ಅಫಜಲಪುರದಲ್ಲಿ ಸಂಧಾನ ವಿಫಲ: ಸಹೋದರರ ಕಾಳಗ, ನಾನೇ ಗೆಲ್ಲಲಿ ಆಶೀರ್ವದಿಸೆಂದು ಅಣ್ಣನ ಕಾಲಿಗೆ ಬಿದ್ದ ತಮ್ಮ!

Published : Apr 18, 2023, 04:16 PM IST
ಅಫಜಲಪುರದಲ್ಲಿ ಸಂಧಾನ ವಿಫಲ: ಸಹೋದರರ ಕಾಳಗ, ನಾನೇ ಗೆಲ್ಲಲಿ ಆಶೀರ್ವದಿಸೆಂದು ಅಣ್ಣನ ಕಾಲಿಗೆ ಬಿದ್ದ ತಮ್ಮ!

ಸಾರಾಂಶ

ಕಲಬುರಗಿ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತೇದಾರ ಸಹೋದರರ ನಡುವಿನ ಸಂಧಾನ ಮಾತುಕತೆ ವಿಫಲವಾಗಿದ್ದು,  ಕದನ ಕಣದಲ್ಲಿ ಹೋರಾಡಲಿದ್ದಾರೆ.

ವರದಿ : ಶರಣಯ್ಯ ಹಿರೇಮಠ ಕಲಬುರಗಿ

ಕಲಬುರಗಿ (ಏ.18): ಕಲಬುರಗಿ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತೇದಾರ ಸಹೋದರರ ನಡುವಿನ ಸಂಧಾನ ಮಾತುಕತೆ ವಿಫಲವಾಗಿದ್ದು, ಸಹೋದರರ ನಡುವೆ ಇಲ್ಲಿ ಮೆಘಾ ಫೈಟ್ ಶುರುವಾಗಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರೆ, ಅವರ ಸ್ವಂತ ತಮ್ಮ ನಿತಿನ್ ಗುತ್ತೇದಾರ ಈ ಬಾರಿ ಅದೇ ಅಫಜಲಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ತಮ್ಮನ ಮನೆಗೆ ಅಣ್ಣ ಭೇಟಿ:
ನಿತಿನ್ ಗುತ್ತೇದಾರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸಂಧಾನಕ್ಕಾಗಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ತನ್ನ ತಮ್ಮ ನಿತಿನ್ ಗುತ್ತೇದಾರ ಮನೆಗೆ ದೌಡಾಯಿಸಿ ಮಾತುಕತೆ ನಡೆಸಿದ್ದಾರೆ. ತಮ್ಮನಿಗೆ ಕೈ ಮುಗಿದು, ಕುಟುಂಬ ಒಡೆಯುವುದು ಬೇಡ. ಇದೊಂದು ಬಾರಿ ನನಗೆ ಅವಕಾಶ ಕೊಡು. ಮುಂದೆ ನಿನೇ ಉತ್ತರಾಧಿಕಾರಿ ಆಗುವಿ ಎಂದು ಮನವೊಲಿಸಲು ಯತ್ನಿಸಿದ್ದಾರೆ. 

ಅಣ್ಣ ಕೈ ಮುಗಿದರೆ ತಮ್ಮ ಕಾಲಿಗೆ ಬಿದ್ದ:
ನಿತಿನ್ ಗುತ್ತೇದಾರಗೆ ಅಣ್ಣ ಮಾಲೀಕಯ್ಯ ಗುತ್ತೇದಾರ ಕೈ ಮುಗಿದು ಬೆಂಬಲಿಸುವಂತೆ ಮನವಿ ಮಾಡಿಕೊಂಡರೆ, ಇತ್ತ ತಮ್ಮ ನಿತಿನ್ ಗುತ್ತೇದಾರ ಅಣ್ಣನ ಕಾಲಿಗೆ ಬಿದ್ದು, ನಾನು ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲಾಗದು. ಸಂದಾನದ ಸಮಯ ಮೀರಿ ಹೋಗಿದೆ. ಈಗೇನಿದ್ದು ಸಮರದ ಸಮಯ. ನನಗೆ ವಿಜಯಶಾಲಿ ಆಗು ಎಂದು ಆಶೀರ್ವದಿಸು ಎಂದು ಕಾಲಿಗೆ ಬಿದ್ದಿ ಬೇಡಿಕೊಳ್ಳುವ ಮೂಲಕ ಅಣ್ಣನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ನಿತಿನ್ ಗುತ್ತೇದಾರ. 

