ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್‌ ಸುರ್ಜೇವಾಲಾ ಕಿಡಿ

Published : May 04, 2023, 05:35 AM IST
ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್‌ ಸುರ್ಜೇವಾಲಾ ಕಿಡಿ

ಸಾರಾಂಶ

ಬಜರಂಗ ದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ. ಕಾನೂನು ಉಲ್ಲಂಘಿಸಿ, ಹಿಂಸಾಚಾರ ಮಾಡುವ ಸಂಘಟನೆಗೆ ಹನುಮಂತನನ್ನು ಹೋಲಿಸುವ ಮೂಲಕ ಬಿಜೆಪಿಯವರು ಹನುಮಂತನಿಗೆ ಅವಮಾನ ಮಾಡಿದ್ದು, ಕೋಟ್ಯಂತರ ಹನುಮ ಭಕ್ತರಿಗೆ ನೋವುಂಟು ಮಾಡಿದ್ದಾರೆ. 

ಬೆಂಗಳೂರು (ಮೇ.04): ‘ಬಜರಂಗ ದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ. ಕಾನೂನು ಉಲ್ಲಂಘಿಸಿ, ಹಿಂಸಾಚಾರ ಮಾಡುವ ಸಂಘಟನೆಗೆ ಹನುಮಂತನನ್ನು ಹೋಲಿಸುವ ಮೂಲಕ ಬಿಜೆಪಿಯವರು ಹನುಮಂತನಿಗೆ ಅವಮಾನ ಮಾಡಿದ್ದು, ಕೋಟ್ಯಂತರ ಹನುಮ ಭಕ್ತರಿಗೆ ನೋವುಂಟು ಮಾಡಿದ್ದಾರೆ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಕ್ಷಮೆ ಕೋರಬೇಕು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಹನುಮಾನ್‌ ಚಾಲೀಸಾ ಪಠಿಸುತ್ತೇವೆ ಎನ್ನುತ್ತಿರುವ ಬಿಜೆಪಿಯವರಿಗೆ ಹನುಮಾನ್‌ ಚಾಲೀಸಾ ಪಠಣೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಚಾಲೀಸ್‌ ಪರ್ಸೆಂಟೇಜ್‌ (40 ಪರ್ಸೆಂಟ್‌ ಕಮಿಷನ್‌) ಪಡೆಯುವುದು ಮಾತ್ರ. ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ 1500 ದೇವಾಲಯ ಕೆಡವಿದೆ. ಹೀಗಿದ್ದರೂ ಈಗ ಮಾತನಾಡುತ್ತಿರುವವರು ಯಾಕೆ ಪ್ರತಿಭಟನೆ ಮಾಡಲಿಲ್ಲ?’ ಎಂದು ಕಿಡಿಕಾರಿದರು.

ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ಬಜರಂಗಿ ಸಂಘರ್ಷ: ನಿಷೇಧ ಪ್ರಸ್ತಾವಕ್ಕೆ ಪ್ರಧಾನಿ ತಿರುಗೇಟು

ಬಿಜೆಪಿಯು ಕಳೆದ 4 ವರ್ಷದಲ್ಲಿ ಅತ್ಯಂತ ಪುರಾತನ ಹನುಮ ದೇವಾಲಯಗಳನ್ನು ಕೆಡವಿದೆ. ನಂಜನಗೂಡಿನಲ್ಲಿ ಸಾವಿರಾರು ವರ್ಷ ಇತಿಹಾಸದ ಹನುಮಂತನ ದೇವಾಲಯ ಕೆಡವಿದೆ. ಇದರ ವಿರುದ್ಧ ವಿಎಚ್‌ಪಿ, ಬಜರಂಗ ದಳ ಯಾಕೆ ವಿರೋಧಿಸಲಿಲ್ಲ? ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಅವರು 2020ರಲ್ಲಿ 150 ವರ್ಷಗಳ ಹಳೆಯ ಹನುಮಂತನ ದೇವಾಲಯ ಕೆಡವಿದ್ದರು. ಇದರ ಬಗ್ಗೆ ಬಜರಂಗ ದಳ ಹೋರಾಟ ಮಾಡಿತ್ತೇ? ಆಗ ಹನುಮಾನ್‌ ಚಾಲೀಸಾ ಪಠಿಸಲಾಗಿತ್ತೇ? ಎಂದು ಪ್ರಶ್ನಿಸಿದರು.

