ನೀರು ಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದಾಕ್ಷಣ ರಾಜ್ಯ ಸರ್ಕಾರ ಬೆದರಿ ಕಾವೇರಿ ನೀರನ್ನು ನೆರೆರಾಜ್ಯಕ್ಕೆ ಹರಿಸಿದ್ದೇಕೆ. ನ್ಯಾಯಾಲಯಕ್ಕೆ ತನ್ನ ಆಕ್ಷೇಪವನ್ನು ಏಕೆ ಸಲ್ಲಿಕೆ ಮಾಡಲಿಲ್ಲ.
ರಾಮನಗರ (ಆ.21): ನೀರು ಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದಾಕ್ಷಣ ರಾಜ್ಯ ಸರ್ಕಾರ ಬೆದರಿ ಕಾವೇರಿ ನೀರನ್ನು ನೆರೆರಾಜ್ಯಕ್ಕೆ ಹರಿಸಿದ್ದೇಕೆ. ನ್ಯಾಯಾಲಯಕ್ಕೆ ತನ್ನ ಆಕ್ಷೇಪವನ್ನು ಏಕೆ ಸಲ್ಲಿಕೆ ಮಾಡಲಿಲ್ಲ. ನಮ್ಮ ರಾಜ್ಯದಲ್ಲಿರುವ ಜಲ ಸಂಕಷ್ಟದ ಬಗ್ಗೆ ಏಕೆ ಮನವರಿಕೆ ಮಾಡಿಕೊಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ಬಿಟ್ಟವಿಷಯ ಗೊತ್ತಾದ ಕೂಡಲೇ ವಿರೋಧ ಮಾಡಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದೆ. ಈಗ ಸರ್ವಪಕ್ಷ ಸಭೆ ಕರೆಯುತ್ತೇವೆ. ಸುಪ್ರೀಂ ಕೋರ್ಚ್‌ಗೆ ಅರ್ಜಿ ಹಾಕುತ್ತೇವೆ ಎಂದು ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಅದನ್ನೇ ನೀರು ಬಿಡುವುದಕ್ಕೆ ಮೊದಲೇ ಮಾಡಬಹುದಿತ್ತಲ್ಲವೆ ಎಂದು ಪ್ರಶ್ನಿಸಿದ ಅವರು, ನಮ್ಮ ನೀರು ನಮ್ಮ ಹಕ್ಕು ಎಂದು ಜಾಗಟೆ ಹೊಡೆದುಕೊಂಡು ಊರೂರು ತಿರುಗಾಡಿದರು. ರಾಮನಗರದಲ್ಲಿ ಗೋಡೆಗಳ ಮೇಲೆ ಸ್ಲೋಗನ್ ಬರೆದುಕೊಂಡಿದ್ದರು. ನೀರಿನ ಹಕ್ಕು ಸಾಧಿಸಿಕೊಳ್ಳುವುದು ಎಂದು ರಾಜ್ಯದ ಹಿತ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಡುವುದಾ ಎಂದು ಕಿಡಿಕಾರಿದರು.
ನಾನು ಬಾಂಬೆ ಬಾಯ್ಸ್ ಟೀಮ್ ಅಲ್ಲ, ಬಿಎಸ್‌ವೈ ಟೀಮ್: ಸಂಸದ ಉಮೇಶ್ ಜಾಧವ್
ಇವರಿಂದ ರಾಜ್ಯದ ನೀರಿನ ಹಕ್ಕಿನ ರಕ್ಷಣೆ ಸಾಧ್ಯವಿಲ್ಲ. ಇವತ್ತೆಲ್ಲೊ ಕಲರ್ ಫೋಟೋಗಳನ್ನು ನೋಡಿದೆ. ಹಾಲಿ ಶಾಸಕರು, ಮಾಜಿ ಶಾಸಕರು ಸೇರಿ ತೊರೆಕಾಡನಹಳ್ಳಿಗೆ ಹೋಗಿ ಕಲರ್ ಕಲರ್ ಫೋಟೋಗಳನ್ನು ತೆಗೆಸಿಕೊಂಡು ಹಾಕಿಸಿಕೊಂಡಿದ್ದಾರೆ. ನೆಟ್ಕಲ ಯೋಜನೆ ಮೂಲಕ ರಾಮನಗರಕ್ಕೆ ನೀರು ಕೊಡುವುದು ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಂತೆ. 50 ಕೋಟಿ, 60 ಕೋಟಿ ಇದ್ದ ತಮ್ಮ ಆಸ್ತಿಯನ್ನು 1,400 ಕೋಟಿ ಮಾಡಿಕೊಳ್ಳೋಕೆ ಅವರು ಕನಸು ಕಂಡಿದ್ದರು. ಅವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕನಸು ಕಾಣ್ತಾರಾ? ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ನಾನು ಎರಡನೇ ಅವಧಿಗೆ ಸಿಎಂ ಆಗಿದ್ದಾಗ ನೀರಿನ ಬವಣೆ ಎದುರಿಸುತ್ತಿದ್ದ ರಾಮನಗರಕ್ಕೆ ನೀರು ಕೊಡಲು 405 ಕೋಟಿ ರು. ಕೊಟ್ಟಿದ್ದು, ರಾಮನಗರಕ್ಕೆ ಚನ್ನಪಟ್ಟಣಕ್ಕೆ ಪ್ರತ್ಯೇಕವಾಗಿ ನೀರು ಪೂರೈಕೆ ಮಾಡಲು. ಶಿವಕುಮಾರ್ ಈ ಪ್ರಸ್ತಾವನೆ ತಂದಿದ್ದರಾ? ಇಲ್ಲವೇ ಅವರ ತಮ್ಮ ಡಿ.