ನಾಮಪತ್ರ ಹಿಂಪಡೆಯಲು ನಿತಿನ್ ಗುತ್ತೇದಾರ ನಿರಾಕರಣೆ:
ಅಣ್ಣಾ ಮಾಲೀಕಯ್ಯ ಗುತ್ತೇದಾರ ವಿರುದ್ದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿತಿನ್ ಗುತ್ತೇದಾರ ನಾಮಪತ್ರ ವಾಪಾಸ್ ಪಡೆಯಲು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಹಾಗಾಗಿ ಅಫಜಲಪುರ ವಿಧಾನ ಸಭಾ ಚುನಾವಣಾ ಕಣದಲ್ಲಿ ಸಹೋದರರ ಸವಾಲ್ ಜೋರಾಗಿದ್ದು, ಕಣ ರಂಗೇರಿದೆ. 

ಅಣ್ಣನ ಮಾತು ನಂಬಿಯೇ ಕೆಟ್ಟೆ:
 ಮುಂದೆ ನಿನಗೆ ಭವಿಷ್ಯ ಇದೆ. ನೀನೇ ಉತ್ತರಾಧಿಕಾರಿ ಅಂತ ನನ್ನ ಅಣ್ಣ ಮಾಲೀಕಯ್ಯ ಗುತ್ತೇದಾರ ನನಗೆ ಹೇಳುತ್ತಲೇ ಇದುವರೆಗೆ ಯಾಮಾರಿಸಿದ್ದಾರೆ. ಕುದುರೆ ಮುಖದ ಮುಂದೆ ಹುಲ್ಲು ಕಟ್ಟಿದಂತೆ ನಮಗೆ ಇದುವರೆಗೆ ನಂಬಿಸುತ್ತಲೇ ಬಂದಿದ್ದಾರೆ. ಇನ್ನು ನಾನು ನಂಬೋದಿಲ್ಲ. ನನ್ನ ಭವಿಷ್ಯ ನನ್ನ ಅಣ್ಣ ಮಾಡಬೇಕಿಲ್ಲ. ಜನ ನನ್ನ ಭವಿಷ್ಯ ತೀರ್ಮಾನಿಸಲಿ ಅಂತ ಈ ನಿರ್ಣಯ ತಗೊಂಡಿದ್ದೇನೆ ಎಂದು ಸ್ವತಂತ್ರ ಅಭ್ಯರ್ಥಿ ನಿತಿನ್ ಗುತ್ತೇದಾರ ತಿಳಿಸಿದ್ದಾರೆ. ನನ್ನ ಅಣ್ಣ ನನಗೆ ನೀನೇ ಮುಂದಿನ ಉತ್ತರಾಧಿಕಾರಿ ಅಂತ ಹೇಳಿರುವ ದಾಖಲೆಗಳಿವೆ. ಸಮಯ ಬಂದಾಯ ಹೊರಗೆ ಬಿಡುವೆ ಎಂದು ನಿತಿನ್ ಗುತ್ತೇದಾರ. ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಸಾಬಿತು ಪಡಿಸಿದರೆ ರಾಜಕೀಯ ಬಿಡುವೆ:
ನಾನು ನನ್ನ ತಮ್ಮನೇ ಮುಂದಿನ ಉತ್ತರಾಧಿಕಾರಿ ಅಂತ ಹೇಳಿದ್ದು ಸತ್ಯ. ನನ್ನ ನಂತರ ಅವನೇ ಉತ್ತರಾಧಿಕಾರಿ ಅಂತ ಈಗಲೂ ಹೇಳುವೆ. ಆದ್ರೆ ಅದು 2023 ಕ್ಕೆ ಅಂತ ನಾನು ಎಲ್ಲೂ ಹೇಳಿಲ್ಲ. ಹಾಗೇನಾದ್ರೂ ಸಾಬೀತು ಮಾಡಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಕಿರಿಯ ಸಹೋದರ ನಿತಿನ್ ಗುತ್ತೇದಾರಗೆ ಅಣ್ಣ ಮಾಲೀಕಯ್ಯ ಗುತ್ತೇದಾರ ಸವಾಲು ಹಾಕಿದ್ದಾರೆ.  ನಾನು ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ಬಾರಿ ನನ್ನ ಗೆಲುವು ಖಚಿತ ಎನ್ನುವುದು ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ವಿಶ್ವಾಸದ ಮಾತು.

