ರಾಜಣ್ಣ ಹೇಳಿರೋದು ನನಗೆ ಗೊತ್ತಿಲ್ಲ, ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ: ಸಚಿವ ಗುಂಡೂರಾವ್

Published : Oct 26, 2025, 07:00 PM IST
Dinesh Gundu Rao

ಸಾರಾಂಶ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ, ಬೆಂಗಳೂರಿನ ಗಾಂಧಿನಗರದಲ್ಲಿ ಕಾಂಗ್ರೆಸ್ 'ವೋಟ್ ಚೋರಿ' ವಿರುದ್ಧ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಿತು. ಈ ಅಭಿಯಾನದ ಮೂಲಕ ಮತದಾರರ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ. 

ಬೆಂಗಳೂರು: ಮತದಾರರ ಹಕ್ಕು ಸಂರಕ್ಷಣೆಯ ಉದ್ದೇಶದಿಂದ ಗಾಂಧಿನಗರ ವಿಧಾನಸಭಾ ವ್ಯಾಪ್ತಿಯ ಶ್ರೀರಾಮಪುರ ಪ್ರದೇಶದಲ್ಲಿ ಕಾಂಗ್ರೆಸ್ ವತಿಯಿಂದ ಭಾನುವಾರ ಸಹಿ ಸಂಗ್ರಹ ಅಭಿಯಾನ ಜೋರಾಗಿ ನಡೆಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಸೇರಿದಂತೆ ಗಾಂಧಿನಗರ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದರು. ಕಾರ್ಯಕ್ರಮದ ವೇಳೆ ಸುಮಾರು 300ಕ್ಕೂ ಹೆಚ್ಚು ಕಾರ್ಯಕರ್ತರು ವೋಟ್ ಚೋರಿ ನಿಲ್ಲಿಸಿ , ಮತದಾರರ ಹಕ್ಕು ಉಳಿಸಿ ಎಂಬ ಘೋಷಣೆಗಳನ್ನು ಕೂಗಿ ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಮತದಾನ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಮತಗಳ್ಳತನ ಮತ್ತು ಚುನಾವಣಾ ಪ್ರಕ್ರಿಯೆಯ ದುರ್ಬಳಕೆಯ ವಿರುದ್ಧ ದಿಕ್ಕಾರ ಕೂಗಿದರು.

ಮತಗಳ್ಳತನದ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಇದೀಗ ದೇಶಾದ್ಯಂತ ಮತಗಳ್ಳತನ ನಡೆಯುತ್ತಿರುವ ಕುರಿತು ನಮ್ಮ ನಾಯಕ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಕರ್ನಾಟಕದಲ್ಲಿಯೂ, ವಿಶೇಷವಾಗಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ಹಲವು ಅಂಶಗಳು ಬಹಿರಂಗವಾಗಿವೆ. ಬಿಜೆಪಿ ಸಂಘಟಿತ ಮತಗಳ್ಳತನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯ. ಈ ದುಷ್ಪ್ರವೃತ್ತಿ ತಕ್ಷಣ ನಿಲ್ಲಬೇಕು ಎಂದರು.

ಪಕ್ಷದ ಆಂತರಿಕ ವಿಚಾರದ ಪ್ರಶ್ನೆಗೆ ಸ್ಪಷ್ಟನೆ

ಮಾಜಿ ಸಚಿವ ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್ ಅವರು, ರಾಜಣ್ಣ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ. ಹೈಕಮಾಂಡ್ ನೀಡಿದ ಸೂಚನೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ನಾನು ಪಕ್ಷದ ಕೆಲಸಕ್ಕೆ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.

ದೆಹಲಿ ಪ್ರವಾಸದ ಕುರಿತಂತೆ

ಡೆಪ್ಯುಟಿ ಸಿಎಂ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸದ ಕುರಿತ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿರುವುದಕ್ಕೆ ಯಾವುದೇ ವಿಶೇಷ ಅರ್ಥ ನೀಡಬೇಕಾಗಿಲ್ಲ. ರಾಜಕೀಯ ನಾಯಕರಾಗಿ ಅವರು ಸದಾ ಕಾರ್ಯನಿಮಿತ್ತ ಪ್ರಯಾಣಿಸುತ್ತಿರುತ್ತಾರೆ ಎಂದು ಹೇಳಿದರು.

