
ಬೆಂಗಳೂರು : ‘ಸರ್ಕಾರಕ್ಕೀಗ ಎರಡೂವರೆ ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ, ಸಂಪುಟ ಪುನಾರಚನೆಗೆ ಮುಂದಾಗುವೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್‌ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಈ ಬಗ್ಗೆ ಆಕಾಂಕ್ಷಿಗಳಾದ ಎನ್.ಎಚ್. ಕೋನರಡ್ಡಿ, ಪೊನ್ನಣ್ಣ, ಕೆ.ಎನ್. ರಾಜಣ್ಣ ಸೇರಿ ಅನೇಕರು ತರಹೇವಾರಿ ಹೇಳಿಕೆ ನೀಡಿದ್ದಾರೆ ಹಾಗೂ ಹಲವು ಶಾಸಕರು ಸಚಿವರಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ‘ಸಂಪುಟ ಪುನಾರಚನೆ ಮಾಡುವಂತೆ ನಾಲ್ಕೈದು ತಿಂಗಳ ಹಿಂದೆಯೇ ಹೈಕಮಾಂಡ್ ನನಗೆ ಸೂಚನೆ ಕೊಟ್ಟಿತ್ತು. ಸರ್ಕಾರಕ್ಕೆ ಎರಡೂವರೆ ವರ್ಷವಾಗಲಿ ಎಂದು ಹೇಳಿದ್ದೆ. ಸರ್ಕಾರಕ್ಕೀಗ ಎರಡೂವರೆ ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಅನುಮತಿ ನೀಡಿದರೆ ಸಂಪುಟ ಪುನಾರಚನೆ ಮಾಡುವೆ’ ಎಂದಿದ್ದರು. ಇದರ ಬೆನ್ನಲ್ಲೇ ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್‌ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ವಿರಾಜಪೇಟೆಯಲ್ಲಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ‘ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದ್ದು, ಕೊಡಗಿಗೆ ಪ್ರಾಶಸ್ತ್ರ್ಯ ನೀಡುವ ವಿಶ್ವಾಸವಿದೆ’ ಎನ್ನುವ ಮೂಲಕ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ‘ನವೆಂಬರ್‌ನಲ್ಲಿ ಸಂಪುಟ ಪುನಾರಚನೆಯಾಗಲಿದ್ದು, 20 ಸಚಿವರನ್ನು ಬದಲಾವಣೆ ಮಾಡುತ್ತಾರೆ. ಹಿರಿಯರನ್ನು ಬಿಟ್ಟು ಕಿರಿಯ, ಅನುಭವಿ ಶಾಸಕರಿಗೆ ಸಚಿವ ಸ್ಥಾನ ಕೊಡುತ್ತಾರೆ’ ಎಂದರು.
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ‘ಸಂಪುಟ ಬದಲಾದರೆ ಹಳಬರು ಹೋಗಿ, ಹೊಸಬರು ಬರುತ್ತಾರೆ. ಆದರೆ, ಹಿರಿಯ ಸಚಿವರು ತಮ್ಮ ಸ್ಥಾನ ಬಿಟ್ಟು ಕೊಡಬೇಕು ಎಂಬ ವಿಷಯವಾಗಿ ನಮ್ಮ ಹಂತದಲ್ಲಿ ಯಾವುದೇ ಮಾತುಕತೆ ಆಗಿಲ್ಲ. ಬೆಳಗಾವಿಯಿಂದ 4-5 ಬಾರಿ ಶಾಸಕರಾದ ಹಿರಿಯರು ಬಹಳಷ್ಟು ಜನರಿದ್ದಾರೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದು ಪಕ್ಷಕ್ಕೆ ಬಿಟ್ಟಿದ್ದು’ ಎಂದು ತಿಳಿಸಿದರು.
