41 ಮತ ಪಡೆದು ಎಂ.ಕೆ. ಪ್ರಾಣೇಶ್ ಜಯಭೇರಿ| 24 ಮತ ಪಡೆದ ಕೊಂಡಯ್ಯ| ಮೇಲ್ಮನೆಯಲ್ಲಿ ಬಿಜೆಪಿ- ಜೆಡಿಎಸ್ ದೋಸ್ತಿ ಅಭ್ಯರ್ಥಿ ಗೆಲುವು| ಹಿರಿಯರ ಮಾರ್ಗದರ್ಶನ, ನಡಾವಳಿಗಳನ್ನು ಆಧರಿಸಿ ಕಲಾಪ ನಡೆಸುವ ಮೂಲಕ ಸದನದ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡುವುದಾಗಿ ಭರವಸೆ ನೀಡಿದ ಪ್ರಾಣೇಶ್|
ಬೆಂಗಳೂರು(ಜ.30): ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ 41 ಸದಸ್ಯರು ಎಂ.ಕೆ. ಪ್ರಾಣೇಶ್ ಅವರ ಪರವಾಗಿ ಮತ ಹಾಕಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಸಿ. ಕೊಂಡಯ್ಯ ಅವರು 24 ಮತಗಳನ್ನು ಪಡೆದುಕೊಂಡರು.
ಕಲಾಪದ ಆರಂಭದಲ್ಲಿ ಕಾಗದ ಪತ್ರಗಳ ಮಂಡನೆ, ಡಿ. 15ರಂದು ಸದನದಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಸದನ ಸಮಿತಿ ನೀಡಿದ ಮಧ್ಯಂತರ ವರದಿ ಮಂಡನೆ ನಂತರ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಉಪಸಭಾಪತಿ ಚುನಾವಣೆ ಪ್ರಕ್ರಿಯೆ ಆರಂಭಿಸಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಕ್ರಮವಾಗಿ ಎಂ.ಕೆ. ಪ್ರಾಣೇಶ್ ಮತ್ತು ಕೆ.ಸಿ. ಕೊಂಡಯ್ಯ ಅವರ ಹೆಸರನ್ನು ಉಪಸಭಾಪತಿ ಸ್ಥಾನಕ್ಕೆ ಚುನಾಯಿಸಬೇಕೆಂದು ಸೂಚಿಸಿ ಅನುಮೋದಿಸಿದರು. ಈ ಮಧ್ಯೆ ಮತ ವಿಭಜನೆ ಮಾಡಬೇಕೆಂದು ಕಾಂಗ್ರೆಸ್ ಸದಸ್ಯರು ಸಭಾಪತಿಗಳಿಗೆ ಮನವಿ ಮಾಡಿದರು. ನಂತರ ಸಭಾಪತಿಗಳು ಮತ ವಿಭಜನೆ ಪ್ರಕ್ರಿಯೆ ನಡೆಸಿ, ಎಂ.ಕೆ. ಪ್ರಾಣೇಶ್ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ವಿಧಾನ ಪರಿಷತ್‌ನಲ್ಲಿ ಅಹಿತಕರ ಘಟನೆ ಮರುಕಳಿಸಲ್ಲ: ಎಂ.ಕೆ.ಪ್ರಾಣೇಶ್
ಸದಸ್ಯರ ಅಭಿನಂದನೆ:
ಉಪಸಭಾಪತಿಯಾಗಿ ಆಯ್ಕೆಯಾದ ಎಂ.ಕೆ. ಪ್ರಾಣೇಶ್ ಅವರನ್ನು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಸದಸ್ಯರಾದ ಎಚ್. ವಿಶ್ವನಾಥ್, ಬಸವರಾಜ ಹೊರಟ್ಟಿ, ಕೆ.ಸಿ. ಕೊಂಡಯ್ಯ, ಎಂ. ನಾರಾಯಣಸ್ವಾಮಿ, ಮಹಾಂತೇಶ್ ಕವಟಗಿಮಠ, ಸುನೀಲ್ ಸುಬ್ರಮಣಿ, ಅಪ್ಪಾಜಿಗೌಡ, ಶ್ರೀಕಂಠೇಗೌಡ, ಪ್ರತಾಪಸಿಂಹ ನಾಯಕ್, ಪುಟ್ಟಣ್ಣ, ತೇಜಸ್ವಿನಿಗೌಡ ಅವರು ಅಭಿನಂದಿಸಿ, ಶುಭ ಹಾರೈಸಿದರು.
ಬಯಸದೆ ಬಂದ ಭಾಗ್ಯ
ತಮ್ಮನ್ನು ಉಪಸಭಾಪತಿಯಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದ ಹೇಳಿದ ಎಂ.ಕೆ. ಪ್ರಾಣೇಶ್, ಈವರೆಗೆ ತಮಗೆ ದೊರಕಿದ ಎಲ್ಲ ಸ್ಥಾನಮಾನಗಳು ಬಯಸದೆ ಬಂದ ಭಾಗ್ಯವಾಗಿದೆ. ಪಕ್ಷ ನಿಷ್ಠೆ ಫಲವಾಗಿ ದೊರಕಿದೆ ಎಂದು ಸ್ಮರಿಸಿಕೊಂಡರು. ಹಿರಿಯರ ಮಾರ್ಗದರ್ಶನ, ನಡಾವಳಿಗಳನ್ನು ಆಧರಿಸಿ ಕಲಾಪ ನಡೆಸುವ ಮೂಲಕ ಸದನದ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.