ಮತಗಳ ಪಟ್ಟಿಯ ಅವ್ಯವಸ್ಥೆ ಕುರಿತು ಕಳವಳ

ದಿನೇಶ್ ಗುಂಡೂರಾವ್ ತಮ್ಮ ಭಾಷಣದಲ್ಲಿ ಮತಪಟ್ಟಿ ತಿದ್ದುಪಡಿ ಪ್ರಕ್ರಿಯೆ ಕುರಿತಂತೆ ಗಂಭೀರ ಆರೋಪ ಹೊರಿಸಿದರು. ಚಿಕ್‌ಪೇಟೆಯಲ್ಲಿ ಚಿಕ್ಕ ಚಿಕ್ಕ ರೂಮ್‌ಗಳಲ್ಲಿ ನೂರಾರು ವೋಟ್‌ಗಳು ದಾಖಲಾಗಿವೆ. ನಾವು ಅಕ್ರಮ ಮತಗಳನ್ನು ತೆಗೆದುಹಾಕುವಂತೆ ಹೇಳಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಮಾಧ್ಯಮಗಳು ಇದರ ಬಗ್ಗೆ ಮೌನವಾಗಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮೋದಿಯವರ ತಪ್ಪುಗಳನ್ನು ಯಾರೂ ತೋರಿಸಲು ಹೆದರುತ್ತಾರೆ. ಯಾರಾದರೂ ವಿರೋಧ ಮಾತನಾಡಿದರೆ ಅವರ ಮೇಲೆ ಐಟಿ–ಇಡಿ ದಾಳಿ ನಡೆಯುತ್ತದೆ ಎಂದರು.

ಚುನಾವಣಾ ಆಯೋಗದ ವಿಶ್ವಾಸ ಕುಸಿತ

ಚೀಫ್ ಎಲೆಕ್ಷನ್ ಕಮೀಷನರ್ ಆಯ್ಕೆ ಮಾಡುವ ಸಮಿತಿಯಿಂದ ಚೀಫ್ ಜಸ್ಟಿಸ್‌ರನ್ನು ತೆಗೆದುಹಾಕಿದ್ದಾರೆ . ಇದು ಮೋದಿ ಮಾಡಿದ ತಪ್ಪು ಕ್ರಮ. ಚುನಾವಣೆ ಪ್ರಕ್ರಿಯೆ ನ್ಯಾಯಯುತವಾಗಿರಬೇಕು ಎಂಬುದು ನಮ್ಮ ಬೇಡಿಕೆ. ಜನರ ಮತ ಹಕ್ಕನ್ನು ಕದ್ದುಕೊಳ್ಳುವ ವ್ಯವಸ್ಥೆ ನಾವು ಒಪ್ಪುವುದಿಲ್ಲ ಎಂದು ಕಿಡಿಕಾರಿದರು.

ಒಂದು ಕೋಟಿ ಸಹಿಗಳ ಗುರಿ

ಕಾಂಗ್ರೆಸ್ ಈ ಅಭಿಯಾನವನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ಸಿದ್ಧತೆ ನಡೆಸಿದ್ದು, ರಾಜ್ಯಾದ್ಯಂತ ಕನಿಷ್ಠ ಒಂದು ಕೋಟಿ ಸಹಿಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದೇವೆ. ನಮ್ಮ ಗಾಂಧಿನಗರ ಕ್ಷೇತ್ರದಲ್ಲೇ ಒಂದು ಲಕ್ಷ ಸಹಿ ಸಂಗ್ರಹ ಮಾಡಬೇಕು. ಈ ಸಿಗ್ನೇಚರ್ ಕ್ಯಾಂಪೇನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಬಯಸುತ್ತಿದ್ದೇವೆ. ಇದು ಕಾಂಗ್ರೆಸ್ ಪರ ಕ್ಯಾಂಪೇನ್ ಅಲ್ಲ — ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮಾಡುತ್ತಿರುವ ಜನಜಾಗೃತಿ ಚಳುವಳಿ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಈ ರೀತಿಯಾಗಿ ನಡೆದ ವೋಟ್ ಚೋರಿ ನಿಲ್ಲಿಸಿ. ಮತದಾರರ ಹಕ್ಕು ಉಳಿಸಿ ಸಹಿ ಸಂಗ್ರಹ ಅಭಿಯಾನವು ಸ್ಥಳೀಯ ನಾಗರಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಪಕ್ಷದ ನಾಯಕತ್ವದ ಪ್ರಕಾರ ಮುಂದಿನ ದಿನಗಳಲ್ಲಿ ಇದೇ ರೀತಿಯ ಅಭಿಯಾನಗಳನ್ನು ರಾಜ್ಯದ ಇತರೆ ಭಾಗಗಳಲ್ಲಿಯೂ ಹಮ್ಮಿಕೊಳ್ಳಲಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು