ಎಚ್‌ಡಿಕೆ ಹೇಳಿಕೆಗೆ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದು, ಮಗನ ಸಾವನ್ನು ಎಳೆದು ತಂದಿರುವ ಕುಮಾರಸ್ವಾಮಿ ಅವರದ್ದು ಮೂರ್ಖತನ ಎಂದು ಹೇಳಿದ್ದಾರೆ.
ಬೆಂಗಳೂರು (ಮೇ.25): ಎಂಟು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಪುತ್ರ ವಿದೇಶದಲ್ಲಿ ಸಾವನ್ನಪ್ಪಿದ ಪ್ರಕರಣದ ಕುರಿತು ಸಿಎಂ ಈವರೆಗೂ ಏಕೆ ತನಿಖೆಗೆ ಆದೇಶಿಸಿಲ್ಲ ಎಂದು ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಶನಿವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹೇಳಿಕೆಗೆ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದು, ಮಗನ ಸಾವನ್ನು ಎಳೆದು ತಂದಿರುವ ಕುಮಾರಸ್ವಾಮಿ ಅವರದ್ದು ಮೂರ್ಖತನದ ವರ್ತನೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ 2016ರ ಜುಲೈ 30ರಂದು ಬೆಲ್ಜಿಯಂನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ರಾಕೇಶ್ ಸಿದ್ದರಾಮಯ್ಯ ಮೃತಪಟ್ಟಿದ್ದರು. ಪ್ರಜ್ವಲ್ ರೇವಣ್ಣ ಅವರ ತಾತ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೇರಿದಂತೆ ಇಡೀ ಕುಟುಂಬದವರಿಗೆ ತಿಳಿದೇ ದೇಶ ಬಿಟ್ಟು ಓಡಿ ಹೋಗಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದ್ದ ಮಾತಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಈ ವಿಚಾರವನ್ನು ಜೀವಂತವಾಗಿರಿಸುವುದು ಬಿಟ್ಟು ಬೇರೆ ಯಾವುದೇ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸತ್ಯವನ್ನು ಬೆಳಕಿಗೆ ತರುವ ಕೆಲಸ ಆಗಬೇಕಿದೆ ಎಂದು ಹೇಳಿದ್ದಾರೆ.
"ಮುಖ್ಯಮಂತ್ರಿ ಅವರ ಪುತ್ರ ಕೂಡ ವಿದೇಶಕ್ಕೆ ಹೋಗಿ ಅಪಘಾತಕ್ಕೆ ಈಡಾಗಿ ಸಾವು ಕಂಡಿದ್ದ. ಆತ ಯಾವ ಕಾರ್ಯಕ್ರಮಕ್ಕೆ ಹೋಗಿದ್ದ? ಸಿದ್ದರಾಮಯ್ಯನವರ ಅನುಮತಿ ತೆಗೆದುಕೊಂಡಿದ್ದಾರಾ?" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. "ರಾಕೇಶ್ ಸಾವಿನ ತನಿಖೆಗೆ ಸಿದ್ದರಾಮಯ್ಯ ಏಕೆ ಆದೇಶ ನೀಡಲಿಲ್ಲ? ಅದನ್ನು ಮುಚ್ಚಿಟ್ಟಿದ್ದು ಏಕೆ? ಸಿಎಂ ಅವರೇ ರಾಕೇಶ್‌ನನ್ನು ವಿದೇಶಕ್ಕೆ ಕಳುಹಿಸಿದ್ದಾರಾ?" ಎಂದು ಕೇಳಿದ್ದಾರೆ. ಅದಲ್ಲದೆ 2016ರ ವಿದೇಶ ಪ್ರವಾಸದ ವೇಳೆ ರಾಕೇಶ್ ಜೊತೆಗಿದ್ದವರ ಸಂಖ್ಯೆ ಎಷ್ಟು ಎಂಬ ವಿವರವನ್ನು ಬಹಿರಂಗಪಡಿಸುವಂತೆಯೂ ಕುಮಾರಸ್ವಾಮಿ ಮುಖ್ಯಮಂತ್ರಿಗೆ ಸೂಚಿಸಿದ್ದಾರೆ.
ತಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ (33) ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಪ್ರಜ್ವಲ್ ಏಪ್ರಿಲ್ 27 ರಂದು ಜರ್ಮನಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ, ಹಾಸನದಲ್ಲಿ ಚುನಾವಣೆ ನಡೆದ ಒಂದು ದಿನದ ನಂತರ ಅವರು ವಿದೇಶಕ್ಕೆ ತೆರಳಿದ್ದು, ಇಲ್ಲಿಯವರೆಗೂ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ.
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮೂಲಕ ಎಸ್‌ಐಟಿ ಮಾಡಿದ ಮನವಿಯ ಮೇರೆಗೆ ಇಂಟರ್‌ಪೋಲ್ ಈಗಾಗಲೇ ಆತನ ಇರುವಿಕೆಯ ಕುರಿತು ಮಾಹಿತಿ ಕೋರಿ 'ಬ್ಲೂ ಕಾರ್ನರ್ ನೋಟಿಸ್' ಹೊರಡಿಸಿದೆ.
ಆದಿಲ್ ಸಾವು ಲಾಕಪ್‌ಡೆತ್ ಅಲ್ಲ, ಆತನಿಗೆ ಮೂರ್ಛೆ ರೋಗ ಇತ್ತು: ಸಿಎಂ ಸಿದ್ದರಾಮಯ್ಯ
ಎಸ್‌ಐಟಿ ಸಲ್ಲಿಸಿದ ಅರ್ಜಿಯ ಮೇರೆಗೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಜ್ವಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಸಂತ್ರಸ್ತರ ಮುಖವನ್ನು ಮಸುಕುಗೊಳಿಸದೆ ಪ್ರಜ್ವಲ್ ಇರುವ ವೀಡಿಯೊಗಳನ್ನು ಪ್ರಸಾರ ಮಾಡಿದವರೂ ಅಪರಾಧ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯತೀಂದ್ರ ವಿಧಾನಪರಿಷತ್ ಸದಸ್ಯರಾಗುವ ವಿಚಾರದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ: ಸಚಿವ ಮಹದೇವಪ್ಪ