ಕೆ.ಸುರೇಶ್ ತಂದಿದ್ದರಾ? ಇವರು ರೈತರ ಭೂಮಿ ಲೂಟಿ ಹೊಡೆಯುತ್ತಿದ್ದಾರೆ. ಎಲ್ಲಾ ದಾಖಲೆಗಳನ್ನು ಸದ್ಯದಲ್ಲೇ ಜನರ ಮುಂದೆ ಇಡುತ್ತೇನೆ. ಇದುವರೆಗೂ ರಾಮನಗರ ಅಭಿವೃದ್ಧಿಯೇ ಆಗಿಲ್ಲವಂತೆ. ರಾಮನಗರಕ್ಕೆ ನೀರು ಕೊಡುವುದು ಇವರ 6ನೇ ಗ್ಯಾರಂಟಿ ಅಂತೆ. ಇಲ್ಲಿನ ಶಾಸಕರಿಗೆ ಹೇಳಲು ಬಯಸುತ್ತೇನೆ, 6ನೇ ಗ್ಯಾರಂಟಿ ಕಥೆ ಇರಲಿ, ರಾತ್ರೋರಾತ್ರಿ ಜನರಿಗೆ 3ರಿಂದ 4 ಸಾವಿರ ರು. ಗಿಫ್ಟ್ ಕೂಪನ್ ಹಂಚಿದ್ದರಲ್ಲಾ, ಮೊದಲು ಅದರ ಕಥೆ ನೋಡಿ, ಆ ಗ್ಯಾರಂಟಿಯನ್ನು ಈಡೇರಿಸಿ, ಡಿಸಿಎಂ ತಮ್ಮ ಹೇಳಿದ್ದರಲ್ಲ, ಕುಮಾರಸ್ವಾಮಿ ನೈಸ್ ವ್ಯವಹಾರ ಮಾಡಿದ್ದರು ಅಂತ. ಯಾವನು ನೈಸ್ ವ್ಯವಹಾರ ಮಾಡಿದವನು, ನಾನು ಮಾಡಿದ್ನಾ ಎಂದು ಪ್ರಶ್ನಿಸಿದರು.
ದೇವೇಗೌಡರ ಕುಟುಂಬ ಬರುವುದಕ್ಕೆ ಮುನ್ನ ಈ ತಾಲೂಕು ಹೇಗಿತ್ತು, ಜಿಲ್ಲೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಿ. ಇವತ್ತು ರಾಮನಗರ ಜಿಲ್ಲೆ ಆಮೂಲಾಗ್ರವಾಗಿ ಅಭಿವೃದ್ಧಿ ಹೊಂದಿದೆ. ಈಚೆಗೆ ಬಂದ ಒಂದು ವರದಿ ಪ್ರಕಾರ ತಲಾದಾಯದಲ್ಲಿ ಇಡೀ ರಾಜ್ಯದಲ್ಲಿಯೇ ರಾಮನಗರ ಮೊದಲ ಸ್ಥಾನದಲ್ಲಿದೆ. ಇದು ಈ ಜಿಲ್ಲೆಗೆ ದೇವೇಗೌಡರ ಕುಟುಂಬ ನೀಡಿರುವ ಕೊಡುಗೆ. ನಾನು ಮಾಡಿರುವ ಕೆಲಸಗಳಿಗೆ ಇವರು ಸುಣ್ಣಬಣ್ಣ ಹೊಡೆಸಿಕೊಂಡಿದ್ದರೆ ಸಾಕು. ಡಿಸೆಂಬರ್‌ಗೆಲ್ಲ ರಾಮನಗರಕ್ಕೆ 65 ಎಂಎಲಡಿ ನೀರು ಹರಿಸ್ತಾರಂತೆ. ಎಲ್ಲಾ ಕಡೆ ಶೇ.80 ಕೆಲಸ ಮುಗಿದಿದೆಯಂತೆ. ಹಿಂದಿನ ಶಾಸಕಿ ಅನಿತಾ ಕುಮಾರಸ್ವಾಮಿ ತಂದಿರುವ ಯೋಜನೆಗಳ ಹೆಸರು ಹೇಳಿಕೊಂಡು ಇವರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಮೂರು ತಿಂಗಳಲ್ಲಿ ಇವರು ಶೇ.80 ಕೆಲಸ ಮಾಡಿದ್ದಾರಾ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಪಂಚಮಸಾಲಿ ಮೀಸಲಾತಿಗೆ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ರಾಮನಗರವನ್ನು ಯಾರಿಂದಲೂ ಕಬ್ಜ ಮಾಡಲು ಆಗಲ್ಲ. ಇದು ಕಾರ್ಯಕರ್ತರು ಕಟ್ಟಿಬೆಳೆಸಿದ ಪಕ್ಷ. ಜಿಲ್ಲೆಗೆ ನಮ್ಮ ಕೊಡುಗೆ ಏನು ಅಂತ ಎಲ್ಲರಿಗೂ ಗೊತ್ತಿದೆ. ಜನ ಒಂದು ತೀರ್ಪು ಕೊಟ್ಟಿದ್ದಾರೆ. ಅದಕ್ಕೆ ನಾವು ತಲೆ ಬಾಗಿದ್ದೇವೆ. ರಾಮನಗರ ಕಬ್ಜ ಮಾಡೋದು ಸುಲಭ ಅಲ್ಲ. ರಾಮನಗರ ಯಾರಪ್ಪನ ಆಸ್ತಿ ಅಲ್ಲ.
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