ಮಂಡ್ಯದಲ್ಲಿ ಹೆಚ್‌ಡಿಕೆ ಸೋಲಿಸಲು ಮೆಗಾ ಪ್ಲಾನ್: ಸುಮಲತಾ-ರಮ್ಯಾ ಕಣಕ್ಕೆ, ದಳಪತಿಗಳಿಗೆ ವಿರೋಧಿಗಳ ಶಾಕ್!

ಅತೃಪ್ತರ ಬಲ ನಿತಿನ್ ಗೆ:
ಕಾಂಗ್ರೆಸ್ ನಿಂದ ಹಾಲಿ‌ ಶಾಸಕ ಎಂ.ವೈ ಪಾಟೀಲ್ ಮತ್ತೆ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಸಾಕಷ್ಟು ಜನ ಬೇಸರಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಟಿಕೆಟ್ ವಂಚಿತ ಅತೃಪ್ತರು ಇದೀಗ ಸ್ವತಂತ್ರ ಅಭ್ಯರ್ಥಿ ನಿತಿನ್ ಗುತ್ತೇದಾರ ಪರ ಗುರುತಿಸಿಕೊಳ್ಳುತ್ತಿದ್ದಾರೆ.

ಬಿಜೆಪಿಯಲ್ಲಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ್ ನೇರ ಕಾರಣ, ಶೆಟ್ಟರ್ ಗಂಭೀರ

ಸೈಕಲ್ ಏರಿದ ಆರ್.ಡಿ ಪಾಟೀಲ್:
ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರ್.ಡಿ ಪಾಟೀಲ್ , ಜೈಲಿನಲ್ಲಿದ್ದೇ ಅಫಜಲಪುರ ವಿಧಾನ ಸಭಾ ಚುನಾವಣಾ ಕಣಕ್ಕೆ ದುಮುಕಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು, ಪೊಲೀಸ್ ಬೆಂಗಾವಲಿನೊಂದಿಗೆ ಅಫಜಲಪುರ ಚುನಾವಣಾಧಿಕಾರಿ ಕಛೇರಿಗೆ ಆಗಮಿಸಿ ತಮ್ಮ ಉಮೇದಯವಾರಿಕೆ ಸಲ್ಲಿಸಿದ್ದಾರೆ. ಈ ಕ್ಷೇತ್ರದ ಬಲಿಷ್ಟ ಕಬ್ಬಲಿಗ ಸಮುದಾಯದ ಆರ್.ಡಿ ಪಾಟೀಲ್, ನಾಮಪತ್ರ ಸಲ್ಲಿಕೆ ವೇಳೆ ಸಹಸ್ರಾರು ಜನ ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಶಿವಕುಮಾರ ಸಹ ಕಬ್ಬಲಿಗ ಸಮುದಾಯದವರಾಗಿದ್ದು, ಅಫಜಲಪುರ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!