ಈ ನಡುವೆ, ಇತ್ತೀಚೆಗೆ ಸಂಪುಟದಿಂದ ಕೈಬಿಡಲಾದ ಬಳಿಕ ಮತ್ತೆ ಸಚಿವರಾಗಲು ಯತ್ನಿಸುತ್ತಿರುವ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರು ತುಮಕೂರಲ್ಲಿ ಮಾತನಾಡಿ ಸಂಪುಟ ಬದಲಾವಣೆಯನ್ನು ಸಿಎಂ ಬದಲಾವಣೆ ಊಹಾಪೋಹದ ಜತೆ ಸಮೀಕರಿಸಿ ವಿಭಿನ್ನ ಹೇಳಿಕೆ ನೀಡಿದ್ದಾರೆ. ‘ಸಂಪುಟ ಪುನಾರಚನೆ ಅಧಿಕಾರ ಯಾರಿಗೆ ಸಿಗುತ್ತೋ ಅವರೇ ಮುಂದಿನ ಅವಧಿಗೂ ಸಿಎಂ ಆಗಲಿದ್ದಾರೆ’ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಂಪುಟ ಬದಲಾದರೆ ಹಳಬರು ಹೋಗಿ, ಹೊಸಬರು ಬಂದೇ ಬರುತ್ತಾರೆ. ಈ ಮುಂಚೆಯೇ 30 ತಿಂಗಳ ಬಳಿಕ ಸಂಪುಟ ಪುನರ್ ರಚನೆ ಮಾಡಬೇಕು ಎಂದು ಚರ್ಚೆ ನಡೆಯುತ್ತಿತ್ತು. ಈಗ ಅದು ಬಹುಶಃ ಅಂತಿಮ ಹಂತಕ್ಕೆ ಬಂದಿರಬಹುದು. ಹಿರಿಯ ಸಚಿವರು ತಮ್ಮ ಸ್ಥಾನ ಬಿಟ್ಟು ಕೊಡುವ ಬಗ್ಗೆ ನಮ್ಮ ಹಂತದಲ್ಲಿ ಯಾವುದೇ ಮಾತುಕತೆ ಆಗಿಲ್ಲ.
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ನವೆಂಬರ್‌ನಲ್ಲಿ ಸಚಿವರು ಬದಲಾಗ್ತಾರೆ, ಸಿಎಂ ಬದಲಾವಣೆ ಆಗಲ್ಲ. ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ. ನನಗೆ ವೈಯಕ್ತಿಕವಾಗಿ ಸಚಿವ ಸ್ಥಾನ ಕೊಡಬೇಕು ಎಂದು ಕೇಳಲ್ಲ. ಆದರೆ, ಬಹಳ ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಹೀಗಾಗಿ ಕೊಡಗಿಗೆ ಪ್ರಾಶಸ್ತ್ಯ ಕೊಡಬೇಕು.
- ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
20 ಸಚಿವರ ಬದಲಾವಣೆ
ನವೆಂಬರ್‌ನಲ್ಲಿ ಪುನಾರಚನೆಯಾಗಲಿದ್ದು, ಚರ್ಚೆ ನಡೆದಿದೆ. 20 ಸಚಿವರನ್ನು ಬದಲಿಸುತ್ತಾರೆ. ಯಾರು ಸರಿಯಾಗಿ ಕೆಲಸ ಮಾಡಿಲ್ಲ ಎನ್ನುವುದು ಸಿಎಂಗೆ ಗೊತ್ತಿದೆ. ಹಿರಿಯರನ್ನು ಬಿಟ್ಟು ಕಿರಿಯ, ಅನುಭವಿ ಶಾಸಕರಿಗೆ ಸಚಿವ ಸ್ಥಾನ ಕೊಡುತ್ತಾರೆ. ನಾನೂ ಹಿರಿಯ, ಅನುಭವಿಯಾಗಿದ್ದು, ಸಚಿವ ಸ್ಥಾನ ಕೊಟ್ಟರೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುವೆ.
- ಎನ್.ಎಚ್.ಕೋನರೆಡ್ಡಿ, ನವಲಗುಂದ ಶಾಸಕ
ಪುನಾರಚನೆ ಮೇಲೆ ಸಿಎಂ ಭವಿಷ್ಯ
ಸಂಪುಟ ಪುನಾರಚನೆ ಅಧಿಕಾರ ಯಾರಿಗೆ ಸಿಗುತ್ತೋ ಅವರೇ ಸಿಎಂ ಆಗಲಿದ್ದಾರೆ. ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಸಂಪುಟ ಪುನಾರಚನೆ ಅಧಿಕಾರ ಕೊಟ್ಟರೆ 5 ವರ್ಷವೂ ಅವರೇ ಸಿಎಂ. ಇಲ್ಲದಿದ್ದರೆ ರಾಜಕೀಯ ಸ್ಥಿತ್ಯಂತರ ನಡೆಯೋದು ಗ್ಯಾರಂಟಿ. ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಎಲ್ಲಾ ಬೆಳವಣಿಗೆ ನಡೆಯಲಿದೆ.
- ಕೆ.ಎನ್.ರಾಜಣ್ಣ, ಮಾಜಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.