ಮೋದಿ ಕ್ಷಮೆ ಯಾಚಿಸಲಿ: ಅಭಿವೃದ್ಧಿ ವಿಚಾರಗಳ ಚರ್ಚೆ ಬಿಟ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡುತ್ತಿರುವ ನರೇಂದ್ರ ಮೋದಿ ಅವರೇ, ಬಜರಂಗ ದಳವನ್ನು ಹನುಮಂತನಿಗೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡಬಹುದಾದ ದೊಡ್ಡ ಅಪಮಾನ ಎಂಬುದು ನಿಮಗೆ ಗೊತ್ತಿಲ್ಲವೇ? ಹನುಮಂತ ಕರ್ತವ್ಯ ನಿಷ್ಠೆ, ಸೇವೆ, ತ್ಯಾಗಕ್ಕೆ ಪ್ರತೀಕ. ಇಂತಹ ಹನುಮಂತನನ್ನು ಹಿಂಸಾಚಾರ ಮಾಡುವವರ ಜತೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡುವ ಅಗೌರವ. ಇದರಿಂದ ಕೋಟ್ಯಂತರ ಹನುಮ ಭಕ್ತರಿಗೆ ನೋವಾಗಿದೆ. ಹೀಗಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಬಜರಂಗ ದಳದವರಿಂದ ದಲಿತನ ಹತ್ಯೆ: ಚುನಾವಣೆಗಾಗಿ ಹಿಂದೂಗಳ ಬಗ್ಗೆ ಮಾತನಾಡುವ ಬಿಜೆಪಿಯವರು ದಲಿತ ಯುವಕ ದಿನೇಶ್‌ ಎಂಬಾತನನ್ನು ಬಜರಂಗ ದಳದ ಪದಾಧಿಕಾರಿಗಳು ಹಾಡಹಗಲೇ ಹತ್ಯೆ ಮಾಡಿದರೂ ಯಾಕೆ ಮಾತನಾಡಿಲ್ಲ? ಅದು ಕಾನೂನು ಉಲ್ಲಂಘನೆಯಾಗುವುದಿಲ್ಲವೇ? ಇಂತಹ ಕಾನೂನು ಹಾಗೂ ಸಂವಿಧಾನ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ತನ್ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಗುರಿ. ಹೀಗಿದ್ದರೂ ಹನುಮಂತನ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಎಂದು ಸುರ್ಜೇವಾಲಾ ಪ್ರಶ್ನಿಸಿದರು.

ಮೋದಿ ಭಗವದ್ಗೀತೆ ಓದಿಲ್ಲ: ಬಜರಂಗ ದಳದವರು ನಿಜವಾದ ಹನುಮ ಭಕ್ತರಲ್ಲ ಎಂದು ಭಾವಿಸುತ್ತೀರಾ ಎಂಬ ಪ್ರಶ್ನೆಗೆ, ಹಿಂದೂಗಳು ಎಂದರೆ ಎಲ್ಲರನ್ನೂ ಒಳಗೊಳ್ಳುವುದು ಎಂದರ್ಥ. ಮೋದಿಯವರು ಭಗವದ್ಗೀತೆ ಓದಿದ್ದರೆ ಚೆನ್ನಾಗಿರುತ್ತಿತ್ತು. ಅವರಿಗೆ ಭಗವದ್ಗೀತೆಯಲ್ಲಿ ಎಷ್ಟುಅಧ್ಯಾಯವಿದೆ ಎಂದು ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಗೊತ್ತಿದ್ದರೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಯಾರ ಬುದ್ಧಿ ಭ್ರಷ್ಟತೆಯಿಂದ ಕೂಡಿರುತ್ತದೆಯೋ ಅವರಿಗೆ ಹನುಮನ ಆಶೀರ್ವಾದ ಲಭಿಸುವುದಿಲ್ಲ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ತೆನೆ ಹೊಲದಲ್ಲಿ, ಕಮಲ ಕೊಳದಲ್ಲಿ, ಕಾಂಗ್ರೆಸ್‌ ಅಧಿಕಾರದಲ್ಲಿ: ಡಿ.ಕೆ.ಶಿವಕುಮಾರ್‌

ಬಜರಂಗದಳ ಕುರಿತ ಕಾಂಗ್ರೆಸ್‌ ಪ್ರಣಾಳಿಕೆ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ. ಬಜರಂಗದಳ ಎಂಬುದು ಒಂದು ಸಂಘಟನೆ. ಅದಕ್ಕೂ ಹನುಮನಿಗೂ ಯಾವುದೇ ಸಂಬಂಧವಿಲ್ಲ. ನಾವೂ ಕೂಡ ಹನುಮನ ಭಕ್ತರೇ. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಹನುಮಾನ್‌ ಚಾಲೀಸ ಪಠಿಸಿದರೆ ನಾವು ನಿತ್ಯವೂ ಪಠಿಸುತ್ತೇವೆ.
-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!