ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪರಿಷತ್ ಸಭಾಪತಿಯಾದ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, (ಜ.29): ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬುದು ರಾಜ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಮೈತ್ರಿ ಸರ್ಕಾರದ ಪತನದ ಬಳಿಕ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದ ಜೆಡಿಎಸ್ ನಾಯಕರು, ಇದೀಗ ತಣ್ಣಗಾಗಿದ್ದಾರೆ. ಅಲ್ಲದೇ ದಳಪತಿಗಳು ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಹೌದು... ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿಗಾಗಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ಆಡಳಿರೂಢ ಬಿಜೆಪಿ, ಜೆಡಿಎಸ್‌ಗೆ ಸಭಾಪತಿ ಬಿಟ್ಟುಕೊಟ್ಟು ತಾನು ಉಪಸಭಾಪತಿ ಕುರ್ಚಿ ಮೇಲೆ ಕುಳಿತುಕೊಂಡಿದೆ.
ಕಾಂಗ್ರೆಸ್‌ನಿಂದ ದೂರ ಉಳಿದಿದ್ಯಾಕೆ: ಬಹಿರಂಗವಾಗಿಯೇ ಕಾರಣ ಬಿಚ್ಚಿಟ್ಟ ಹಿರಿಯ ನಾಯಕ
ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಅವರು ಪರಿಷತ್ ಸಭಾಪತಿಯಾದ್ದೆ, ಬಿಜೆಪಿಯ ಪ್ರಾಣೇಶ್ ಅವರು ಉಪಸಭಾಪತಿಯಾಗಿದ್ದಾರೆ.
ಇನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದ್ದು, ನನ್ನ ಮೇಲಿನ ಅಭಿಮಾನದ ಕಾರಣದಿಂದ ವರಿಷ್ಠರು ನನ್ನನ್ನು ಸಭಾಪತಿ ಮಾಡುವ ತೀರ್ಮಾನ ಮಾಡಿದರು. ನನ್ನ ಪರವಾಗಿ ದೇವೇಗೌಡರು ಯಾವ ವಿಚಾರವನ್ನೂ ಮಾಡದೇ ಈ ತೀರ್ಮಾನ ಮಾಡಿದ್ದಾರೆ. ದೇವೇಗೌಡರು ನನ್ನ ಸಲುವಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದರು.
ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆಯ ಬಗ್ಗೆ ಮಧ್ಯಂತರ ವರದಿ ಮಂಡನೆಯಾಗಿದೆ. ನಾನಿನ್ನೂ ಆ ವರದಿಯನ್ನ ನೋಡಿಲ್ಲ. ವರದಿಯಲ್ಲಿ ನನ್ನ ಬಗ್ಗೆ ಹೇಳಲು ಸಾಧ್ಯವಿಲ್ಲ. ಅಂದು ನಾನು ನಡೆದುಕೊಂಡಿದ್ದನ್ನ ಎಲ್ಲರೂ ನೋಡಿದ್ದಾರೆ ಎಂದು ಸ್ಪಷ್ಟಪಡಿಸಿದರು.