದಲೇ ಕಷ್ಟದಲ್ಲಿರುವ ಕಾಂಗ್ರೆಸ್‌ಗೆ ಹೊಸ ಪ್ರತಿಭೆಗಳನ್ನು ಪಳಗಿಸಿ ಉಳಿಸಿ ಬೆಳೆಸುವ ಜಾಣ್ಮೆಯೂ ಇಲ್ಲ, ತಾಳ್ಮೆಯೂ ಇಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!