
ನವದೆಹಲಿ(ಜ.30): ವಿಧಾನ ಪರಿಷತ್ ಗದ್ದಲ ಹಾಗೂ ಸಭಾಪತಿ ಆಯ್ಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ವಿರುದ್ಧ ಮತ್ತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ನನ್ನ ಜಾತ್ಯತೀತತೆ ಪರೀಕ್ಷಿಸಲು ಹೋಗಿ ನಾವು ಪರಿಷತ್ ಸದಸ್ಯ ಧರ್ಮೇಗೌಡರನ್ನು ಕಳೆದುಕೊಂಡೆವು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಏನು ಸಮಸ್ಯೆ ಆಯಿತು ಅಂತ ನಾನು ಹೇಳಲ್ಲ. ಆದರೆ ಕಾಂಗ್ರೆಸ್‌ನವರು ಸಭಾಪತಿ ಹುದ್ದೆ ಕೊಟ್ಟಿರಲಿಲ್ಲ. ಸಿದ್ದರಾಮಯ್ಯ ಅವರು ಜೆಡಿಎಸ್‌ಗೆ ಸಭಾಪತಿ ಸ್ಥಾನ ಕೊಡದೆ ಅನ್ಯಾಯ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಹೇಳಿದ್ದೆ. ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದ ಹೊರಟ್ಟಿ ಅಂದು ನಾಮಪತ್ರ ವಾಪಸ್ ಪಡೆದು ತುಂಬಾ ನೊಂದಿದ್ದರು ಎಂದು ಹೇಳಿದರು.
ಇದೇ ವೇಳೆ ಸಭಾಪತಿ ಹುದ್ದೆಗಾಗಿ ಬಿಜೆಪಿ ಜತೆಗಿನ ಮೈತ್ರಿಗೆ ಸಮ್ಮತಿ ಕೊಟ್ಟಿರುವುದಾಗಿ ತಿಳಿಸಿದ ದೇವೇಗೌಡರು, ಹೊರಟ್ಟಿಯವರು ಸದನದ ಗೌರವ ಕಾಪಾಡಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಜತೆಗೆ, ಕಾಂಗ್ರೆಸ್-ಬಿಜೆಪಿ ವಿರುದ್ಧದ ಹೋರಾಟವನ್ನು ಜೆಡಿಎಸ್ ಮುಂದುವರಿಸಲಿದೆ ಎಂದೂ ತಿಳಿಸಿದರು.
ಧರ್ಮೇಗೌಡ ಆತ್ಮಹತ್ಯೆ ಕೇಸ್ : ಡಿಸಿಎಂ, ಸಚಿವರ ವಿಚಾರಣೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಜಾತ್ಯತೀತ ನಿಲುವು ಎಕ್ಸ್‌ಪೋಸ್ ಮಾಡುವುದಾಗಿ ಹೇಳಿದ್ದರು. ಆದರೆ, ಇದೇ ಕಾಂಗ್ರೆಸ್‌ನವರು ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆಗೆ ಸರ್ಕಾರ ರಚಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ನ ಜಾತ್ಯತೀತ ನಿಲುವಿಗೆ ಟಾಂಗ್ ನೀಡಿದರು ದೇವೇಗೌಡ.
ಗೋಹತ್ಯೆಗೆ ವಿರೋಧ:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆಗೆ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆಗೆ ನಮ್ಮ ವಿರೋಧ ಇದೆ. ಆರೋಪಿಗಳಿಗೆ ಏಳು ವರ್ಷ ಶಿಕ್ಷೆ, ಸಜೆ ಎಲ್ಲಾದರೂ ಉಂಟೆ? ಈ ರೀತಿಯ ಕಾನೂನು ಜನರಗೆ ಹಿಂಸೆ ಕೊಡಲಿದೆ ಎಂದರು.
ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ; ಅಗಲಿದ ಗೆಳೆಯನನ್ನು ಧರ್ಮರಾಯ ಎಂದು ಕುಮಾರಣ್ಣ ಕಣ್ಣೀರಿಟ್ಟಿದ್ದೇಕೆ..?
ರೈತರ ಪರ ನಿಲುವು ಬದಲಾಗದು
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿರುವ ಪ್ರತಿಪಕ್ಷಗಳಿಗೆ ಕೊನೇ ಕ್ಷಣದಲ್ಲಿ ಬೆಂಬಲ ವ್ಯಕ್ತಪಡಿಸಿದ ಜೆಡಿಎಸ್ ನಿಲುವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ. ಜತೆಗೆ, ರೈತರ ಪರ ನನ್ನ ನಿಲುವು ಯಾವತ್ತೂ ಬದಲಾಗಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಗುರುವಾರ ಕರೆ ಮಾಡಿದ್ದರು. ಆ ಬಳಿಕ ಸಿಪಿಎಂ, ಸಿಪಿಐ ಜೊತೆ ಚರ್ಚೆ ಮಾಡಿ ಬಹಿಷ್ಕಾರ ಕುರಿತ ತೀರ್ಮಾನ ಮಾಡಿದೆ ಎಂದ ಅವರು ರೈತರ ಪರ ನನ್ನ ನಿಲುವು ಯಾವತ್ತೂ ಬದಲಾಗಲ್ಲ. ರೈತರಿಗೆ ಯಾವತ್ತೂ ಅನ್ಯಾಯ ಆಗಬಾರದು ಎಂದು ಹೇಳಿದರು.
ಶಿವಸೇನೆ ವ್ಯರ್ಥ ಪ್ರಯತ್ನ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ಗಡಿ ವಿಚಾರ ಕೆದಕುತ್ತಿರುವುದು ವ್ಯರ್ಥ ಪ್ರಯತ್ನ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬೆಳಗಾವಿ ಸೇರಿದಂತೆ ಗಡಿ ವಿಚಾರದಲ್ಲಿ ಶಿವಸೇನೆ ಏನೇ ಮಾಡಿದರೂ ಯಾವುದೇ ಪ್ರಯೋಜನವಾಗಲ್ಲ. ಅದು ಮುಗಿದ ಅಧ್ಯಾಯ. ಅಂದಿನ ಪ್ರಧಾನಿ ಮುರಾರ್ಜಿ ದೇಸಾಯಿ ಬೆಳಗಾವಿಗೆ ಬಂದಿದ್ದಾಗಲೇ ಬೆಳಗಾವಿ ಗಡಿ ವಿವಾದ ಮುಗಿದ ಅಧ್ಯಾಯವಾಗಿದ್ದು ಚರ್ಚೆ ಬೇಡ ಎಂದಿದ್ದರು ಎಂದು ದೇವೇಗೌಡ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.